Log In
BREAKING NEWS >
ನೂತನ ಗೋವಾ ಸಿಎಂ ಪ್ರಮೋದ್‌ ಸಾವಂತ್‌ಗೆ ಬುಧವಾರ ಸದನ ಬಲ ಪರೀಕ್ಷೆ...

ಕೈ-ಜೆಡಿಎಸ್‌ನಲ್ಲೀಗ ಸಭಾಪತಿ ಸಂಘರ್ಷ

ಬೆಳಗಾವಿ: ವಿಧಾನಪರಿಷತ್‌ಗೆ ಸಭಾಪತಿಯಾಗಿ ಪ್ರತಾಪಚಂದ್ರ ಶೆಟ್ಟಿ ಅವರ ಆಯ್ಕೆ ಮಾಡಿದ ಬೆನ್ನಲ್ಲೇ ಎರಡೂ ಪಕ್ಷಗಳಲ್ಲಿ ಹುದ್ದೆ ವಂಚಿತ ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ.

ಮಂಗಳವಾರ ನಡೆದ ದಿಢೀರ್‌ ಬೆಳವಣಿಗೆಯಿಂದ ಇಬ್ಬರೂ ನಾಯಕರು ತಮ್ಮ ಪಕ್ಷಗಳ ನಾಯಕರ ವಿರುದ್ಧ ತೀವ್ರ ಬೇಸರ ಹೊರಹಾಕಿದ್ದು, ಈ ಸರ್ಕಾರದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿರುವುದನ್ನು ಈ ಬೆಳವಣಿಗೆ ಪುಷ್ಠಿàಕರಿಸುತ್ತಿದೆ ಎಂಬ ಆರೋಪ ಮಾಡಿದ್ದಾರೆ. ವಿಶೇಷವಾಗಿ ಲಿಂಗಾಯತ ಸಮುದಾಯದ ನಾಯಕರನ್ನು ವ್ಯವಸ್ಥಿತವಾಗಿ ತುಳಿಯುವ ಪ್ರಯತ್ನ ನಡೆಯುತ್ತಿದೆ ಎಂದು ತಮ್ಮ ಆಪ್ತರ ಬಳಿ ಅಳಲು ತೊಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಶಾಸಕಾಂಗ ಪಕ್ಷ ನಾಯಕ ಸಿದ್ದರಾಮಯ್ಯ ತಮ್ಮನ್ನೇ ಸಭಾಪತಿಯನ್ನಾಗಿ ಮಾಡುತ್ತಾರೆ ಎಂಬ ನಂಬಿಕೆ ಇಟ್ಟುಕೊಂಡಿದ್ದ ಎಸ್‌.ಆರ್‌.ಪಾಟೀಲ್‌ಗೆ ಕೊನೆ ಗಳಿಗೆಯ ಸಿದ್ದರಾಮಯ್ಯ ಮೌನ ಬೇಸರ ತರಿಸಿದೆ ಎಂದು ಮೂಲಗಳು ತಿಳಸಿವೆ. ಸಭಾಪತಿ ಸ್ಥಾನ ಕೈತಪ್ಪಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ಕುಮಾರಸ್ವಾಮಿ ಹೆಬ್ಬೆಟ್ಟು ಮುಖ್ಯಮಂತ್ರಿಯಾಗಿದ್ದು ಕಾಂಗ್ರೆಸ್‌ನವರು ಹೇಳಿದ್ದಕ್ಕೆಲ್ಲಾ ಹೆಬ್ಬೆಟ್ಟು ಒತ್ತುತ್ತಿದ್ದಾರೆ. ಮುಖ್ಯ ಕಾರ್ಯದರ್ಶಿ ಹುದ್ದೆ, ಕೆಪಿಎಸ್ಸಿ ಅಧ್ಯಕ್ಷರ ಹುದ್ದೆ ಆಯ್ಕೆಯಲ್ಲಿ ಕಾಂಗ್ರೆಸ್‌ನವರು ಹೇಳಿದ ಹಾಗೆ ಹೆಬ್ಬೆಟ್ಟು ಸಹ ಒತ್ತಿದ್ದಾರೆ. ಕಾಂಗ್ರೆಸ್‌ ಪಕ್ಷ ಮೈತ್ರಿ ಧರ್ಮವನ್ನು ಪಾಲಿಸುತ್ತಿಲ್ಲ. ಹೀಗಾದರೆ ಕಷ್ಟವಾಗುತ್ತದೆ,ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನವರು ಮೊದಲು ಯಾವುದೇ ಕಂಡೀಷನ್‌ ಇಲ್ಲ ಎಂದು ಹೇಳಿದ್ದರೂ, ಈಗ ಎಲ್ಲದಕ್ಕೂ ಕಂಡಿಷನ್‌ ಹಾಕುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿಯೂ ಒಗ್ಗಟ್ಟಿಲ್ಲ. ಸಿದ್ದರಾಮಯ್ಯ, ಎಸ್‌.ಆರ್‌.ಪಾಟೀಲರನ್ನು ಸಭಾಪತಿ ಮಾಡಬೇಕೆಂದಿದ್ದರು. ಪರಮೇಶ್ವರ್‌, ಪ್ರತಾಪ್‌ಚಂದ್ರಶೆಟ್ಟಿಯವರನ್ನು ಮಾಡಿದ್ದಾರೆ. ಕಾಂಗ್ರೆಸ್‌ನವರ ಈ ವರ್ತನೆಯನ್ನು ಪ್ರಶ್ನಿಸುವಂತೆ ಪಕ್ಷದ ನಾಯಕರಿಗೆ ಹೇಳಿದ್ದೇನೆ ಎಂದು ಹೇಳಿದರು.

ಪಾಟೀಲ್‌ ಅಸಮಾಧಾನ
ಎಸ್‌.ಆರ್‌.ಪಾಟೀಲ್‌ ಕೂಡ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ನಾನು ಕುರ್ಚಿ ಪಡೆಯಲು ಲಾಬಿ ನಡೆಸಿರಲಿಲ್ಲ. ಸಚಿವ ಸ್ಥಾನಕ್ಕೂ ಲಾಬಿ ನಡೆಸಿಲ್ಲ. ಈ ಹಿಂದೆ ಮೂರು ವರ್ಷ ಎರಡು ತಿಂಗಳು ಮಂತ್ರಿಯಾಗಿ ಮೂರು ಕೋಟಿ ಸಾಲ ಮಾಡಿಕೊಂಡಿದ್ದೆ. ಈಗ ಮತ್ತೆ ಎರಡು ವರ್ಷ ಮಂತ್ರಿಯಾದರೆ ಮೂರು ಕೋಟಿ ಸಾಲ ಮಾಡಿಕೊಳ್ಳಬೇಕಿತ್ತು. ನನ್ನನ್ನು ಮಂತ್ರಿ ಮಾಡದೇ ಒಳ್ಳೆಯ ಕೆಲಸ ಮಾಡಿದ್ದಾರೆ,ಎಂದು ಪಾಟೀಲ್‌ ನಾಯಕರ ವಿರುದ್ಧ ಪರೋಕ್ಷ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್‌ನ ಲಿಂಗಾಯತ ಶಾಸಕರು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರನ್ನು ಪ್ರತಾಪ್‌ಚಂದ್ರ ಶೆಟ್ಟಿ ಆಯ್ಕೆ ಹಿಂದಿನ ರಾಜಕಾರಣವನ್ನು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಶಾಸಕರ ಅಸಮಾಧಾನವನ್ನು ತಣಿಸಲು ಹೈಕಮಾಂಡ್‌ ಸೂಚಿಸಿದಂತೆ ನಾವು ನಡೆದುಕೊಂಡಿದ್ದೇವೆ. ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದು ಪರಮೇಶ್ವರ್‌ ಸಮಜಾಯಿಷಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಜೆಡಿಎಸ್‌ನವರ ಆಂತರಿಕ ವಿಚಾರದಲ್ಲಿ ನಾನು ತಲೆ ಹಾಕುವುದಿಲ್ಲ. ಆದರೆ, ಹಿರಿಯರಾದ ಹೊರಟ್ಟಿಯವರಿಗೆ ಈಗಲಾದರೂ ಜ್ಞಾನೋದಯವಾಗಿದೆಯಲ್ಲ. ಇನ್ನು ಮುಂದಾದರೂ ಎಚ್ಚರದಿಂದ ರಾಜಕಾರಣ ಮಾಡಲಿ.
– ಬಿ.ಎಸ್‌.ಯಡಿಯೂರಪ್ಪ, ಪ್ರತಿಪಕ್ಷದ ನಾಯಕ  

No Comments

Leave A Comment