Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಸುಗ್ರೀವಾಜ್ಞೆ ಹೊರಡಿಸುವುದು ಅಸಂವಿಧಾನಿಕ ಅಲ್ಲ: ಜೇಟ್ಲಿ

ನವದೆಹಲಿ: ರಾಜ್ಯಸಭೆಯಲ್ಲಿ ಸರ್ಕಾರದ ಸುಗ್ರೀವಾಜ್ಞೆಯನ್ನು ಬಲವಾಗಿ ಸಮರ್ಥಿಸಿಕೊಂಡ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವುದು ಅಸಂವಿಧಾನಿಕವೇನಲ್ಲ ಎಂದಿದ್ದಾರೆ.

ಇಂದು ರಾಜ್ಯಸಭೆಯಲ್ಲಿ ಜೆಡಿಯುನ ಶರದ್ ಯಾದವ್ ಅವರ ಪ್ರಶ್ನೆಗೆ ಉತ್ತರಿಸಿದ ಉತ್ತರಿಸಿದ ಜೇಟ್ಲಿ, ಭೂಸ್ವಾಧೀನ ಕಾಯ್ದೆಯ ಕಲಂ 10(ಎ)ಗೆ ಸರ್ಕಾರ ತಿದ್ದುಪಡಿ ತಂದಿದ್ದು, ಈ ಕಾಯ್ದೆಯಲ್ಲಿ ಯಾವುದೇ ದೋಷಗಳಿಲ್ಲ ಎಂದರು.

ಇದೇ ವೇಳೆ, ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ 9 ತಿಂಗಳಲ್ಲೇ ಹಲವು ಸುಗ್ರೀವಾಜ್ಞೆಗಳನ್ನು ಹೊರಡಿಸುವ ಮೂಲಕ ಸಂಸತ್‌ನ್ನು ರಬ್ಬರ್ ಸ್ಟಾಂಪ್ ಆಗಿ ಮಾಡಲು ಹೊರಟಿದ್ದೀರಿ ಎಂಬ ಕಾಂಗ್ರೆಸ್‌ನ ಆನಂದ್ ಶರ್ಮಾ ಅವರ ಆರೋಪಕ್ಕೆ ಪ್ರತಿಕ್ರಿಸಿದ ಜೇಟ್ಲಿ, ಸುಗ್ರೀವಾಜ್ಞೆ ಹೊರಡಿಸುವುದು ಅಸಂವಿಧಾನಿಕ ಅಲ್ಲ ಮತ್ತು ಯುಪಿಎ ಸರ್ಕಾರ ಸಹ ಸುಮಾರು 70ಕ್ಕೂ ಹೆಚ್ಚು ಸುಗ್ರೀವಾಜ್ಞೆಗಳನ್ನು ಹೊರಡಿಸಿದೆ ಎಂದರು.

ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಸುಗ್ರೀವಾಜ್ಞೆಯನ್ನು ಸರ್ಮರ್ಥಿಸಿಕೊಂಡಿದ್ದು, ಎಲ್ಲ ಎನ್‌ಡಿಎ ಸಂಸದರಿಗೂ ಸುಗ್ರೀವಾಜ್ಞೆಯನ್ನು ಬಲವಾಗಿ ಸಮರ್ಥಿಸಿಕೊಳ್ಳುವಂತೆ ಸೂಚಿಸಿದ್ದಾರೆ.

ಭೂಸ್ವಾಧೀನಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ಒಂದೆಡೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದರೆ, ಮತ್ತೊಂದೆಡೆ ಗಾಂಧಿವಾದಿ ಅಣ್ಣಾ ಹಜಾರೆ ಅವರೂ ಇದರ ವಿರುದ್ಧ  ಧ್ವನಿಯೆತ್ತಿ, ಮತ್ತೆ ಜಂತರ್ ಮಂತರ್‍ಗೆ ಧಾವಿಸಿದ್ದಾರೆ. ಇವೆಲ್ಲವೂ ಮೋದಿ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಈ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ಮೋದಿ ಅವರು ಸಂಸದೀಯ ಮಂಡಳಿ ಸಭೆ ಕರೆದು ಚರ್ಚಿಸಿದರು.

No Comments

Leave A Comment