Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಬೆಂಗಳೂರು/ವಿಜಯಪುರ: ಎಚ್1ಎನ್1 ರುದ್ರನರ್ತನ

ಬೆಂಗಳೂರು/ವಿಜಯಪುರ: ರಾಜ್ಯದಲ್ಲಿ ಎಚ್ 1ಎನ್1 ಜ್ವರ ವ್ಯಾಪಿಸುತ್ತಿದ್ದು, ವಿಜಯಪುರದ ಸೈನಿಕ ಶಾಲೆಯಲ್ಲಿ 7 ವಿದ್ಯಾರ್ಥಿಗಳಿಗೆ ಸೋಂಕುತಗುಲಿರುವುದು ದೃಢಪಟ್ಟಿದೆ. ಈ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಾಲೆಗೆ ಒಂದು ವಾರ ರಜೆ ನೀಡಲಾಗಿದೆ. ಇದೇ ವೇಳೆ ಎಚ್1ಎನ್1 ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸುವ ವೈದ್ಯರ ವಿರುದ್ಧ  ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಎಚ್ಚರಿಕೆ ನೀಡಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಎಚ್1ಎನ್1 ಸೋಂಕು ತಗುಲಿದ ರೋಗಿಯೊಬ್ಬರು ಮೃತಪಟ್ಟ ಆರೋಪದ ಹಿನ್ನೆಲೆಯಲ್ಲಿ ಅವರು ಈ ಎಚ್ಚರಿಕೆ ನೀಡಿದ್ದಾರೆ. ಮಕ್ಕಳಿಗೆ ಸೋಂಕು ವಿಜಯಪುರದಲ್ಲಿರುವ ಸೈನಿಕ ಶಾಲೆಯ 7 ಮಕ್ಕಳಲ್ಲಿ ಎಚ್1ಎನ್1 ಸೋಂಕು ಕಾಣಿಸಿಕೊಂಡಿದೆ.

ಐದಾರು ದಿನಗಳ ಹಿಂದೆಯೇ  ಜ್ವರ ಕಾಣಿಸಿಕೊಂಡಿದ್ದರಿಂದ, ಈ ಮಕ್ಕಳ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಮಂಗಳೂರಿಗೆ ಕಳುಹಿಸಲಾಗಿತ್ತು. ಇದೀಗ ವರದಿ ಬಂದಿದ್ದು, ಇವರಲ್ಲಿ ಎಚ್1ಎನ್1 ಇರುವುದು ಪತ್ತೆಯಾಗಿದೆ. ಅದೃಷ್ಟವಶಾತ್ ರೋಗದ ಆರಂಭದ ಸಮಯದಲ್ಲೇ ಶಾಲೆಯವರು ಎಚ್ಚರಿಕೆ ವಹಿಸಿದ್ದರಿಂದ ಈ ಎಲ್ಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಇವರಲ್ಲಿ ಬೀದರ್‍ನ ಒಬ್ಬ ವಿದ್ಯಾರ್ಥಿ ಸಂಪೂರ್ಣ ಗುಣಮುಖನಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಸದ್ಯ ಈತ ಬೀದರ್‍ನ ಮನೆಯಲ್ಲಿದ್ದು, ಉಳಿದ ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ. ರಜೆ ಘೋಷಣೆ ಎಚ್1ಎನ್1 ಇತರ ಮಕ್ಕಳಿಗೆ ಹರಡದಂತೆ ಮುಂಜಾಗ್ರತೆ ಕ್ರಮವಾಗಿ ಸೈನಿಕ ಶಾಲೆಗೆ ಒಂದು ವಾರದವರೆಗೆ ರಜೆ ಘೋಷಿಸಲಾಗಿದೆ. 6 ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ರಜೆ ನೀಡಲಾಗಿದೆ. 11 ರಿಂದ 12ನೇ ವರ್ಗದ ಮಕ್ಕಳಿಗೆ ಪರೀಕ್ಷೆ ಇರುವುದರಿಂದಾಗಿ ಈ ಎರಡು ವರ್ಗಗಳಿಗೆ ರಜೆ ನೀಡಿಲ್ಲ. ಮಕ್ಕಳ ಆರೋಗ್ಯದ ಬಗ್ಗೆ ತಮ್ಮ ಶಾಲೆಯಲ್ಲಿ ಹೆಚ್ಚಿನಕಾಳಜಿ ವಹಿಸಲಾಗಿದೆ. ಮಕ್ಕಳಲ್ಲಿ ಎಚ್1ಎನ್1 ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಏಕೆಂದರೆ ಇಲ್ಲಿನ ಮಕ್ಕಳು ಹೊರಗಡೆ ಹೋಗುವುದಿಲ್ಲ. ನವರಸಪುರ ಉತ್ಸವದಲ್ಲೂ ಭಾಗವಹಿಸಿಲ್ಲ. ಸೈನಿಕ ಶಾಲೆಯ ಆವರಣದಲ್ಲಿ ಹೆಲಿಕಾಪ್ಟರ್ ರೈಡಿಂಗ್ ಇದ್ದರೂ ಮಕ್ಕಳು ಹೆಲಿಕಾಪ್ಟರ್ ರೈಡಿಂಗ್‍ಗಾಗಿ ತೆರಳಿಲ್ಲ. ಮಕ್ಕಳ ಆರೋಗ್ಯದ ಸುರಕ್ಷತೆ ದೃಷ್ಟಿಯಿಂದ ಶಾಲೆಗೆ ಮುಂದಿನ ಸೋಮವಾರದವರೆಗೆ ರಜೆ ನೀಡಲಾಗಿದೆ.

ರಾಜೀವ್‍ಗಾಂಧಿ  ಆಸ್ಪತ್ರೆಯಲ್ಲಿ ಮೃತಪಟ್ಟಿರುವ ವ್ಯಕ್ತಿಯ ಸಾವಿಗೆ ಆಸ್ಪತ್ರೆಯ ವೈದ್ಯರು ಅಥವಾ ಸಿಬ್ಬಂದಿ ಕಾರಣರಾಗಿದ್ದರೆ ಅಥವಾ ಯಾವುದೇ ಪ್ರಕರಣಗಳಲ್ಲಿ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡದ ವೈದ್ಯರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು.

-ಸಿದ್ದರಾಮಯ್ಯ, ಮುಖ್ಯಮಂತ್ರಿ

ಎಚ್1ಎನ್1 ಹಿನ್ನೆಲೆಯಲ್ಲಿ ವಿಜಯಪುರದ ಶಾಲಾ ಮಕ್ಕಳಿಗೆ ರಜೆ ಘೋಷಿಸಿರುವ ಬಗ್ಗೆ ಮಾಹಿತಿ ಇಲ್ಲ. ಇದುವರೆಗೆ ರಾಜ್ಯದಲ್ಲಿ ಯಾವ ಮಕ್ಕಳಲ್ಲೂ ಈಸೋಂಕು ಕಾಣಿಸಿಕೊಂಡಿಲ್ಲ. ಈ ಬಗ್ಗೆ ವಿಚಾರಿಸಿ ಕ್ರಮ ಕೈಗೊಳ್ಳುತ್ತೇನೆ.

– ಯು.ಟಿ.ಖಾದರ್,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ

No Comments

Leave A Comment