Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಹಗರಣ ಮರೆತ SP, BSP; ತಲಾ 38 ಸೀಟುಗಳಲ್ಲಿ ಸ್ಪರ್ಧೆ

ಲಕ್ನೋ : ಉತ್ತರ ಪ್ರದೇಶದ 80 ಲೋಕಸಭಾ ಸೀಟುಗಳ ಪೈಕಿ ತಲಾ 38ರಲ್ಲಿ ತಾವು ಜತೆಗೂಡಿ ಸ್ಪರ್ಧಿಸುವೆವೆಂದು ಪರಸ್ಪರ ಕಟ್ಟಾ ರಾಜಕೀಯ ಎದುರಾಳಿಗಳಾಗಿದ್ದು ಈಗ ಮಿತ್ರರಾಗಿರುವ ಮಾಯಾವತಿ ಅವರ ಬಹುಜನ ಸಮಾಜ ಪಕ್ಷ ಮತ್ತು ಅಖೀಲೇಶ್‌ ಯಾದವ್‌ ಅವರ ಸಮಾಜವಾದಿ ಪಕ್ಷ ಇಂದು ಪ್ರಕಟಿಸಿವೆ.

ಉತ್ತರ ಪ್ರದೇಶದ ಎರಡು ಮುಖ್ಯ ಸೀಟುಗಳಾಗಿರುವ ರಾಯ್‌ ಬರೇಲಿ ಮತ್ತು ಅಮೇಠಿಯನ್ನು ಕಾಂಗ್ರೆಸ್‌ ಪಕ್ಷಕ್ಕೆ ಬಿಟ್ಟುಕೊಡುವುದಾಗಿ ಹೇಳಿವೆ.

ಎಸ್‌ಪಿ ಮತ್ತು ಬಿಎಸ್‌ಪಿ ಗಳ ಈ ಮೈತ್ರಿ ಐತಿಹಾಸಿಕವೆಂದು ಬಣ್ಣಿಸಲಾಗಿದೆ. ಆದರೆ ಈ ಮೈತ್ರಿ ಇದೇ ಮೊದಲಲ್ಲ ಎಂಬುದು ಗಮನಾರ್ಹ. ಈ ಹಿಂದೆ 1993 ಅಂದಿನ ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ ಮತ್ತು ಬಿಎಸ್‌ಪಿ ಮುಖ್ಯಸ್ಥ ಕಾನ್ಶಿà ರಾಮ್‌ ಉ.ಪ್ರ. ವಿಧಾನಸಭಾ ಚುನಾವಣೆಯನ್ನು ಜತೆಗೂಡಿ ಹೋರಾಡಿ, ಗೆದ್ದು, ಸರಕಾರ ರೂಪಿಸಿದ್ದರು. ಆದರೆ ಎರಡೇ ವರ್ಷಗಳ ತರುವಾಯ 1995ರಲ್ಲಿ ಬಿಎಸ್‌ಪಿ-ಎಸ್‌ಪಿ ಮೈತ್ರಿ ಮುರಿದು ಬಿದ್ದಿತ್ತು; ಸರಕಾರವೂ ಪತನಗೊಂಡಿತ್ತು !

ಇದಕ್ಕೆ ಅಂದಿನ ಅತ್ಯಂಕ ಕುಖ್ಯಾತ ಗೆಸ್ಟ್‌ ಹೌಸ್‌ ಹಗರಣವೇ ಕಾರಣವಾಗಿತ್ತು. ಅಂದು ಲಕ್ನೋದ ಮೀರಾಬಾಯಿ ಗೆಸ್ಟ್‌ ಹೌಸ್‌ ನಲ್ಲಿ ಮಾಯಾವತಿ ತಮ್ಮ ಪಕ್ಷದ ಶಾಸಕರೊಡಗೂಡಿ ಅತ್ಯಂತ ಮಹತ್ವದ ಸಭೆ ನಡೆಸುತ್ತಿದ್ದಾಗ ಎಸ್‌ಪಿ ಕಾರ್ಯಕರ್ತರು ಗೆಸ್ಟ್‌ ಹೌಸ್‌ಗೆ ಕಲ್ಲೆಸೆದು, ಒಳನುಗ್ಗಿ ಮಾಯಾವತಿ ಕಚೇರಿಯನ್ನು ಧ್ವಂಸ ಮಾಡಿ, ಆಕೆಯ ಮೇಲೆ ಹಲ್ಲೆ ಮಾಡಿದ್ದರು.

ಬಿಎಸ್‌ಪಿ ಶಾಸಕರು ಆಕೆಯನ್ನು ರಕ್ಷಿಸಲು ವಿಫ‌ಲರಾಗಿದ್ದರು. ಆಗ ಬಿಜೆಪಿ ಶಾಸಕ ಬ್ರಹ್ಮ ದತ್‌ ದ್ವಿವೇದಿ ಅವರು ಮಾಯಾವತಿಯನ್ನು ರಕ್ಷಿಸಿ ಸುರಕ್ಷಿತವಾಗಿ ಗೆಸ್ಟ್‌ ಹೌಸ್‌ನಿಂದ ಹೊರತಂದಿದ್ದರು. ಈ ಘಟನೆಯ ಪರಿಣಾಮವಾಗಿ ಎಸ್‌ಪಿ-ಬಿಎಸ್‌ಪಿ ಮೈತ್ರಿ ಮುರಿದು ಬಿದ್ದು ಸರಕಾರವೂ ಪತನಗೊಂಡಿತ್ತು. ಆಗ ಬಿಎಸ್‌ಪಿ ಜತೆಗೆ ಬಿಜೆಪಿ ಕೈಜೋಡಿಸಿ ರಾಜ್ಯದಲ್ಲಿ  ಸರಕಾರ ರಚಿಸಿತ್ತು.

ಆ ಹಳೇ ಹಗರಣವನ್ನು ಮರೆತು ಹೊಸದಾಗಿ ಮೈತ್ರಿ ರಚಿಸಿಕೊಂಡಿರುವ ಈ ಸಂದರ್ಭದಲ್ಲಿ ಎಸ್‌ಪಿ ಮುಖ್ಯಸ್ಥ ಅಖೀಲೇಶ್‌ ಯಾದವ್‌ ಅವರು ತಮ್ಮ ಪಕ್ಷ ಕಾರ್ಯಕರ್ತರಿಗೆ “ನೀವೆಂದೂ ಮಾಯಾವತಿಯನ್ನು ಎಷ್ಟು ಮಾತ್ರಕ್ಕೂ ಅಗೌರವಿಸಬಾರದು; ಹಾಗೆ ಮಾಡಿದರೆ ನೀವು ನನ್ನನ್ನೇ ಅಗೌರವಿಸಿದ ಹಾಗೆ’ ಎಂದು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

2017ರಲ್ಲಿ ನಡೆದಿದ್ದ ಫ‌ೂಲ್‌ ಪುರ ,ಗೋರಖ್‌ಪುರ ಮತ್ತು ಕೈರಾನಾ ಉಪಚುನಾವಣೆಗಳನ್ನು ಬಿಎಸ್‌ಪಿ-ಎಸ್‌ ಪಿ ಮೈತ್ರಿ ಕೂಟ ಗೆದ್ದಂತೆಯೇ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮೈತ್ರಿ ಭರ್ಜರಿಯಾಗಿ ಗೆಲ್ಲುತ್ತದೆ ಮತ್ತು ರಾಜ್ಯದಲ್ಲಿ ಬಿಜೆಪಿ ಮಣ್ಣು ಮುಕ್ಕಿ ಹೋಗುತ್ತದೆ ಎಂಬ ಬಲವಾದ ವಿಶ್ವಾಸವನ್ನು ಇಂದು ಮಾಯಾವತಿ ಮತ್ತು ಅಖೀಲೇಶ್‌ ವ್ಯಕ್ತಪಡಿಸಿದ್ದಾರೆ.

No Comments

Leave A Comment