Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ತಗ್ಗಲಿದೆ ಗೃಹ, ವಾಹನ ಸಾಲದ ಇಎಂಐ ಬಡ್ಡಿ ಇಳಿಸಿದ ಆರ್‌ಬಿಐ

ಮುಂಬೈ(ಪಿಟಿಐ): ಅಚ್ಚರಿಯ ಬೆಳವಣಿಗೆ ಎಂಬಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಫೆಬ್ರುವರಿ 3ರ  ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಗೂ ಮುನ್ನವೇ ಬಡ್ಡಿದರದಲ್ಲಿ ಶೇ 0.25ರಷ್ಟು  ಕಡಿತ ಮಾಡಿದೆ.

ಇದರಿಂದ ಗೃಹ ಮತ್ತು ವಾಹನ ಸಾಲಗಳು ಅಗ್ಗವಾಗಲಿವೆ. ಮಾಸಿಕ ಸಮಾನ ಸಾಲದ ಕಂತು (ಇಎಂಐ) ಸಹ ಕಡಿಮೆ ಆಗಲಿದೆ. ಬಡ್ಡಿದರ ಕಡಿಮೆ ಮಾಡಿ­­ದ್ದರೂ, ನಗದು ಮೀಸಲು ಅನುಪಾತ­ವನ್ನು (ಸಿಆರ್‌ಆರ್‌) ಶೇ 4ರ  ಮಟ್ಟ­ದಲ್ಲೇ ಮುಂದುವರಿಸಲು ಆರ್‌ಬಿಐ ನಿರ್ಧರಿಸಿದೆ.

ಬಡ್ಡಿದರ ಇಳಿಸಬೇಕು ಎಂದು ಉದ್ಯಮ ವಲಯ ಸತತವಾಗಿ ಬೇಡಿಕೆ ಇಡುತ್ತಲೇ ಬಂದಿದ್ದರೂ ಆರ್‌ಬಿಐ ಗವರ್ನರ್‌ ರಘುರಾಂ ರಾಜನ್‌ ಅವರು ಕಳೆದ ಒಂದೂವರೆ ವರ್ಷಗಳಿಂದಲೂ ಸ್ಪಂದಿಸಿಯೇ ಇರಲಿಲ್ಲ. ಆದರೆ ಡಿಸೆಂಬರ್‌ 2ರಂದು ನಡೆಸಿದ ಹಣಕಾಸು ನೀತಿ ಪರಾಮರ್ಶೆ ವೇಳೆ ‘2015ರಲ್ಲಿ ಬಡ್ಡಿದರ ಕಡಿತ ಮಾಡಲಾಗುತ್ತದೆ’ ಎಂಬ ಸುಳಿವು ನೀಡಿದ್ದರು.

ಅಚ್ಚರಿಯ ಕೊಡುಗೆ: ಇದೀಗ ಫೆಬ್ರುವರಿ 3ರ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಗೂ ಮುನ್ನವೇ ದಿಢೀರ್‌ ಎಂಬಂತೆ ಬಡ್ಡಿದರವನ್ನು ಕಡಿತ ಮಾಡಿದ್ದಾರೆ. ಮಾರಾಟದಲ್ಲಿ ಪ್ರಗತಿ ಕಾಣಲಾಗದೆ ಬಸವಳಿದಿದ್ದ ರಿಯಲ್‌ ಎಸ್ಟೇಟ್‌ ಅಭಿವೃದ್ಧಿ ಕ್ಷೇತ್ರ ಮತ್ತು ವಾಹನ ತಯಾರಿಕಾ ಉದ್ಯಮಕ್ಕೆ ಅಚ್ಚರಿದಾಯಕ ಕೊಡುಗೆ ನೀಡಿದ್ದಾರೆ.

ಜೇಟ್ಲಿ ಮೆಚ್ಚುಗೆ: ಬಡ್ಡಿದರ ಕಡಿತ ಮಾಡಿರುವ ಆರ್‌ಬಿಐ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಹಣಕಾಸು ಸಚಿವ ಅರುಣ್‌ ಜೇಟ್ಲಿ, ‘ದೇಶದ ಆರ್ಥಿಕ ಅಭಿ­ವೃದ್ಧಿ ನಿಟ್ಟಿನಲ್ಲಿ ಇದೊಂದು ಉತ್ತಮ ಹೆಜ್ಜೆಯಾಗಿದ್ದು, ಗ್ರಾಹಕರಿಗೆ ಅನು­ಕೂ­ಲ­ವಾಗ­ಲಿದೆ. ಖರೀದಿ ವಹಿವಾಟೂ ಹೆಚ್ಚ­­ ಲಿದೆ’ ಎಂದು ದೆಹಲಿಯಲ್ಲಿ ಹೇಳಿದ್ದಾರೆ.

ಸೂಚ್ಯಂಕ ಭಾರಿ ಏರಿಕೆ: ಆರ್‌ಬಿಐ ಬಡ್ಡಿದರ ಕಡಿತ ಮಾಡಿರುವುದಕ್ಕೆ ಷೇರು­ಪೇಟೆ ಕ್ಷಿಪ್ರಗತಿಯಲ್ಲಿ ಪ್ರತಿಕ್ರಿಯಿಸಿದೆ.
ಗುರುವಾರ ಮಧ್ಯಾಹ್ನದ ವಹಿವಾಟಿ­ನಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್‌ಇ) ಸಂವೇದಿ ಸೂಚ್ಯಂಕ ತೀವ್ರಗತಿಯಲ್ಲಿ 650 ಅಂಶ­ಗಳಷ್ಟು ಏರಿಕೆ  ಕಂಡರೆ, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ಸೂಚ್ಯಂಕ ‘ನಿಫ್ಟಿ’ಯೂ 194 ಅಂಶಗಳಷ್ಟು ಏರಿಸಿಕೊಂಡಿತು. ಅಂತಿಮವಾಗಿ ಬಿಎಸ್‌ಇ ಸೂಚ್ಯಂಕ 728 ಅಂಶ, ಎನ್‌ಎಸ್‌ಇ ನಿಫ್ಟಿ 216 ಅಂಶ ಏರಿಕೆಯೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದವು.

ಬಡ್ಡಿ ಇಳಿಕೆಗೆ ಮುನ್ನುಡಿ
ಬಡ್ಡಿದರ ಕಡಿತಕ್ಕೆ ಇದೊಂದು ಮುನ್ನುಡಿಯಷ್ಟೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಬಡ್ಡಿದರ ಕಡಿತ ಆಗಲಿದೆ
-ಅರುಂಧತಿ ಭಟ್ಟಾಚಾರ್ಯ, ಎಸ್‌ಬಿಐ ಅಧ್ಯಕ್ಷೆ

ಗ್ರಾಹಕರಿಗೆ ಲಾಭ
ಆರ್‌ಬಿಐ ಬಡ್ಡಿದರ ಕಡಿತ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ, ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯ  ಸಾಲದ ಮೇಲಿನ ಬಡ್ಡಿದರವನ್ನು ಶೇ 0.25ರಷ್ಟು ತಗ್ಗಿಸಿದೆ. ಇದರಿಂದ ಗೃಹಸಾಲ, ವಾಹನ ಮತ್ತು ಇತರೆ ಸಾಲಗಳ ಮೇಲಿನ ಸಮಾನ ಮಾಸಿಕ ಕಂತು (ಇಎಂಐ) ಕಡಿಮೆಯಾಗಲಿದೆ. ತಯಾರಿಕಾ ವಲಯದ ಪ್ರಗತಿಗೂ ಇದು ಕಾರಣವಾಗಲಿದೆ.

ಗ್ರಾಹಕರಿಗೆ ಲಾಭವಾಗುವ ರೀತಿಯಲ್ಲಿ ಬಡ್ಡಿದರ ತಗ್ಗಿಸಲಾಗುವುದು ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ ಭರವಸೆ ನೀಡಿದೆ.

No Comments

Leave A Comment