Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಜೆಡಿಎಸ್‌ ಒಗ್ಗಟ್ಟು ಪ್ರದರ್ಶನ ರಾಮನಗರದಲ್ಲಿ ಬೃಹತ್‌ ಸಮಾವೇಶ

ರಾಮನಗರ: ರಾಜ್ಯದಲ್ಲಿ ಜೆಡಿಎಸ್‌ ಮುಳುಗುವ ಹಡಗು ಎಂದು ಟೀಕೆ ಮಾಡುತ್ತಿದ್ದವರಿಗೆ ರಾಮನಗರದಲ್ಲಿ ಸೋಮವಾರ ನಡೆದ ಸಮಾವೇಶ ಹಾಗೂ ಸದಸ್ಯತ್ವ ಅಭಿಯಾನ ಉತ್ತರ ನೀಡಿತು. ಅಲ್ಲದೇ, ಸಮಾವೇಶದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನ ಪಾಲ್ಗೊಂಡು ಜೆಡಿಎಸ್‌ನ ಶಕ್ತಿ ಪ್ರದರ್ಶನ ಮಾಡಿದರು. ಈ ನಡುವೆ ಜೆಡಿಎಸ್‌ನಿಂದ ದೂರವಾಗುತ್ತಿದ್ದಾರೆ ಎಂದು ಸುದ್ದಿಯಲ್ಲಿರುವ ಶಾಸಕರು ಸಹ ಸಮಾವೇಶದಲ್ಲಿ  ಪಾಲ್ಗೊಂಡು ಒಗ್ಗಟ್ಟು  ಪ್ರದರ್ಶಿಸಿದರು.

ಚಾಲನೆ: ಪ್ರಥಮವಾಗಿ ಮಹಿಳೆಯರಿಬ್ಬರಿಂದ ನೋಂದಣಿ ಮಾಡಿಸುವ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡರು ಚಾಲನೆ ನೀಡಿದರು. ಇದೇ ವೇಳೆ ಜಿಲ್ಲಾದ್ಯಂತದಿಂದ ಆಗಮಿಸಿದ್ದ ದೊಡ್ಡ ಯುವಪಡೆ ಸದಸ್ಯತ್ವಕ್ಕಾಗಿ 5 ರೂ. ಶುಲ್ಕ ಕಟ್ಟಿ ನೋಂದಣಿ ಮಾಡಿಸಿಕೊಂಡಿತು.

ಭಿನ್ನಮತೀಯರು ಭಾಗಿ: ಭಿನ್ನಮತೀಯರೆಂದೇ ಬಿಂಬಿತರಾಗಿದ್ದ  ಶಾಸಕ ರಾದ ಎಚ್‌.ಸಿ. ಬಾಲಕೃಷ್ಣ, ಚೆಲುವರಾಯಸ್ವಾಮಿ, ಮಲ್ಲಿಕಾರ್ಜುನ ಖೂಬಾ ಕೂಡಾ ದೇವೇಗೌಡ ಹಾಗೂ ಕುಮಾರಸ್ವಾಮಿ ಜತೆ ವೇದಿಕೆ ಹಂಚಿಕೊಂಡು ಒಗ್ಗಟ್ಟು ಪ್ರದರ್ಶಿಸಿದರು.  ಇನ್ನೊಬ್ಬ ಶಾಸಕ ಜಮೀರ್‌ ಅಹಮದ್‌ ತನ್ನ ಕುಟುಂಬದ ಜತೆ ಧಾರ್ಮಿಕ ಕ್ಷೇತ್ರವೊಂದಕ್ಕೆ ಹೋಗಿರುವುದರಿಂದ ಅವರು ಗೈರಾಗಿದ್ದರು. ಆದರೆ  ಈ ವಿಷಯವನ್ನು ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಿಗೆ ಹೇಳಿಯೇ ಹೋಗಿದ್ದಾರೆ ಎಂಬುದನ್ನು ಕುಮಾರಸ್ವಾಮಿ ತನ್ನ ಭಾಷಣದಲ್ಲಿ ತಿಳಿಸಿದರು.

ಈ ಸಮಾವೇಶವನ್ನು ಮಾ. 1ರಂದೇ ಆಯೋಜಿಸಬೇಕಿತ್ತು. ಆದರೆ ಅಂದು ಶಾಸಕ ಬಾಲಕೃಷ್ಣರ ಹುಟ್ಟುಹಬ್ಬವಿತ್ತು.   ಹೀಗಾಗಿ ಮಾ. 1ರ ಬದಲಾಗಿ ಮಾ. 2ಕ್ಕೆ
ಹಮ್ಮಿಕೊಂಡಿರುವುದಾಗಿ ಕುಮಾರಸ್ವಾಮಿ ತಿಳಿಸಿದ್ದು, ಪಕ್ಷಕ್ಕೆ ಬಾಲಕೃಷ್ಣ ಅವರು ಪ್ರಸ್ತುತ ಎಂಬುದು ಪ್ರಕಟಗೊಂಡಂತಾಯಿತು.

ಎಚ್‌ಡಿಕೆಗೆ ಬಲ: ರಾಜ್ಯದಲ್ಲಿ  ಜೆಡಿಎಸ್‌ ಪಕ್ಷವನ್ನು ಪುನರ್‌ ಸಂಘಟಿಸಲು ಪಣ ತೊಟ್ಟಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಗೆ ರಾಮನಗರದಲ್ಲಿ ನಡೆದ ಸಮಾವೇಶ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಯಿತು. ಪಕ್ಷವನ್ನು ಮತ್ತೆ ಸಂಘಟಿಸಿ ಅಧಿಕಾರಕ್ಕೆ ತಂದೇ ತರುತ್ತೇವೆ. ಜನತೆ ನಮ್ಮನ್ನು ಕೈಬಿಡುವುದಿಲ್ಲ ಎಂದು ಪಕ್ಷದ ಮುಖಂಡರೆಲ್ಲರೂ ಒಗ್ಗಟ್ಟಿನಿಂದ ಒಕ್ಕೊರಲ ಪಣ ತೊಟ್ಟಿದ್ದು ವಿಶೇಷ. ರಾಜ್ಯಾದ್ಯಂತ 1 ಕೋಟಿ ಸದಸ್ಯತ್ವವನ್ನು ಮಾಡಿಸಲು ಸಮಾವೇಶದಲ್ಲಿ ನಿರ್ಧರಿಸಲಾಯಿತು.

ಭಿನ್ನಮತ ಇಲ್ಲವೇ ಇಲ್ಲ
ಜೆಡಿಎಸ್‌ನಲ್ಲಿ ಭಿನ್ನಮತವೇ ಇಲ್ಲ.ಎಲ್ಲಿದೆ ನೋಡಿ ಭಿನ್ನಮತ. ಎಲ್ಲರೂ ಒಗ್ಗಟ್ಟಾಗಿ ವೇದಿಕೆ ಮೇಲೆ ಇಲ್ಲವೇ?  ಜಮೀರ್‌ ಅಹಮದ್‌ ತನ್ನ ಕುಟುಂಬದೊಂದಿಗೆ ಧಾರ್ಮಿಕ ಕ್ಷೇತ್ರಕ್ಕೆ ಹೋಗಿದ್ದಾರೆ. ಉಳಿ ದವರೆಲ್ಲರೂ ವೇದಿಕೆಯಲ್ಲಿದ್ದೇವೆ. ನಾವೆ ಲ್ಲರೂ ಒಂದೇ ತಾಯಿಯ ಮಕ್ಕಳಂತಿ ದ್ದೇವೆ. ರಾಜ್ಯದಲ್ಲಿ ಜೆಡಿಎಸ್‌ ಪಕ್ಷದ ಭವಿಷ್ಯದ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಪ್ರತಿ ಜಿಲ್ಲೆಯಲ್ಲೂ ಸಮಾವೇಶವನ್ನು ಆಯೋಜಿಸಲಾಗುವುದು. ವಿರೋಧಿಗಳಿಗೆ ಉತ್ತರ ನೀಡುತ್ತೇವೆ.
ಎಚ್‌.ಡಿ. ಕುಮಾರಸ್ವಾಮಿ,
ಜೆಡಿಎಸ್‌ ರಾಜ್ಯಾಧ್ಯಕ್ಷ,

ನನ್ನ ಅನಂತರವೂ ಪಕ್ಷ ಉಳಿಸಿ
ಜೆಡಿಎಸ್‌ ಕಾರ್ಯಕರ್ತರ ಆಸ್ತಿ. ದೇವೇ ಗೌಡರ ಕುಟುಂಬದ ಸೊತ್ತಲ್ಲ. ಪಕ್ಷದ ಮುಖಂಡರು ಮನಸ್ಸು ಮಾಡಿದರೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬಹುದು. ಜನತೆ ಜೆಡಿಎಸ್‌ನ್ನು ಕೈಬಿಡುವುದಿಲ್ಲ. ನನ್ನ ಅನಂತರವೂ ಪಕ್ಷವನ್ನು ಉಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ.
ಎಚ್‌.ಡಿ.ದೇವೇಗೌಡ,
ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ

 

No Comments

Leave A Comment