Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಉಡುಪಿ ಎಸ್ಪಿ ವರ್ಗ: ಹೊಸ ಎಸ್ಪಿಯಾಗಿ ಅಣ್ಣಮಲೈ ಅಧಿಕಾರ ಸ್ವೀಕಾರ

ಉಡುಪಿ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್‌ ಬೆಂಗಳೂರಿನ ಗುಪ್ತಚರ ವಿಭಾಗಕ್ಕೆ ವರ್ಗಾವಣೆಗೊಂಡಿದ್ದು ಕಾರ್ಕಳ, ಕುಂದಾಪುರ, ಉಡುಪಿಯಲ್ಲಿ ಎಎಸ್ಪಿಯಾಗಿರುವ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಪದೋನ್ನತಿ ಹೊಂದಿ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.

ರಾಜೇಂದ್ರಪ್ರಸಾದ್‌ ಉಡುಪಿಗೆ ಬಂದು ಕೇವಲ ನಾಲ್ಕೂವರೆ ತಿಂಗಳಲ್ಲಿ ವರ್ಗವಾಗಿದ್ದಾರೆ. ಅಣ್ಣಾಮಲೈ ಅವರು ಮೂಲತಃ ಕೊಯಮತ್ತೂರಿನವರು. ಬಿಇ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌, ಎಂಬಿಎ (ಹಣಕಾಸು) ಪದವೀಧರರಾದ ಇವರು 2011ರ ಐಪಿಎಸ್‌ ತಂಡದವರು.

ಶಿಸ್ತಿನ, ಪ್ರಾಮಾಣಿಕ ಅಧಿಕಾರಿ ಎಂದು ಹೆಸರು ಪಡೆದಿರುವ ಅಣ್ಣಾಮಲೈ ಅವರು ಕಾರ್ಕಳ ಉಪವಿಭಾಗದಲ್ಲಿ ಇದನ್ನು ಮಾಡಿ ತೋರಿಸಿದ್ದರು. ಕಾರ್ಕಳದಲ್ಲಿ ಅಡ್ಡಾದಿಡ್ಡಿಯಾಗಿ ನಡೆಯುತ್ತಿದ್ದ ವಾಹನ ಪಾರ್ಕಿಂಗ್‌ಗೆ ಶಿಸ್ತು ತಂದುಕೊಟ್ಟರು. ಇದೇ ಅವಧಿಯಲ್ಲಿ ಇವರ ಮಾರ್ಗದರ್ಶನದಲ್ಲಿ ಕಾರ್ಕಳ, ಪಡುಬಿದ್ರಿ, ಕಾಪು ಪೊಲೀಸ್‌ ಠಾಣೆಗಳು ಮಾದರಿ ಠಾಣೆ ಎಂದು ಪರಿಗಣನೆ ಗಳಿಸಿದವು.

ನಿನ್ನೆ ಮೂರೂ ಕಡೆ ಎಎಸ್ಪಿ, ಇಂದು ಎಸ್ಪಿ

ಅಣ್ಣಾಮಲೈಯವರು ಐಪಿಎಸ್‌ ಆದ ತತ್‌ಕ್ಷಣ ಪ್ರೊಬೆಶನರಿ ಸೇವೆಯಾಗಿ ಕಾರ್ಕಳ ಉಪವಿಭಾಗಕ್ಕೆ ಎಎಸ್ಪಿಯಾಗಿ ನೇಮಕಗೊಂಡರು. ಡಿ. 5ರಂದು ಅವರನ್ನು ಕುಂದಾಪುರದ ಪ್ರಭಾರ ಎಎಸ್ಪಿಯಾಗಿ ನೇಮಿಸಲಾಯಿತು. ಡಿ. 31ರಂದು ಉಡುಪಿ ಡಿವೈಎಸ್ಪಿ ಡಾ|ಪ್ರಭುದೇವ ಮಾನೆ ನಿವೃತ್ತರಾದ ಕಾರಣ ಈ ಹುದ್ದೆಯನ್ನೂ ಅಣ್ಣಾಮಲೈ ಸ್ವೀಕರಿಸಿದರು. ಡಿ. 31ರಂದು ಒಂದು ದಿನ ಅವರು ಮೂರೂ ಕಡೆ ಎಎಸ್ಪಿ. ಅವರು ಉಡುಪಿ ಎಸ್ಪಿಯಾಗಿ ಜ. 1ರಂದು ಹೊಸ ಹುದ್ದೆಯನ್ನು ಸ್ವೀಕರಿಸಲಿದ್ದಾರೆ. ನಿಯಮಾವಳಿ ಪ್ರಕಾರ ಎಸ್ಪಿಯಾಗುವಾಗ ಎಎಸ್ಪಿಯಾಗಿರುವಂತಿಲ್ಲ. ಆದ ಕಾರಣ ಜ. 1ರಂದು ಮೂರೂ ಕಡೆ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಡಿವೈಎಸ್ಪಿ ಅಧಿಕಾರವನ್ನು ಅಣ್ಣಾಮಲೈ ಹಸ್ತಾಂತರಿಸಲಿದ್ದಾರೆ. ಐಪಿಎಸ್‌ ಅವರನ್ನು ಉಪವಿಭಾಗದಲ್ಲಿರುವಾಗ ಎಎಸ್ಪಿ (ಸಹಾಯಕ ಎಸ್ಪಿ) ಎಂದೂ ಐಪಿಎಸ್‌ ಅಲ್ಲದವರು ಇದೇ ಹುದ್ದೆಯಲ್ಲಿರುವಾಗ ಡಿವೈಎಸ್ಪಿ (ಉಪ ಎಸ್ಪಿ) ಎಂದೂ ಕರೆಯಲಾಗುತ್ತದೆ.

No Comments

Leave A Comment