Log In
BREAKING NEWS >
Smriti Irani says writing on the wall for Rahul Gandhi...

ಪ್ರತಿಪಕ್ಷಗಳ ಮೆಗಾ ರ್ಯಾಲಿ: 2019 ರಲ್ಲಿ ದೇಶ ಹೊಸ ಪ್ರಧಾನಿಯನ್ನು ಕಾಣಲಿದೆ – ನಾಯ್ಡು, ಅಖಿಲೇಶ್

ಕೋಲ್ಕತಾ: 2019 ರಲ್ಲಿ ದೇಶ ಹೊಸ ಪ್ರಧಾನಿಯನ್ನು ಕಾಣಲಿದೆ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಹಾಗೂ ಎಸ್ ಪಿ ಮುಖ್ಯಸ್ಥ ಅಲಿಖೇಶ್ ಯಾದವ್ ಅವರು ಶನಿವಾರ ಹೇಳಿದ್ದಾರೆ.

ಪ್ರತಿಪಕ್ಷಗಳ ಶಕ್ತಿ ಪ್ರದರ್ಶನಕ್ಕಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಆಯೋಜಿಸಿರುವ ಒಕ್ಕೂಟ ಭಾರತ ಸಮಾವೇಶದಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು ಅವರು, ಭಾರತ ಉಳಿಸಿ, ಪ್ರಜಾಪ್ರಭುತ್ವ ಉಳಿಸಿ ಎಂದು ಜನತೆಗೆ ಕರೆ ನೀಡಿದರು.

ನೋಟು ಅಮಾನ್ಯೀಕರಣ ಒಂದು ರಾಜಕೀಯ ಗಿಮಿಕ್, ಜಿಎಸ್ ಟಿ ಒಂದು ಅತಿ ದೊಡ್ಡ ವಂಚನೆ ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಆಂಧ್ರ ಸಿಎಂ, ಕೇಂದ್ರ ಸರ್ಕಾರಕ್ಕೆ ದೇಶದ ಅಭಿವೃದ್ಧಿ ಬೇಕಾಗಿಲ್ಲ ಎಂದರು.

ಪ್ರತಿಪಕ್ಷಗಳ ಮೆಗಾ ರ್ಯಾಲಿ ಆಯೋಜಿಸಿದ ಮಮತಾ ಬ್ಯಾನರ್ಜಿ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಪ್ರತಿಪಕ್ಷಗಳು ಒಂದಾಗಲು ಸಾಧ್ಯವೇ ಇಲ್ಲ ಎಂದು ಜನ ಭಾವಿಸಿದ್ದರು. ಆದರೆ ದೀದಿ ಅದನ್ನು ಸಾಧ್ಯವಾಗಿಸಿದ್ದಾರೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

ಇನ್ನು ಸಮಾವೇಶ ಉದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು, ದೇಶದಲ್ಲಿ ಸ್ಥಿರ ಸರ್ಕಾರದ ಅಗತ್ಯ ಇದೆ. 13 ಮಿತ್ರ ಪಕ್ಷಗಳ ಜೊತೆ ಸೇರಿ ನಾನು ಪ್ರಧಾನಿಯಾಗಿದ್ದೆ. ಹಾಗ ಕಾಂಗ್ರೆಸ್ ಸಹ ನನಗೆ ಬೆಂಬಲ ನೀಡಿತ್ತು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು 282 ಸ್ಥಾನಗಳನ್ನು ಗೆದ್ದಿದ್ದಾರೆ. ಆದರೆ ಇಂದು ಏನಾಗುತ್ತಿದೆ? ಮೋದಿ ದೇಶದ ಜಾತ್ಯತೀತ ಸಂಸ್ಥೆಗಳನ್ನು ಮತ್ತು ಸಂವಿಧಾನಾತ್ಮಕ ಸಂಸ್ಥೆಗಳನ್ನು ನಾಶ ಮಾಡುತ್ತಿದ್ದಾರೆ. ಇದು ಮೋದಿ ಸರ್ಕಾರದ ಅತಿ ದೊಡ್ಡ ಸಾಧನೆ ಎಂದು ಮಾಜಿ ಪ್ರಧಾನಿ ವಾಗ್ದಾಳಿ ನಡೆಸಿದರು.

ದೇಶದಲ್ಲಿ ಜಾತ್ಯತೀತ ಸರ್ಕಾರ ಆಡಳಿತಕ್ಕೆ ಬರಲು ನಡೆಸಿದ ಐತಿಹಾಸಿಕ ಪ್ರಯತ್ನವಿದು ಎಂದು ಮಮತಾ ಬ್ಯಾನರ್ಜಿ ಅವರನ್ನು ದೇವೇಗೌಡರು ಶ್ಲಾಘಿಸಿದ್ದಾರೆ.

ಕೋಲ್ಕತಾದ ಬ್ರಿಗೇಡ್‌ ಪರೇಡ್‌ ಮೈದಾನದಲ್ಲಿ ನಡೆಯುತ್ತಿರುವ ಒಕ್ಕೂಟ ಭಾರತ ಸಮಾವೇಶ ಪ್ರತಿಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದು, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ಜುಲ್ಲಾ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದಾರೆ. ಈ ಮೂಲಕ ಮೇನಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಬಿಜೆಪಿ ವಿರೋಧಿ ಪಕ್ಷಗಳು ಬೃಹತ್​ ಮಟ್ಟದಲ್ಲಿ ಒಂದಾಗಲಿವೆ ಎಂಬ ಸಂದೇಶ ರವಾನಿಸಲಾಗಿದೆ.

No Comments

Leave A Comment