Log In
BREAKING NEWS >
ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

24 ಗಂಟೆ ಸಮಾಧಿಯಿಂದ ಮೇಲೆದ್ದ ಡೀನ್‌ ಗುನರ್ಸನ್‌

ಉಡುಪಿ: ಕೈ, ಕುತ್ತಿಗೆಗೆ ಕೋಳ ಬಿಗಿದುಕೊಂಡು ಭೂಮಿಯಡಿ ಶನಿವಾರ ರಾತ್ರಿ 7.28ಕ್ಕೆ ಹೋಗಿದ್ದ ಕೆನಡಾದ ಜಾದೂಗಾರ ಡೀನ್‌ ಗುನರ್ಸನ್‌ ಸಂಕೋಲೆಗಳನ್ನು ಬಿಡಿಸಿಕೊಂಡು ರವಿವಾರ ರಾತ್ರಿ 6.55ಕ್ಕೆ ಲೀಲಾಜಾಲವಾಗಿ ಹೊರಬಂದರು.

ರವಿವಾರ ಸಂಜೆ ಕ್ರಿಶ್ಚಿಯನ್‌ ಪ.ಪೂ. ಕಾಲೇಜಿನ ಮೈದಾನದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಕಾತರದಿಂದ ಸೇರಿದ್ದರು.

“ಈಗ ಡೀನ್‌ ಹೊರಬರುತ್ತಾರೆ’ ಎಂದು ಘೋಷಿಸಿದ ಬಳಿಕ ಎಲ್ಲರೂ ನೋಡುತ್ತಿರುವಂತೆ ಹೂತಿದ್ದ ಸ್ಥಳದಲ್ಲಿ ಮಣ್ಣು ಸ್ವಲ್ಪ ತೆರೆಯಿತು. ಮೊದಲು ಕೈ ಹೊರಗೆ ಬಂತು. ಅನಂತರ ಡೀನ್‌ ಸುಲಲಿತವಾಗಿ ಹೊರಬಂದರು. ಲವಲವಿಕೆಯಿಂದಲೇ ಕಂಡು ಬಂದ ಡೀನ್‌ “ಎಲ್ಲರಿಗೂ ಧನ್ಯವಾದ, ನಾನು ದಣಿದಿದ್ದೇನೆ. ನಾಳೆ ನೋಡೋಣ’ ಎಂದು ಹೇಳಿದರು. ಶನಿವಾರ ಸಂಜೆ ಇದ್ದಂತೆಯೇ ರವಿವಾರ ಸಂಜೆ ಗುನರ್ಸನ್‌ ಲವಲವಿಕೆಯಿಂದ ಇರುವುದನ್ನು ಕಂಡಾಗ ಪೋಷಕಾಂಶಗಳಿರುವ ಮಾತ್ರೆಗಳನ್ನು ತೆಗೆದುಕೊಂಡಿರುವ ಸಾಧ್ಯತೆ ಇದೆ. ಶಕ್ತರಾಗಿಯೇ ನಡೆದ ಡೀನ್‌ ಅವರಿಗೆ ವೈದ್ಯಕೀಯ ಪರೀಕ್ಷೆ ಅಗತ್ಯವಿಲ್ಲ ಎಂದು ವೈದ್ಯರಾದ ಡಾ|ಜಿ.ಎಸ್‌.ಚಂದ್ರಶೇಖರ್‌, ಡಾ|ಜಗದೀಶ ಶರ್ಮ ಹೇಳಿದರೂ ತಪಾಸಣೆಗೆ ಒಳಪಡಿಸಲಾಯಿತು. “ಹಸಿವು ಆಗುತ್ತಿದೆ’ ಎಂದು ಹೇಳಿರುವ ಕಾರಣ ಅವರಿಗೆ ಆಹಾರ ಕೊಡಲಾಯಿತು.


ಒಂದು ದಿನವಿಡೀ ಈ ತೆರನಾಗಿ ಇರಲು ನಾಲ್ಕು ದಿನಗಳಿಂದ ಆಹಾರಪಥ್ಯಗಳನ್ನು ನಡೆಸುತ್ತಿದ್ದರು. ಗಂಟೆಗಳನ್ನು ಲೆಕ್ಕ ಹಾಕಲು ಗಂಟೆಗೊಂದರಂತೆ ಮೇಣದ ಬತ್ತಿಗಳನ್ನು ಹಚ್ಚುತ್ತಿದ್ದರು. ಒಳಗೆ ಉಸಿರಾಡುವ ಗಾಳಿ ಬಿಸಿಯಾಗುತ್ತಿದ್ದ ಕಾರಣ ಹೊರಗೆ ಮಂಜುಗಡ್ಡೆಯನ್ನು ಇರಿಸುತ್ತಿದ್ದರು. ಕಾರ್ಯಕ್ರಮ ಆಯೋಜಿಸಿದ ಗಿಲಿಗಿಲಿ ಮ್ಯಾಜಿಕ್‌ ತಂಡದ ಪ್ರೊ|ಶಂಕರ್‌ ಮತ್ತು ಜೂನಿಯರ್‌ ಶಂಕರ್‌ 24 ಗಂಟೆಯೂ ಉಸ್ತುವಾರಿ ವಹಿಸಿದರು.

ಗುಟ್ಟೇನು?

ಡೀನ್‌ ಗುನರ್ಸನ್‌ ಹೊರಬಂದ ಬಳಿಕ ವೈದ್ಯಕೀಯ ಪ್ರತಿನಿಧಿ ಲೂಯಿಸ್‌ ಡಯಾಸ್‌ ಅವರು ಇದು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನೆ ಕೇಳಿದರು. “ನನಗೆ ಧೂಮಪಾನ ಮತ್ತು ಮದ್ಯಪಾನದ ಅಭ್ಯಾಸವಿಲ್ಲ. ಆದ್ದರಿಂದ ಇದು ಸಾಧ್ಯವಾಯಿತು’ ಎಂದು ಡೀನ್‌ ಉತ್ತರಿಸಿದರು.

ಸಾರ್ವಜನಿಕ ಕಾಳಜಿ
ಡೀನ್‌ ಗುನರ್ಸನ್‌ ಶನಿವಾರ ರಾತ್ರಿ ಭೂಮಿಯೊಳಗೆ ಹೋದ ಅನಂತರದಿಂದ ರವಿವಾರ ಸಂಜೆವರೆಗೂ ಜನರು ಬಂದು ಗುನರ್ಸನ್‌ ಜೊತೆ ಮೈಕ್ರೋಫೋನ್‌ನಲ್ಲಿ ಮಾತನಾಡುತ್ತಿದ್ದರು. “ನಿಮಗೆ ಹಸಿವಾಗುತ್ತದೋ? ನಾಳೆ ಮಾವಿನ ಹಣ್ಣು ತಂದು ಕೊಡುತ್ತೇನೆ’ ಎಂದೊಬ್ಬರು ಹೇಳಿದ್ದರು


24 ಗಂಟೆಗಳ ದಿನಚರಿ
ಗುನರ್ಸನ್‌ ಕೈಗೆ ಹಾಕಿದ ಸಂಕೋಲೆಯನ್ನು ಶನಿವಾರ ರಾತ್ರಿ 10 ಗಂಟೆಗೆ, ಕುತ್ತಿಗೆಗೆ ಹಾಕಿದ ಸಂಕೋಲೆಯನ್ನು ರಾತ್ರಿ 11 ಗಂಟೆಗೆ ಬಿಡಿಸಿಕೊಂಡರು. ಅನಂತರ ಮಲಗಿದ್ದ ಗುನರ್ಸನ್‌ ಆಗಾಗ ಸಾರ್ವಜನಿಕರು ಬಂದು ಮಾತನಾಡಿಸಿದಾಗ ಎದ್ದು ಮಾತನಾಡುತ್ತಿದ್ದರು. -35 ಡಿಗ್ರಿ ಉಷ್ಣಾಂಶದ ನಾಡಿನಿಂದ ಬಂದ ಗುನರ್ಸನ್‌ರಿಗೆ ಇಲ್ಲಿನ ಹೊರಗಿನ ಉಷ್ಣಾಂಶವೂ ಹೆಚ್ಚಿಗೆ ಆಗುತ್ತದೆ. ಭೂಮಿಯೊಳಗೂ ಉಷ್ಣಾಂಶವಿದೆ ಎಂದು ಗುನರ್ಸನ್‌ ಹೇಳಿದ್ದರು. ಆಕ್ಸಿಜನ್‌ ಬಾಟಲಿಯನ್ನು ಅವರು ಬಳಸಿರಲಿಲ್ಲ. ಹೊರಗಿನಿಂದ ಕೊಟ್ಟ ಕೊಳವೆ ಸಹಾಯದಿಂದಲೇ ಅವರು ಉಸಿರಾಡಿದರು. ಪೆಟ್ಟಿಗೆಯೊಳಗೆ ಕುಳಿತುಕೊಳ್ಳಲು ಆಗದ ಕಾರಣ ಮಲಗಿಕೊಂಡೇ ಇರುತ್ತಿದ್ದರು. ಮುಂದೆ ಆ ಪೆಟ್ಟಿಗೆಯನ್ನು ಹೊರಗೆ ತೆಗೆಯಲಾಗುತ್ತದೆ.

No Comments

Leave A Comment