Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ನಂತೂರಿನಲ್ಲಿ ಭೀಕರ ಅಪಘಾತ: ಮೂರು ಸಾವು

ಮಂಗಳೂರು: ನಂತೂರು ಜಂಕ್ಷನ್‌ನಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮಹಿಳೆ ಸಹಿತ ಮೂವರು ಸಾವನ್ನಪ್ಪಿದ್ದಾರೆ ಹಾಗೂ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಕನ್ಯಾನ ಕರೋಪಾಡಿ ಮೂಲದ ವೀಣಾ (32), ಪುತ್ರ ನಿತೀಶ್‌ (13), ಕಾಸರಗೋಡು ನಾರಂಪಾಡಿಯ ಕುರುಂಜಿಕಟ್ಟೆ ನಿವಾಸಿ ಪ್ರೀತಂ ಪಿಂಟೋ (21) ಸಾವನ್ನಪ್ಪಿದವರು. ವೀಣಾ ಅವರ ಪತಿ ಕೃಷ್ಣ (45), ಪುತ್ರಿ ನಿಖೀತಾ (10) ಮತ್ತು ಶ್ವೇತಾ (20) ಗಾಯಾಳುಗಳು.

ವೀಣಾ ಮತ್ತು ನಿತೇಶ್‌ ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ, ಪ್ರೀತಂ ಬೈಕ್‌ನಲ್ಲಿ ಸಾಗುತ್ತಿದ್ದರು. ಶ್ವೇತಾ ಬೈಕಿನ ಹಿಂಬದಿಯಲ್ಲಿದ್ದರು.

ಅಪಘಾತ ಹೇಗಾಯ್ತು?

ಕೆಪಿಟಿ ಕಡೆಯಿಂದ ಪಂಪ್‌ವೆಲ್‌ ಕಡೆಗೆ ಡಾಮರು ಮಿಶ್ರಣ ಸಾಗಿಸುತ್ತಿದ್ದ ಲಾರಿ ನಂತೂರು ಜಂಕ್ಷನ್‌ ತಲುಪುವಾಗ ಅಲ್ಲಿ ಕ್ರೇನ್‌ ಒಂದು ಕೆಟ್ಟು ನಿಂತಿತ್ತು. ಲಾರಿ ಚಾಲಕ ಕ್ರೇನ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಎಡಬದಿಗೆ ಚಲಾಯಿಸಿದಾಗ ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆಯಿತು. ಬಳಿಕ ಮುಂದೆ ಇದ್ದ ಮೋಟಾರ್‌ ಬೈಕಿಗೆ ಹಾಗೂ ಕಾರಿಗೆ ಢಿಕ್ಕಿ ಹೊಡೆದು ಕಾರಿನ ಮೇಲೆ ಮಗುಚಿತು. ಕಾರು ಲಾರಿಯ ಅಡಿಗೆ ಸಿಲುಕಿ ಅಪ್ಪಚ್ಚಿಯಾಯಿತು.

ಕೃಷ್ಣ ಅವರು ಪಣಂಬೂರು ಕೇಂದ್ರೀಯ ವಿದ್ಯಾಲಯದ ಮುಖ್ಯೋಪಾಧ್ಯಾಯರಾಗಿದ್ದಾರೆ ಹಾಗೂ ಪತ್ನಿ ವೀಣಾ ಕೂಳೂರು ಬಳಿಯ ಪಂಜಿಮೊಗರು ವಿದ್ಯಾನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಶನಿವಾರ ಶಾಲೆಗೆ ರಜೆ ಇರುವ ಕಾರಣ ಶಿಕ್ಷಕ ದಂಪತಿ ಮಕ್ಕಳಾದ ನಿತೀಶ್‌ (14) ಮತ್ತು ನಿಖೀತಾ ಜತೆಗೆ ಕುಟುಂಬ ಸಮೇತರಾಗಿ ಕಾರಿನಲ್ಲಿ ಕನ್ಯಾನ ಕರೋಪಾಡಿಯ ವೀಣಾ ಅವರ ಮನೆಗೆ ಹೊರಟಿದ್ದರು.

ಕೃಷ್ಣ ದಂಪತಿ ತೊಕ್ಕೊಟ್ಟಿನಲ್ಲಿ ಸ್ವಂತ ಮನೆ ನಿರ್ಮಿಸಿದ್ದು, ತಿಂಗಳ ಹಿಂದೆ ಅಲ್ಲಿಗೆ ಸ್ಥಳಾಂತರಗೊಂಡಿದ್ದರು.

ಪ್ರೀತಂ ಪಿಂಟೊ ಅವರು ನಾರಂಪಾಡಿಯ ಪೀಟರ್‌ ಪಿಂಟೊ ಮತ್ತು ಮ್ಯಾಕ್ರಿನ್‌ ಕ್ರಾಸ್ತಾ ಅವರ ಮೂವರು ಮಕ್ಕಳಲ್ಲಿ ಕಿರಿಯವನಾಗಿದ್ದು, ಮಂಗಳೂರಿನಲ್ಲಿ ತನ್ನ ಸಹೋದರ ನಡೆಸುತ್ತಿದ್ದ ಮಸಾಲೆ ಹುಡಿ ವ್ಯವಹಾರದಲ್ಲಿ ಸಹಾಯಕನಾಗಿ (ಲೈನ್‌ ಸೇಲ್‌) ಕೆಲಸ ಮಾಡುತ್ತಿದ್ದರು. ಅವರು ತನ್ನ ಸಂಬಂಧಿಯಾದ ಶ್ವೇತಾ ಜತೆ ಬೈಕಿನಲ್ಲಿ ತೆರಳುತ್ತಿದ್ದರು.

ಪ್ರೀತಂನ ತಂದೆ ಮತ್ತು ತಾಯಿ ಇಬ್ಬರೂ ಗಲ್ಫ್ನಲ್ಲಿದ್ದು ಮಾರ್ಚ್‌ 9ರಂದು ಊರಿಗೆ ಬರುವವರಿದ್ದರು ಹಾಗೂ ವಾಪಸ್‌ ಹೋಗುವಾಗ ಹಿರಿಯ ಪುತ್ರ ಪ್ರಿನ್ಸನ್‌ನನ್ನು ವಿದೇಶಕ್ಕೆ ಕರೆದೊಯ್ಯುವ ಯೋಜನೆ ಹಾಕಿಕೊಂಡಿದ್ದರು ಎನ್ನಲಾಗಿದೆ.

ಟ್ರಾಫಿಕ್‌ ಪೂರ್ವ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

No Comments

Leave A Comment