Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಪೆಟ್ರೋಲಿಯಂ ಬೇಹುಗಾರಿಕೆ: ಕಂಪೆನಿ ಸಿಇಓ ಸಹಿತ ಇಬ್ಬರ ಸೆರೆ

ಹೊಸದಿಲ್ಲಿ: ಪೆಟ್ರೋಲಿಯಂ ಸಚಿವಾಲಯದಲ್ಲಿ ನಡೆದ ಕಾರ್ಪೊರೇಟ್‌ ಬೇಹುಗಾರಿಕೆ ಪ್ರಕರಣದ ಸಂಬಂಧ ದಿಲ್ಲಿ ಪೊಲೀಸರು ಓರ್ವ ಪತ್ರಕರ್ತ ಹಾಗೂ ಕಂಪೆನಿಯೊಂದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು (ಸಿಇಓ) ಬಂಧಿಸಿದ್ದಾರೆ. ಪೆಟ್ರೋಲಿಯಂ ಸಚಿವಾಲಯದ ವರ್ಗೀಕೃತ ದಾಖಲೆ ಪತ್ರಗಳ ಸೋರಿಕೆಗೈದ ಆರೋಪದಲ್ಲಿ ಇವರನ್ನು ಬಂಧಿಸಲಾಗಿದೆ.

ಎನರ್ಜಿ ಪೋರ್ಟಲ್‌ ನಡೆಸುತ್ತಿರುವ ಶಂತನು ಸೈಕಿಯಾ ಮತ್ತು ಮೆಟಿಸ್‌ ಬಿಸ್‌ನೆಸ್‌ ಸೊಲ್ಯುಶನ್ಸ್‌ ಪ್ರೈವೇಟ್‌ ಲಿಮಿಟೆಡ್‌ನ‌ ಸಿಇಓ ಪ್ರಯಾಸ್‌ ಜೈನ್‌ ಅವರನ್ನು ಪೊಲೀಸರು ಗುರುವಾರ ತಡರಾತ್ರಿ ಬಂಧಿಸಿ ಶುಕ್ರವಾರ ನಸುಕಿನ ತನಕವೂ ಅವರನ್ನು ಪ್ರಶ್ನಿಸಿದರು. ಬಳಿಕ ಇವರನ್ನು ಅಧಿಕೃತವಾಗಿ ಬಂಧಿಸಲಾಯಿತು.

ಈ ಶಂಕಿತ ಕಾರ್ಪೊರೇಟ್‌ ಬೇಹುಗಾರಿಕೆಗೆ ಸಂಬಂಧಿಸಿ ಶುಕ್ರವಾರ ಇನ್ನಷ್ಟು ಬಂಧನಗಳು ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಪೆಟ್ರೋಲಿಯಂ ಸಚಿವಾಲಯದಲ್ಲಿನ ಕಾರ್ಪೊರೇಟ್‌ ಬೇಹುಗಾರಿಕೆಯು ಯುಪಿಎ ಆಡಳಿತ ಕಾಲದಿಂದ ನಡೆದುಕೊಂಡು ಬಂದಿದ್ದು ಅದನ್ನು ನಮ್ಮ ಆಡಳಿತಾವಧಿಯಲ್ಲಿ ನಡೆಯಲು ನಾವು ಬಿಡುವುದಿಲ್ಲ ಎಂದು ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ.

ಯುಪಿಎ ಆಡಳಿತಾವಧಿಯಲ್ಲಿ ಪೆಟ್ರೋಲಿಯಂ ಸಚಿವರಾಗಿದ್ದ ಕಾಂಗ್ರೆಸ್‌ನ ಎಂ. ವೀರಪ್ಪ ಮೊಯಿಲಿ ಅವರು, ಈ ಹಗರಣ ಸಂಬಂಧವಾಗಿ ತಾನು ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡುವುದಿಲ್ಲ; ಏನು ಹೇಳುವುದಿದ್ದರೂ ಅದನ್ನು ಸದನದಲ್ಲೇ ಹೇಳುತ್ತೇನೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಸಿದ್ದಾರೆ.

ಕಾರ್ಪೊರೇಟ್‌ ಬೇಹುಗಾರಿಕೆ ಸಂಬಂಧ ತಾವು ಗುರುವಾರ ಪೆಟ್ರೋಲಿಯಂ ಸಚಿವಾಲಯದ ಇಬ್ಬರು ಸಿಬಂದಿಗಳು ಹಾಗೂ ಇತರ ಮೂವರು ಸೇರಿದಂತೆ ಒಟ್ಟು ಐವರನ್ನು ಬಂಧಿಸಿರುವುದಾಗಿ ದಿಲ್ಲಿ ಪೊಲೀಸರು ಹೇಳಿದ್ದರು.

No Comments

Leave A Comment