Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಭೂಸ್ವಾಧೀನ ಸುಗ್ರೀವಾಜ್ಞೆ: ಮರು ಚಿಂತನೆ?

ನವದೆಹಲಿ: ಭೂಸ್ವಾಧೀನ ಸುಗ್ರೀವಾಜ್ಞೆ ಕುರಿತು ಕೇಂದ್ರ ಸರ್ಕಾರ ಮರು ಚಿಂತಿಸುವ ಸಾಧ್ಯತೆ ಇದೆ. ಸಂಸತ್ ಅಧಿವೇಶನ ಗಮನದಲ್ಲಿರಿಸಿಕೊಂಡು ಹಾಗೂ ದೇಶದ ವಿವಿಧ ಭಾಗಗಳಲ್ಲಿನ ರೈತ ಸಮುದಾಯದಿಂದ ಆಕ್ಷೇಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಈ ನಿಟ್ಟಿನಲ್ಲಿ ಶನಿವಾರ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನಿವಾಸದಲ್ಲಿ ಸಚಿವರ ಸಭೆ ನಡೆಯಿತು. ಸುಷ್ಮಾ ಸ್ವರಾಜ್, ಜೇಟ್ಲಿ ಸಭೆಯಲ್ಲಿದ್ದರು. ಇದಕ್ಕೂ ಮೊದಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಜತೆಗೆ ಸಮಾಲೋಚನೆ ನಡೆಸಿದ್ದಾರೆ. ಈ ನಡುವೆ, ರೈತ ಪ್ರತಿನಿಧಿಗಳು ಕೂಡ ರಾಜನಾಥ್ ರನ್ನು ಭೇಟಿಯಾಗಿ ಭೂಸ್ವಾಧೀನ ಸುಗ್ರೀವಾಜ್ಞೆ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ತೀವ್ರ ವಿರೋಧ

ವಿವಾದಾತ್ಮಕ ಭೂಸ್ವಾಧೀನ ಸುಗ್ರೀವಾಜ್ಞೆ ಕುರಿತು ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಕೂಡ ಇದರ ವಿರುದ್ಧ ಧ್ವನಿ ಎತ್ತಿದ್ದರು. ಜತೆಗೆ, ಪ್ರತಿಪಕ್ಷಗಳು ಇದರ ವಿರುದ್ಧ ಸೋಮವಾರದಿಂದ ಆರಂಭವಾಗಲಿರುವ ಬಜೆಟ್ ಅಧಿವೇಶನದಲ್ಲಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳಲು ನಿರ್ಧರಿಸಿದೆ.

ಏತನ್ಮಧ್ಯೆ, ಆರೆಸ್ಸೆಸ್ ನ ಸಹಸಂಸ್ಥೆಗಳಾದ ಭಾರತೀಯ ಕಿಸಾನ್ ಸಂಘ ಹಾಗೂ ಭಾರತೀಯ ಮಸ್ದೂರ್ ಸಂಘ ಕೂಡ ಸುಗ್ರೀವಾಜ್ಞೆ ವಿರುದ್ಧ ಧ್ವನಿ ಎತ್ತಿತ್ತು. ಇದರಿಂದ ಸರ್ಕಾರಕ್ಕೆ ರೈತ ವಿರೋಧಿ ಹಣೆಪಟ್ಟಿ ತಗಲುವ ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಬಗ್ಗೆ ಮರುಪರಿಶೀಲಿಸಲು ನಿರ್ಧರಿಸಿದೆ ಎನ್ನಲಾಗಿದೆ.

No Comments

Leave A Comment