Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಉಡುಪಿ ಶ್ರೀಕೃಷ್ಣಮಠದ ಗರ್ಭಗುಡಿಯ ಗೋಪುರಕ್ಕೆ ಚಿನ್ನದ ತಗಡು ಹೊದಿಸುವ ಕಾರ್ಯಕ್ರಮ ಅದ್ದೂರಿಯ ಚಾಲನೆ

ಉಡುಪಿ: ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಸಂಕಲ್ಪದಂತೆ ಶ್ರೀಕೃಷ್ಣ ದೇವರ ಗರ್ಭಗುಡಿಯ ಗೋಪುರಕ್ಕೆ ಚಿನ್ನದ ತಗಡನ್ನು ಹೊದೆಸುವ ಕಾರ್ಯ ಬುಧವಾರ ಬೆಳಗ್ಗೆ ಆರಂಭಗೊಂಡಿತು.

ಪಲಿಮಾರು ಶ್ರೀಗಳು ಆಶೀರ್ವಚನ ನೀಡಿ, ಸುವರ್ಣ ಗೋಪುರವನ್ನು ಶ್ರೀಕೃಷ್ಣನೇ ಮಾಡಿಸುತ್ತಿದ್ದಾನೆ. ಶ್ರೀಕೃಷ್ಣ ಕಿರುಬೆರಳಲ್ಲಿ ಗೋವರ್ಧನ ಗಿರಿಯನ್ನು ಎತ್ತಿದಾಗ ಗೋಪಾಲಕರು ಕೋಲಿನಿಂದ ಬೆಟ್ಟವನ್ನು ಎತ್ತಿ ಹಿಡಿಯಲು ಪ್ರಯತ್ನಿಸುತ್ತಿದ್ದರು. ಬೆಟ್ಟವನ್ನು ಶ್ರೀಕೃಷ್ಣನೇ ಹಿಡಿದೆತ್ತಿದರೂ ಅದರ ಪುಣ್ಯವನ್ನು ಗೋಪಾಲಕರಿಗೆ ನೀಡಿದ. ಸುವರ್ಣ ಗೋಪುರವನ್ನೂ ಆತನೇ ಮಾಡಿಸಿ ಅದರ ಪುಣ್ಯವನ್ನು ನಮಗೆ ನೀಡುತ್ತಿದ್ದಾನೆ ಎಂದರು. ಶ್ರೀ ಸೋಸಲೆ ವ್ಯಾಸರಾಜರ ಮಠದ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಇದು ಐತಿಹಾಸಿಕ ದಿನ. ಶ್ರೀಕೃಷ್ಣ ಪ್ರಸನ್ನನಾಗಿ ದೇಶಕ್ಕೆ ಅನುಗ್ರಹ ಮಾಡಲಿದ್ದಾನೆ ಎಂದರು.

 ಹರಿದು ಬಂತು ಚಿನ್ನ ಸಮಾರಂಭದ ವೇದಿಕೆಯಲ್ಲಿಯೇ ಹೊಸಪೇಟೆಯ ಗಣಿ ಉದ್ಯಮಿ ಪತ್ತಿಕೊಂಡ ಪ್ರಭಾಕರ್‌ ಅವರು 2 ಕೆ.ಜಿ., ಉದ್ಯಮಿಗಳಾದ ಭಾಸ್ಕರ ಚೆನ್ನೈ, ಅನಂತ ಸಂಡೂರು ತಲಾ 1 ಕೆ.ಜಿ., ರಮೇಶ್‌ ಪೆಜತ್ತಾಯ ಮತ್ತು ಶ್ರೀನಿವಾಸ ಪೆಜತ್ತಾಯ ಸಹೋದರರು 1 ಕೆ.ಜಿ., ವಿಜಯಾನಂದ ಮುಂಬಯಿ, ರಮೇಶ್‌ ಹೈದರಾಬಾದ್‌ ಮತ್ತು ಬೆಂಗಳೂರಿನ ಸಮರ್ಪಣೆ ಸಮೂಹ ಸಂಸ್ಥೆಯ ಸಿಇಒ ದಿಲೀಪ್‌ ಸತ್ಯ ತಲಾ 1 ಕೆ.ಜಿ., ಮೋಹನ ಆಚಾರ್ಯ ಮತ್ತು ಕೆಲವು ಭಕ್ತರು ಒಟ್ಟು ಸೇರಿ 6 ಲ. ರೂ. ಮೌಲ್ಯದ ಚಿನ್ನವನ್ನು ಸಮರ್ಪಿಸಿದರು. ವಿಧಾನಪರಿಷತ್‌ ಸದಸ್ಯ, ಕರ್ನಾಟಕ ಜುವೆಲರ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಟಿ.ಎ. ಶರವಣ 5 ಲ.ರೂ. ಮೌಲ್ಯದ ಚಿನ್ನ ಸಮರ್ಪಿಸುವುದಾಗಿ, ಅಲ್ಲದೆ ರಾಜ್ಯದ ಎಲ್ಲ ಜುವೆಲರಿ ಮಾಲಕರಿಗೂ ಗರಿಷ್ಠ ಚಿನ್ನ ಸಮರ್ಪಿಸುವಂತೆ ಮನವಿ ಮಾಡುವುದಾಗಿ ಹೇಳಿದರು. ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಕೊಡಗಿನ ಹಳ್ಳಿಯೊಂದನ್ನು ದತ್ತು ತೆಗೆದುಕೊಳ್ಳುವ ಉಡುಪಿ ಶ್ರೀಕೃಷ್ಣ ಮಠದ ಯೋಜನೆಯನ್ನು ಶ್ಲಾಸಿದರು.

ಒಡವೆಗಳ ಸಮರ್ಪಣೆ ವಿಧಾನಪರಿಷತ್‌ ಮಾಜಿ ಸದಸ್ಯ ಗೋ. ಮಧುಸೂದನ ಅವರ ಪತ್ನಿ ವಿದ್ಯಾ ಎರಡು ಉಂಗುರ, ವಿನುತಾ ಶ್ರೀರಂಗ ಮಳಗಿ ಎರಡು ಬಳೆ, ಇನ್ನೋರ್ವ ಮಹಿಳೆ ತನ್ನ ಕಿವಿಯೋಲೆಗಳನ್ನು ಸಮರ್ಪಿಸಿ ಭಾವಪರವಶರಾದರು. ವೇದಿಕೆಯಲ್ಲಿಯೇ ಚಿನ್ನ ಕರಗಿಸಿ ಎರಕ ಹೊಯ್ದು, ಅದನ್ನು ಬಡಿದು ಹದಮಾಡುವ ಕಾರ್ಯ ನಡೆಯಿತು. ನಿರ್ಮಾಣ ಕಾರ್ಯದ ಉಸ್ತುವಾರಿ ಯು. ವೆಂಕಟೇಶ ಶೇಟ್‌, ಮರದ ಕೆಲಸ ನಿರ್ವಹಿಸಲಿರುವ ಗಣೇಶ್‌ ಹಿರಿಯಡಕ, ಚಿನ್ನದ ಕೆಲಸ ನಡೆಸಲಿ ರುವ ಗಣಪತಿ ಆಚಾರ್ಯ, ಸುರೇಶ್‌ ಶೇಟ್‌ ಮತ್ತು ಅಶೋಕ್‌ ಹಾಗೂ ತಗಡಿನ ಕೆಲಸ ನಡೆಸಲಿರುವ ನಾಗರಾಜ ಶರ್ಮ ಕೆಲಸ ಆರಂಭಿಸಿದರು. ಚಿನ್ನ ಅರ್ಪಣೆಗೆ ಮಾಸಿಕ ಕಂತು ಕಂತಿನಲ್ಲಿ ಹಣ ಪಾವತಿ ಮೂಲಕ ಸುವರ್ಣ ಗೋಪುರಕ್ಕೆ ಚಿನ್ನ ಸಮರ್ಪಿ ಸುವ ಅವಕಾಶವನ್ನು ಭೀಮಾ ಗೋಲ್ಡ್‌ ತನ್ನೆಲ್ಲ ಶಾಖೆಗಳಲ್ಲಿ ನೀಡಿದೆ. 11 ತಿಂಗಳ ಅನಂತರ ಪಾವತಿ ಮೌಲ್ಯದ ಚಿನ್ನವನ್ನು ಶ್ರೀಕೃಷ್ಣ ಮಠಕ್ಕೆ ನೀಡಲಾಗುವುದು ಎಂದು ಭೀಮಾ ಗೋಲ್ಡ್‌ನ ಮಹೇಶ್‌ ತಿಳಿಸಿದರು.

ಐಬಿಎಂ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ನಟ ರಾಜ್‌ ರಾಧಾಕೃಷ್ಣನ್‌, ಹೊಸಪೇಟೆಯ ಗಣಿ ಉದ್ಯಮಿ ಪತ್ತಿಕೊಂಡ ಪ್ರಭಾಕರ್‌, ಬೆಂಗಳೂರಿನ ಸಮರ್ಪಣೆ ಸಮೂಹ ಸಂಸ್ಥೆಗಳ ಸಿಇಒ ದಿಲೀಪ್‌ ಸತ್ಯ, ಕಟೀಲಿನ ವಾಸುದೇವ ಆಸ್ರಣ್ಣ, ಜಿಲ್ಲಾ ಜುವೆ ಲರ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಜಯ ಆಚಾರ್ಯ ಉಪಸ್ಥಿತರಿದ್ದರು. ಪ್ರಹ್ಲಾದ ಆಚಾರ್ಯ ಸ್ವಾಗತಿಸಿದರು. ಮೋಹನ ಆಚಾರ್ಯ ಪ್ರಸ್ತಾವಿಸಿದರು. ಡಾ| ಕೊರ್ಲಹಳ್ಳಿ ವೆಂಕಟೇಶ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿ ದರು. ಬಿ. ಗೋಪಾಲಾಚಾರ್ಯ ವಂದಿಸಿದರು.

No Comments

Leave A Comment