Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಕರಾವಳಿಯ ಮೀನುಗಾರರು ನಿಜವಾದ ಹೀರೊಗಳು : ನಟ ದರ್ಶನ್‌

ಮಲ್ಪೆ : ನಮ್ಮದೇನಿದ್ದರೂ ಬರೀ ನಟನೆಯಷ್ಟೆ. ಆದರೆ ಕರಾವಳಿಯ ಮೀನುಗಾರರು ಹಾಗಲ್ಲ. ಮಳೆ ಇರಲಿ, ಬಿರುಗಾಳಿಯಿರಲಿ ಸಮುದ್ರ ಎಂಬ ಯುದ್ಧಭೂಮಿಯಲ್ಲಿ ಜೀವದ ಹಂಗು ತೊರೆದು ಸಮುದ್ರದಲೆಗಳೊಡನೆ ಸೆಣಸಾಡಿ ಬದುಕು ಸಾಗಿಸುವ ನಿಜವಾದ ಹೀರೋಗಳು ಎಂದು ಕನ್ನಡ ಚಿತ್ರರಂಗದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹೇಳಿದರು.
ಅವರು ರವಿವಾರ ಮಲ್ಪೆ ಬೀಚ್‌ ನಲ್ಲಿ ಆರ್‌.ಡಿ. ಮೆಂಡನ್‌ ವೇದಿಕೆಯಲ್ಲಿ ನಡೆದ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ನ ವಜ್ರ ಮಹೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸಮ್ಮಾನ ಸ್ವೀಕರಿಸಿ ಮಾತನಾಡಿದರು.

ಬೇಡಿಕೆಗೆ ಒತ್ತಡ: ಡಾ| ಜಿ. ಶಂಕರ್‌ತೆಂಗಿನ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ| ಜಿ. ಶಂಕರ್‌ ಅವರು ಮೀನುಗಾರರ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಿ ಸರಕಾರದ ಮುಖೇನ ಅನೇಕ ಸವಲತ್ತುಗಳನ್ನು ಮೀನುಗಾರರಿಗೆ ದೊರಕಿಸಿಕೊಡುವಲ್ಲಿ ಫೆಡರೇಶನ್‌ ಸಫಲವಾಗಿದೆ. ಮೀನುಗಾರರ ಕೆಲವೊಂದು ಬೇಡಿಕೆಗಳ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿದೆ. ಇದು ಈಡೇರಲು ಎಲ್ಲ ನಾಯಕರು ಪ್ರಯತ್ನಿಸಬೇಕು ಎಂದರು.

ಮೀನು ಮಾರಾಟ ಫೆಡರೇಶನ್‌ನ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕರಾದ ಕೆ.ರಘುಪತಿ ಭಟ್‌, ಲಾಲಾಜಿ ಆರ್‌.ಮೆಂಡನ್‌, ಅವಿಭಜಿತ ಬಂಟರ ಸಂಘದ ಅಧ್ಯಕ್ಷ ಅಜಿತ್‌ ಕುಮಾರ್‌ ರೈ ಮಾಲಾಡಿ, ಉಡುಪಿ ನಗರಸಭಾ ಅಧ್ಯಕ್ಷ ಯುವರಾಜ್‌, ಮೀನುಗಾರರ ಸಂಘದ ಅಧ್ಯಕ್ಷ ಎಚ್‌.ಟಿ. ಕಿದಿಯೂರು, ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್‌ ನಾಯಕ್‌, ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ಸದಾನಂದ ಬಳ್ಕೂರು, ನಗರಸಭಾ ಸದಸ್ಯರಾದ ಪ್ರಶಾಂತ್‌ ಅಮೀನ್‌, ವಿಜಯ ಕುಂದರ್‌, ಉಡುಪಿ ತಾಲೂಕು ಹಸಿ ಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್‌. ಸಾಲ್ಯಾನ್‌ ಉಪಸ್ಥಿತರಿದ್ದರು.

ಫೆಡರೇಶನ್‌ ಸಂಸ್ಥೆಯಲ್ಲಿ ಕೆಲಕಾಲ ವ್ಯವಸ್ಥಾಪನ ನಿರ್ದೇಶಕ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಹೊಂದಿದ ಮೀನುಗಾರಿಕಾ ಉಪನಿರ್ದೇಶಕ ಸುರೇಶ್‌ ಕುಮಾರ್‌ ಅವರನ್ನು ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಡೆದ ವಿವಿಧ ಕ್ರೀಡಾ ಸ್ಪರ್ಧೆಗಳ ಬಹುಮಾನವನ್ನು ವಿತರಿಸಲಾಯಿತು. ಫೆಡರೇಶನಿನ ನಿರ್ದೇಶಕ ರಾಮಚಂದ್ರ ಕುಂದರ್‌ ಸ್ವಾಗತಿಸಿದರು. ಚಂದ್ರೇಶ್‌ ಪಿತ್ರೋಡಿ ಮತ್ತು ಸತೀಶ್‌ಚಂದ್ರ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು.

ಜನಸಾಗರ
ಮಲ್ಪೆ ಬೀಚ್‌ನಲ್ಲಿ ಸಾಗರದೆದರು ಜನಸಾಗರವೇ ಕಾಣುತ್ತಿತ್ತು. ಬೀಚ್‌ ಉತ್ಸವ ನೋಡಲು ಜನ ತಂಡೋಪತಂಡವಾಗಿ ಬಂದಿದ್ದರು. ಬೆಳಗ್ಗಿನಿಂದ ಸಂಜೆವರೆಗೆ ಬೀಚ್‌ವಾಲಿಬಾಲ್‌, ತ್ರೋಬಾಲ್‌, ಕಬಡ್ಡಿ, ಹಗ್ಗಜಗ್ಗಾಟ, ಈಜು ಸ್ಪರ್ಧೆ, ಮರಳು ಶಿಲ್ಪ ರಚನೆ, ಬೈಕ್‌ಸ್ಟಂಟ್‌, ಚಿತ್ರಬಿಡಿಸುವ ಸ್ಪರ್ಧೆ, ಶ್ವಾನ ಪ್ರದರ್ಶನ, ಸಾಂಪ್ರದಾಯಿಕ ಕೈರಂಫಣಿ ಮೀನುಗಾರಿಕೆ ಪ್ರದರ್ಶನ, ಗಾಳಿಪಟ ಪ್ರದರ್ಶನಗಳು ನಡೆದಿದ್ದು ನೋಡುಗರ ಮನಸೂರೆಗೊಂಡಿತು.

ಅಭಿಮಾನಿಗಳ ನೂಕು ನುಗ್ಗಲು 
ಚಾಲೆಜಿಂಗ್‌ ಸ್ಟಾರ್‌ ದರ್ಶನ್‌ ಅವರು ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗನ್ನು ತಂದಿದೆ. ತಮ್ಮ ನೆಚ್ಚಿನ ನಟನ ದರ್ಶನಕ್ಕಾಗಿ ಅಲ್ಲಿನ ಸಾವಿರಾರು ಮಂದಿ ಗಂಟೆಗಟ್ಟಲೆ ಕಾದು ಕುಳಿತಿದ್ದರು. ಹೊರಜಿಲ್ಲೆಯ ದರ್ಶನ್‌ ಅಭಿಮಾನಿಗಳು ದರ್ಶನ್‌ ವೇದಿಕೆಯತ್ತ ಬರುತ್ತಲೇ ಕೇಕೆ ಹಾಕುತ್ತಾ ವೇದಿಕೆಯತ್ತ ಓಡಿ ಬಂದು ಮುಗಿಬಿದ್ದರು. ಸ್ವಲ್ಪಕಾಲ ನೂಕುನುಗ್ಗಲು ಉಂಟಾಯಿತು. ತಮ್ಮ ಮೊಬೈಲ್‌ಗ‌ಳಲ್ಲಿ ಫೋಟೊ ಕ್ಲಿಕ್ಕಿಸಿಕೊಂಡರು.

No Comments

Leave A Comment