Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಕಾಂಗ್ರೆಸ್ ಮುಕ್ತ ಕರ್ನಾಟಕ ನಮ್ಮ ಗುರಿ: ಅಮಿತ್ ಶಾ

ಬೆಂಗಳೂರು: ಕಾಂಗ್ರೆಸ್ ಮುಕ್ತ ಕರ್ನಾಟಕ ನಮ್ಮ ಗುರಿಯಾಗಿದ್ದು, ಇದಕ್ಕಾಗಿ ಸದಸ್ಯತ್ವ ಅಭಿಯಾನ ಆರಂಭಿಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಶನಿವಾರ ಹೇಳಿದ್ದಾರೆ.

ಶುಕ್ರವಾರ ರಾತ್ರಿ ನಗರಕ್ಕೆ ಆಗಮಿಸಿರುವ ಶಾ, ಇಂದು ಮಲ್ಲೇಶ್ವರಂನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿದರು. ಸಭೆಯ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಅಭಿಯಾನ ಆರಂಭಿಸಲಾಗುವುದು ಎಂದರು. ಅಲ್ಲದೆ ಇದಕ್ಕೆ ಸೂಕ್ತ ರೂಪುರೇಷ ಸಿದ್ಧಪಡಿಸಲು ತಾವು ಬೆಂಗಳೂರಿಗೆ ಆಗಮಿಸಿರುವುದಾಗಿ ತಿಳಿಸಿದರು.

ಪಕ್ಷ ಬಲಪಡಿಸುವ ಉದ್ದೇಶದಿಂದ ಕರ್ನಾಟಕದಲ್ಲಿ ಸದಸ್ಯತ್ವ ಅಭಿಯಾನ ಆರಂಭಿಸಲಾಗುವುದು. ದೇಶಾದ್ಯಂತ ಒಟ್ಟು 10 ಕೋಟಿ ಸದಸ್ಯತ್ವದ ಗುರಿ ಹೊಂದಲಾಗಿದ್ದು, ಕರ್ನಾಟಕದಲ್ಲೂ 1 ಕೋಟಿಗೂ ಅಧಿಕ ಸದಸ್ಯತ್ವ ಪಡೆಯುವ ಗುರಿ ಹೊಂದಿದ್ದೇವೆ ಎಂದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿರುವುದು ಖುಷಿ ತಂದಿದೆ ಮತ್ತು ಕರ್ನಾಟಕದಲ್ಲೂ ಬಿಜೆಪಿಗೆ 17 ಸ್ಥಾನಗಳನ್ನು ನೀಡುವ ಮೂಲಕ ನರೇಂದ್ರ ಮೋದಿ ಅವರು ಪ್ರಧಾನಿಯಾಗಲು ಸಹಕರಿಸಿದ ರಾಜ್ಯದ ಜನತೆಗೆ ಅಮಿತ್ ಶಾ ಧನ್ಯವಾದ ಹೇಳಿದರು.

ದೇಶದಲ್ಲಿ ತೈಲ ಬೆಲೆ ಇಳಿಕೆಗೆ ನಾವು ಹೆಚ್ಚು ಒತ್ತು ನೀಡಿದ್ದೇವೆ, ಗಂಗಾ ಶುದ್ಧಿಕರಣ ಕಾರ್ಯ ಆರಂಭವಾಗಿದೆ. ಕಪ್ಪು ಹಣ ವಾಪಸ್ ತರುವ ವಿಚಾರದಲ್ಲೂ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಸಂಬಂಧ ಎಸ್‌ಐಟಿ ರಚನೆ ಮಾಡಿ, ಕಪ್ಪು ಹಣ ವಾಪಸ್ ತರಲು ಯತ್ನಿಸುತ್ತಿದ್ದೇವೆ ಎಂದರು. ಅಲ್ಲದೆ ಮೋದಿಯವರ ಮೇಕ್ ಇನ್ ಇಂಡಿಯಾ ಯಶಸ್ವಿಯತ್ತ ಹೆಜ್ಜೆ ಇಟ್ಟಿದೆ ಎಂದು ಬಿಜೆಪಿ ಅಧ್ಯಕ್ಷರು ತಿಳಿಸಿದರು.

ಇದೇ ವೇಳೆ ಬೆಂಗಳೂರಿನ ಚರ್ಚ್‌ಸ್ಟ್ರೀಟ್ ಸ್ಫೋಟ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಶಾ, ಸ್ಫೋಟ ಪ್ರಕರಣದ ತನಿಖೆಗೆ ಕೇಂದ್ರದಿಂದ ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದರು.

No Comments

Leave A Comment