Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಬೆಂಗಳೂರು:ಗೃಹ ಪ್ರವೇಶಕ್ಕೆ ಏಳೇ ದಿನ ಬಾಕಿ-ಜೆಸಿಬಿ ಯಂತ್ರಗಳು ಮನೆ ಮೇಲೆ ಪ್ರಹಾರ

ಬೆಂಗಳೂರು: ಸುಣ್ಣ ಬಣ್ಣ ಹೊಡೆಸಿಕೊಂಡ ಆ ಮನೆ ಮದುವಣಗಿತ್ತಿಯಂತೆ ಕಂಗೊಳಿಸುತ್ತಿತ್ತು.  ಮೂರು ಅಂತಸ್ತಿನ ಆ ಮನೆಯ ಗೃಹಪ್ರವೇಶಕ್ಕೆ ಒಂದು ವಾರ ಮಾತ್ರ ಬಾಕಿ ಇತ್ತು.  ಅದಕ್ಕಾಗಿ ಕುಟುಂಬಸ್ಥರು ಸಕಲ ಸಿದ್ಧತೆ ನಡೆಸಿದ್ದರು. ಗುರುವಾರ ಮಧ್ಯಾಹ್ನದ (ಏಪ್ರಿಲ್‌ 16)  ವೇಳೆಗೆ ಜೆಸಿಬಿ ಯಂತ್ರಗಳು ಮನೆ ಮೇಲೆ ಪ್ರಹಾರ ನಡೆಸಿದವು. ಕೆಲವೇ ಕ್ಷಣಗಳಲ್ಲಿ ಮನೆ ವಿರೂಪಗೊಂಡಿತು.

ಕನಸಿನ ಸೌಧ ಕಣ್ಣೆದುರೇ ಕುಸಿಯುತ್ತಿರುವುದನ್ನು ಕಂಡ ವಾಸುದೇವನ್‌ ಹಾಗೂ ತಂಗಂಪುಷ್ಪ  ದಂಪತಿ ಆಘಾತಕ್ಕೊಳಗಾದರು.

‘ನಾವು ಸರ್ಕಾರಿ ಭೂಮಿ ಒತ್ತುವರಿ ಮಾಡಿಲ್ಲ. ಲಕ್ಷಾಂತರ ರೂಪಾಯಿ ನೀಡಿ ಖರೀದಿ ಮಾಡಿದ್ದೇವೆ. ಎಲ್ಲ ದಾಖಲೆಗಳು ಇವೆ. ಈ ದಾಖಲೆಗಳನ್ನು ಪರಿಶೀಲಿಸಿ. ತಪ್ಪು ಮಾಡಿದ್ದರೆ ನಮ್ಮನ್ನು ಗಲ್ಲಿಗೇರಿಸಿ’ ಎಂದು ದಂಪತಿ ಮನವಿ ಮಾಡಿಕೊಂಡರೂ ಪ್ರಯೋಜನಕ್ಕೆ ಬರಲಿಲ್ಲ. ಅಧಿಕಾರಿಗಳ ತಂಡ ಕಾರ್ಯಾಚರಣೆ ಮುಂದುವರಿಸಿತು.  ಹೈಕೋರ್ಟ್‌ ನೀಡಿದ ತಡೆಯಾಜ್ಞೆ ಈಗ ಕುಟುಂಬಕ್ಕೆ ಕೊಂಚ ನೆಮ್ಮದಿ ತಂದಿದೆ.

ವಾಸುದೇವನ್‌ ಕೇರಳದವರು. 1979ರಲ್ಲಿ ಬೆಂಗಳೂರಿಗೆ ಬಂದರು. 1989ರಲ್ಲಿ ಬೀರ ಸಂಜೀವಪ್ಪ ಅವರಿಂದ  ನಿವೇಶನ ಖರೀದಿಸಿದರು. ನಿವೇಶನಕ್ಕಿಂತ 5 ಅಡಿ ದೂರದಲ್ಲಿ ಗಡಿ ಗುರುತು ಇತ್ತು. ಕೆರೆಯಿಂದ ಸಾಕಷ್ಟು ದೂರದಲ್ಲಿ ಜಾಗ ಇದ್ದುದರಿಂದ ಸಂಶಯ ಬರಲಿಲ್ಲ. ಎಲ್ಲ ದಾಖಲೆಗಳು ಪಕ್ಕಾ ಇದ್ದವು.

1990ರಲ್ಲಿ ಈ ಜಾಗದಲ್ಲಿ ದಂಪತಿ ಪುಟ್ಟ ಮನೆ ಕಟ್ಟಿಸಿದರು. 25 ವರ್ಷಗಳ ದುಡಿತ ಬೇಸರ ತರಿಸಿತ್ತು. ದೊಡ್ಡ ಮನೆ ಕಟ್ಟಿಸಿ ಬಾಡಿಗೆ ಕೊಟ್ಟು ನೆಮ್ಮದಿಯಿಂದ ಇರೋಣ ಎಂದು ದಂಪತಿ ಯೋಜಿಸಿದರು. 2013ರ ಅಂತ್ಯದಲ್ಲಿ ಮೂರು ಮಹಡಿಯ ಮನೆ ಕಟ್ಟಿಸಲು ಸಿದ್ಧತೆ ನಡೆಸಿದರು. ಬ್ಯಾಂಕ್‌ನಿಂದ ₨30 ಲಕ್ಷ ಸಾಲ ಪಡೆದರು. ಮನೆಯ ಚಿನ್ನ ಅಡವಿಟ್ಟು ₨7 ಲಕ್ಷ ಸಾಲ ತಂದರು. ಬಂಧುಗಳು ಹಾಗೂ ಸ್ನೇಹಿತರಿಂದ ₨10 ಲಕ್ಷ ಕೈ ಸಾಲ ತಂದು ಮನೆಯನ್ನು ಪೂರ್ಣಗೊಳಿಸಿದರು. ಏಪ್ರಿಲ್‌ ಅಂತ್ಯದಲ್ಲಿ ಮನೆಯ ಗೃಹಪ್ರವೇಶ ನಡೆಸಬೇಕು ಎಂದು ದಿನ ನಿಗದಿ ಮಾಡಿದ್ದರು.

2014ರ ಅಂತ್ಯದಲ್ಲಿ ಇವರ ನೆಮ್ಮದಿಗೆ ಭಂಗ ತರುವ ಘಟನೆಗಳು ಶುರುವಾದವು. ‘ಸಾರಕ್ಕಿ ಕೆರೆಯನ್ನು ನಾಲ್ಕು ಅಡಿ ಒತ್ತುವರಿ ಮಾಡಿದ್ದೀರಿ. ಇದನ್ನು ತೆರವು ಮಾಡಿ’ ಎಂದು ಅಧಿಕಾರಿಗಳು ನೋಟಿಸ್‌ ನೀಡಿದರು. ‘ನಾವು ಒತ್ತುವರಿ ಮಾಡಿಲ್ಲ. ಗಡಿ ಗುರುತು ಇಲ್ಲಿದೆ’ ಎಂದು ಅಧಿಕಾರಿಗಳಿಗೆ ದಂಪತಿ ತೋರಿಸಿದರು. ‘ನಾಲ್ಕು ಅಡಿಯನ್ನು ತೆರವು ಮಾಡಲೇಬೇಕು’ ಎಂದು ಅಧಿಕಾರಿಗಳು ಸೂಚಿಸಿದರು.
ಏಪ್ರಿಲ್‌ 15ರಂದು ಅಧಿಕಾರಿಗಳು ಮತ್ತೊಮ್ಮೆ ಸರ್ವೆ ನಡೆಸಿ ಒತ್ತುವರಿ ಪ್ರಮಾಣ ಅಂದಾಜಿಸಿದರು. ಅವರು ಹಾಕಿದ ಗುರುತಿನ ಪ್ರಕಾರ ಮುಕ್ಕಾಲು ಭಾಗ ಮನೆ ನೆಲಸಮವಾಗಲಿತ್ತು. ಇದನ್ನು ಕಂಡು ದಂಪತಿ ಕಂಗಾಲಾದರು. ಮರುದಿನವೇ ಕಾರ್ಯಾಚರಣೆ ಆರಂಭವಾಯಿತು. ಮನೆಯ ಒಂದು ಭಾಗ ಹಾನಿಗೀಡಾಗಿದೆ.

‘ನಾವು ಸರ್ಕಾರಿ ಭೂಮಿ ಒತ್ತುವರಿ ಮಾಡಿಲ್ಲ. ಅಧಿಕಾರಿಗಳ ತಪ್ಪು ಲೆಕ್ಕಾಚಾರದಿಂದ ಮನೆಗೆ ಹಾನಿಯಾಗಿದೆ. ಇದಕ್ಕೆ ಸರ್ಕಾರ ಪರಿಹಾರ ನೀಡಬೇಕು. ಇಲ್ಲದಿದ್ದರೆ ಆಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ’ ಎಂದು ವಾಸುದೇವನ್‌ ಎಚ್ಚರಿಸಿದರು.

‘25 ವರ್ಷಗಳಿಂದ ಕೂಡಿಟ್ಟ ಹಣವನ್ನೆಲ್ಲ ಮನೆಗೆ ಸುರಿದಿದ್ದೇನೆ. ₨50 ಲಕ್ಷ ಸಾಲ ಮಾಡಿದ್ದೇನೆ. ಕನಸು ಭಗ್ನಗೊಂಡಿದೆ. ಇಂತಹ ಸ್ಥಿತಿಯಲ್ಲಿ ಬದುಕಿ ಏನು ಪ್ರಯೋಜನ’ ಎಂದು ಅವರು ಅಳಲು ತೋಡಿಕೊಂಡರು.

No Comments

Leave A Comment