Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಅನಿಲ-ತೈಲ ನಿಕ್ಷೇಪ ಪತ್ತೆ ಹಡಗಿಗೆ ಹಸಿರು ನಿಶಾನೆ

ಮಲ್ಪೆ, ಫೆ.23: ಮಲ್ಪೆ ಮೀನುಗಾರಿಕಾ ಬಂದರಿನ ಒಳಗಿರುವ ಖಾಸಗಿ ರಂಗದ ಹಡಗು ನಿರ್ಮಾಣ ಕಂಪೆನಿ ಟೆಬ್ಮಾ ಶಿಪ್ ಯಾರ್ಡ್(ಟಿಎಸ್‌ಎಲ್), ಇದೀಗ ನೂತನವಾಗಿ ನಿರ್ಮಿಸಿದ ಆಳಸಮುದ್ರದಲ್ಲಿ ಅನಿಲ ಹಾಗೂ ತೈಲ ನಿಕ್ಷೇಪವನ್ನು ಪತ್ತೆ ಹಚ್ಚಿ, ಸಂಶೋಧಿಸುವ ಅತ್ಯಾಧುನಿಕ ಹಡಗಿಗೆ ಸೋಮವಾರ ಅಪರಾಹ್ನ ಹಸಿರು ನಿಶಾನೆ ತೋರಿಸಿ ಸಮುದ್ರದಲ್ಲಿ ತೇಲಿ ಬಿಡಲಾಯಿತು.

‘ಪುಗ್ರೋ ಸ್ಕೌಟ್’ ಎಂಬ 4,500 ಟನ್ ತೂಗುವ ಕೆಂಪು ಬಣ್ಣದ ಈ ಹಡಗಿಗೆ ಶಾಸಕ ಪ್ರಮೋದ್ ಮಧ್ವರಾಜ್ ಹಸಿರು ನಿಶಾನೆ ತೋರಿಸುತ್ತಿದ್ದಂತೆಯೇ ನಿಧಾನವಾಗಿ ಟೆಬ್ಮಾ ಯಾರ್ಡ್‌ನಿಂದ ದೂರಕ್ಕೆ ಮಲ್ಪೆ ಅಳಿವೆಯನ್ನು ದಾಟಿ ಅರಬಿ ಸಮುದ್ರವನ್ನು ಸೇರಿಕೊಂಡು ಮಂಗಳೂರಿನತ್ತ ಚಲಿಸಿತು.

‘ಪುಗ್ರೋ ಸ್ಕೌಟ್’ ಹೆಸರಿನ ಅತ್ಯಾಧುನಿಕ ಜಿಯೋ ಟೆಕ್ನಿಕಲ್ ರಿಸರ್ಚ್ ವೆಸೆಲ್ಸ್ (ಜಿಟಿಆರ್‌ವಿ) ಹಡಗನ್ನು ಡಚ್ ಮೂಲದ ಪುಗ್ರೋ ಕಂಪೆನಿಗೆ ಸುಮಾರು 40 ಮಿಲಿಯನ್ ಡಾಲರ್ (240 ಕೋ.ರೂ.) ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದನ್ನು ಅಮೆರಿಕದ ಪನಾಮ ಬಂದರಿನಲ್ಲಿ ನೋಂದಣಿ ಮಾಡಲಾಗಿದೆ. ಅದು ಪನಾಮ ಧ್ವಜವನ್ನು ಹೊಂದಿರುತ್ತದೆ.

ಪುಗ್ರೊ ಸಿಂಗಾಪುರ ಕಂಪೆನಿ ಇದರ ಮಾಲಕರಾಗಿದ್ದು, ಹಡಗು ಮಂಗಳೂರು ಬಂದರಿನಲ್ಲಿ ಕೆಲವು ದಿನಗಳ ಕಾಲ ಇರ ಲಿದ್ದು, ಬಳಿಕ ಸಿಂಗಾಪುರಕ್ಕೆ ತೆರಳಲಿದೆ. ಅಲ್ಲಿ ಅದರ ಮೊದಲ ಜವಾಬ್ದಾರಿ ವಿಯೆಟ್ನಾಂ ದೇಶದ ಸಮುದ್ರದಲ್ಲಿ ತೈಲ ಹಾಗೂ ಅನಿಲದ ನಿಕ್ಷೇಪ ಹುಡುಕುವುದು. ಮುಂದೆ ಅದರ ಗಮ್ಯಸ್ಥಾನ ಬ್ರಿಟನ್ ಬಳಿಯ ಐಸ್‌ಲ್ಯಾಂಡ್ ಆಗಿರುತ್ತದೆ ಎಂದು ಕಂಪೆನಿಯ ಯೋಜನಾ ನಿರ್ದೇಶಕ ಗ್ರೇಮಿ ಅಲೆಕ್ಸಾಂಡರ್ ತಿಳಿಸಿದ್ದಾರೆ.

ಅಬೂಬಕರ್ ಹೇಳಿಕೆ: ಟೆಬ್ಮಾದಲ್ಲಿ ನಿರ್ಮಾಣಗೊಂಡ ಎರಡನೆ ಜಿಟಿಆರ್‌ವಿ ಹಡಗಾಗಿದೆ. ಕಳೆದ ವರ್ಷ ಇದೇ ಕಂಪೆನಿಗಾಗಿ ‘ಪುಗ್ರೋ ವಯೇಜರ್’ ಎಂಬ ಹಡಗನ್ನು ನಿರ್ಮಿಸಿ ಕಳುಹಿಸಲಾಗಿತ್ತು ಎಂದು ಟೆಬ್ಮಾದ ಉಪಾಧ್ಯಕ್ಷ ಅಬೂಬಕರ್ ತಿಳಿಸಿದರು. ಪುಗ್ರೋ ಸ್ಕೌಟ್ ಆಳಸಮುದ್ರದಲ್ಲಿ ಸಮುದ್ರದ ತಳದಿಂದ (ಸೀ ಬೆಡ್) 3 ಕಿ.ಮೀ. ಆಳದವರೆಗೆ ಡ್ರಿಲ್ ಮಾಡಿ, ಅಲ್ಲಿ ತೈಲ ಅಥವಾ ಅನಿಲ ನಿಕ್ಷೇಪವನ್ನು ಹುಡುಕಿ, ಅದನ್ನು ಹಡಗಿನೊಳಗೆ ನಿರ್ಮಿಸಿರುವ ಅತ್ಯಾಧುನಿಕ ಉಪಕರಣಗಳನ್ನೊಳಗೊಂಡ ಪ್ರಯೋಗಾಲಯದಲ್ಲಿ ಸಂಶೋಧಿಸಿ ಪತ್ತೆ ಹಚ್ಚಲಾಗುವುದು ಎಂದವರು ವಿವರಿಸಿದರು.
ವಿಜ್ಞಾನಿಗಳು, ತಂತ್ರಜ್ಞರು, ಸಂಶೋಧಕರು, ಹಡಗಿನ ಸಿಬ್ಬಂದಿ ಸೇರಿದಂತೆ ಈ ಹಡಗಿನಲ್ಲಿ 60 ಮಂದಿಗೆ ಬೇಕಾದ ಎಲ್ಲಾ ಸೌಲಭ್ಯಗಳಿವೆ. ಅತ್ಯಾಧುನಿಕ ಅಡುಗೆ ಮನೆ, ಕೋಲ್ಡ್ ಸ್ಟೋರೇಜ್ ವ್ಯವಸ್ಥೆಯು ಇದರಲ್ಲಿದೆ. ಎಲ್ಲವೂ ಕಂಪ್ಯೂಟರ್ ಮೂಲಕವೇ ನಿಯಂತ್ರಿತವಾಗುವ ವ್ಯವಸ್ಥೆ ಇಲ್ಲಿದೆ. ಈಗಾಗಲೇ ಟೆಬ್ಮಾ ನಿರ್ಮಿಸಿದ ಪುಗ್ರೋ ವಯೇಜರ್‌ಗೆ ‘2014ನೆ ಸಾಲಿನ ಅತ್ಯುತ್ತಮ ಹಡಗು’ ಪ್ರಶಸ್ತಿ ದೊರತಿದೆ ಎಂದು ಅಬೂಬಕರ್ ತಿಳಿಸಿದರು.

ಈ ಹಡಗನ್ನು ಸಮುದ್ರ ತಳದ ಎಲ್ಲಾ ನಿಕ್ಷೇಪಗಳ ಸಂಶೋಧನೆಗೂ ಬಳಸಬಹುದಾಗಿದೆ. ಎಲ್ಲವನ್ನೂ ಡ್ರಿಲ್ ನಿಯಂತ್ರಣ ಕೊಠಡಿಯಲ್ಲಿ ಕುಳಿತು ಕಂಪ್ಯೂಟರ್ ಮೂಲಕವೇ ನಿಯಂತ್ರಿಸಲು ಸಾಧ್ಯವಿದೆ. ಸಮುದ್ರ ತಳದಿಂದ 3,000 ಮೀ. ಕೆಳಗಿನವರೆಗೂ ಬೋರ್‌ವೆಲ್ ತೋಡಿದಂತೆ ತೋಡಲು ಸಾಧ್ಯವಿದೆ ಎಂದವರು ವಿವರಿಸಿದರು.

82.90 ಮೀ. ಉದ್ದ 19.80 ಮೀ. ಅಗಲದ ಈ ಹಡಗಿನ ಬಳಿಕ ಇದೀಗ ಟೆಬ್ಮಾದಲ್ಲಿ ಸಮುದ್ರದ ಹೂಳೆತ್ತುವ ಡ್ರೆಜ್ಜರ್ ನಿರ್ಮಾಣಗೊಳ್ಳುತ್ತಿದೆ ಎಂದು ತಿಳಿಸಿದ ಅಬೂಬಕರ್, ಟೆಬ್ಮಾದಲ್ಲಿ ಇದುವರೆಗೆ 18 ಬೇರೆಬೇರೆ ರೀತಿಯ, ಗಾತ್ರದ ಹಡಗುಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ ಒಂದು ಡ್ರೆಜ್ಜರ್ ಸೇರಿದಂತೆ 10ನ್ನು ಭಾರತೀಯ ನೌಕಾದಳಕ್ಕೆ ನೀಡಲಾಗಿದೆ. ಉಳಿದವುಗಳಲ್ಲಿ 2ನ್ನು ಕೊಚ್ಚಿನ್ ಬಂದರಿಗೆ ಹಾಗೂ ಉಳಿದವುಗಳನ್ನು ವಿದೇಶಿ ಕಂಪೆನಿಗಳಿಗೆ ನಿರ್ಮಿಸಲಾಗಿದೆ ಎಂದರು.

ಹಡಗಿಗೆ ಹಸಿರು ನಿಶಾನೆ ತೋರುವ ಸಂದರ್ಭದಲ್ಲಿ ಮಾತನಾಡಿದ ಪ್ರಮೋದ್ ಮಧ್ವರಾಜ್, ಈ ಉದ್ದಿಮೆ ಇಲ್ಲಿಗೆ ಬರುವ ಸಂದರ್ಭದಲ್ಲಿ ಸ್ಥಳೀಯ ಮೀನುಗಾರರೊಂದಿಗೆ ತಾನು ಇದನ್ನು ವಿರೋಧಿಸಿದ್ದೆ. ಬಂದರಿನೊಳಗೆ ಇದು ಸ್ಲಿಪ್‌ವೇ ಆಗಿದ್ದು ಹಡಗು ರಿಪೇರಿ ಮಾಡುವ ಕಂಪೆನಿ. ಇದರಿಂದ ಮೀನುಗಾರಿಕೆಗೆ ತೊಂದರೆ ಇದೆ ಎಂಬುದು ಎಲ್ಲರ ಭಾವನೆಯಾಗಿತ್ತು. ಇದೀಗ ಇದು ಹಡಗು ನಿರ್ಮಾಣ ಕೇಂದ್ರ ಎಂಬುದು ನಮಗೆ ಸಮಾಧಾನವಾಗಿದೆ ಎಂದರು.

 

No Comments

Leave A Comment