Log In
BREAKING NEWS >
ಉಡುಪಿಯ ಹಲವು ಕಡೆಗಳಲ್ಲಿ ಕೈ ಕೊಟ್ಟ ಮತಯ೦ತ್ರ-ಮತದಾನಕ್ಕೆ ಪರದಾಟುವ ಪರಿಸ್ಥಿತಿ....

ಮಹಾಘಟಬಂಧನ ಗೆದ್ದರೆ ವಾರದಲ್ಲಿ ಆರು ಪ್ರಧಾನ ಮಂತ್ರಿಗಳು, ಭಾನುವಾರ ದೇಶಕ್ಕೆ ರಜೆ: ಅಮಿತ್ ಶಾ

ಪಣಜಿ: ವಿರೋಧ ಪಕ್ಷಗಳ ಮಹಾಮೈತ್ರಿಯನ್ನು ಟೀಕಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳು ಗೆದ್ದರೆ ಪ್ರತಿಯೊಂದು ಪಕ್ಷಗಳ ಒಬ್ಬ ನಾಯಕರು ವಾರದಲ್ಲಿ ಆರು ದಿನ ಪ್ರಧಾನ ಮಂತ್ರಿ ಹುದ್ದೆ ನಿಭಾಯಿಸಿ ಭಾನುವಾರ ದೇಶಕ್ಕೆ ರಜೆ ಕೊಟ್ಟುಬಿಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ವಿರೋಧ ಪಕ್ಷಗಳು ಮಾಡಿಕೊಳ್ಳುತ್ತಿರುವ ಮಹಾಮೈತ್ರಿಯನ್ನು ಅಣಕಿಸಿದ ಅವರು, ಮಹಾಘಟಬಂಧನ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಸೋಮವಾರ ಮಾಯಾವತಿ, ಮಂಗಳವಾರ ಅಖಿಲೇಶ್ ಯಾದವ್, ಬುಧವಾರ ಹೆಚ್ ಡಿ ದೇವೇಗೌಡ, ಗುರುವಾರ ಚಂದ್ರಬಾಬು ನಾಯ್ಡು, ಎಂ ಕೆ ಸ್ಟಾಲಿನ್ ಶುಕ್ರವಾರ ಮತ್ತು ಶರದ್ ಪವಾರ್ ಶನಿವಾರ ಪ್ರಧಾನಿಯಾಗುತ್ತಾರೆ.

ಇನ್ನು ಭಾನುವಾರ ದೇಶಕ್ಕೆ ರಜೆ ಕೊಟ್ಟು ಹಾಯಾಗಿರುತ್ತಾರೆ ಎಂದು ಹೇಳಿದರು.ಪಣಜಿಯಲ್ಲಿ ನಿನ್ನೆ ಅಟಲ್ ಬೂತ್ ಕಾರ್ಯಕರ್ತ ಸಮ್ಮೇಳನದಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವಂತೆ ಮನವಿ ಮಾಡಿಕೊಂಡರು. ತಮ್ಮ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಕಾಶ್ಮೀರದಿಂದ ಕನ್ಯಾಕುಮಾರಿ ಮತ್ತು ಕೋಲ್ಕತ್ತಾದವರೆಗೆ ಒಳನುಸುಳುಕೋರರ ಸಮಸ್ಯೆಯನ್ನು ನಿವಾರಿಸುತ್ತೇವೆ ಎಂದರು.

ರಾಷ್ಟ್ರೀಯ ನಾಗರಿಕರ ದಾಖಲಾತಿ(ಎನ್ಆರ್ ಸಿ) ಒಳನುಸುಳುಕೋರರನ್ನು ಗುರುತಿಸುವುದಕ್ಕಾಗಿ ಇದ್ದು, ಎನ್ಆರ್ ಸಿ ಕಾರ್ಯವನ್ನು ಗೋವಾದಲ್ಲಿ ನಡೆಸಬೇಕೆ ಎಂದು ಕಾಂಗ್ರೆಸ್ ಅಧ್ಯಕ್ಷರನ್ನು ಕೇಳಲು ಬಯಸುತ್ತೇನೆ ಎಂದರು.ಏಪ್ರಿಲ್ ನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಗೆಲ್ಲುವಲ್ಲಿ ಬೂತ್ ಮಟ್ಟದ ಕಾರ್ಯಕರ್ತರಿಂದ ಹೆಚ್ಚು ಸಹಾಯವಾಗಲಿದೆ ಎಂದರು.

ಪೂರ್ವ ರಾಜ್ಯಗಳಲ್ಲಿ ಬಿಜೆಪಿ ರ್ಯಾಲಿ ನಡೆಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವಕಾಶ ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿದ ಅಮಿತ್ ಶಾ, ಗುಪ್ತಚರ ಇಲಾಖೆಯ ಅಧಿಕಾರಿಯೊಬ್ಬರು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಮಮತಾ ಬ್ಯಾನರ್ಜಿಯವರು ಬಿಜೆಪಿ ಮೇಲಿನ ಹೆದರಿಕೆಯಿಂದ ರ್ಯಾಲಿಗೆ ಅನುಮತಿ ನಿರಾಕರಿಸಿದ್ದರೇ ಹೊರತು ಕಾನೂನು, ಸುವ್ಯವಸ್ಥೆ ತೊಂದರೆಯಿಂದಲ್ಲ ಎಂಬುದು ಗೊತ್ತಾಗಿದೆ ಎಂದರು.ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ಬದ್ಧವಾಗಿದ್ದು ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿಕೂಟ ಅಧಿಕಾರಕ್ಕೆ ಬರುವುದಿಲ್ಲ, ಬದಲಿಗೆ ಬಿಜೆಪಿ ಸುಮಾರು 74 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದರು.

No Comments

Leave A Comment