Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಮಂಗಗಳಿಂದ “ಕಲ್ಲೆಸೆದು ಹತ್ಯೆ’-ಉತ್ತರ ಪ್ರದೇಶದ ಭಾಗಪತ್‌ನಲ್ಲಿ ವಿಚಿತ್ರ ಘಟನೆ

ಭಾಗಪತ್‌: ಮಂಗಗಳೇ ಮಾನವ ನನ್ನು ಕಲ್ಲು ಎಸೆದು ಕೊಂದ ಘಟನೆ ಎಲ್ಲಿಯಾದರೂ ನಡೆದದ್ದು ಉಂಟೇ? ವಿಚಿತ್ರವಾದರೂ ಸತ್ಯ ಘಟನೆ ಉತ್ತರ ಪ್ರದೇಶದ ಭಾಗಪತ್‌ ಜಿಲ್ಲೆಯ ಟಿಕ್ರಿ ಗ್ರಾಮದಲ್ಲಿ ನಡೆದಿದೆ. ಧರ್ಮಪಾಲ್‌ (72) ಎಂಬವರು ಹವನಕ್ಕೋಸ್ಕರ ಕಟ್ಟಿಗೆ ಗಳನ್ನು ಸಂಗ್ರಹಿಸಲು ತಮ್ಮ ಗ್ರಾಮದಲ್ಲಿ ಶಿಥಿಲವಾಗಿ ಬಿದ್ದಿದ್ದ ಕಟ್ಟಡದ ಸಮೀಪಕ್ಕೆ ತೆರಳಿದ್ದರು. ಅಲ್ಲಿಗೆ ಹೋಗಿ ಕಟ್ಟಿಗೆ ಸಂಗ್ರಹಿಸುತ್ತಿದ್ದಾಗ ಮಂಗಗಳು ಅವರನ್ನು ಗುರಿಯಾಗಿಸಿಕೊಂಡು ಇಟ್ಟಿಗೆ ಎಸೆದಿವೆ. ತಲೆಗೆ, ಎದೆಗೆ ಇಟ್ಟಿಗೆ ಬಿದ್ದು ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೂಕ್ತ ಚಿಕಿತ್ಸೆ ನೀಡಿದರೂ ಅವರು ಕೊನೆಯುಸಿರೆಳೆದರು.

ಧರ್ಮಪಾಲ್‌ ಸಹೋದರ ಕೃಷ್ಣಪಾಲ್‌ ಸಿಂಗ್‌ ಪೊಲೀಸರಿಗೆ ನೀಡಿದ ದೂರಿನ ಪ್ರಕಾರ ಮಂಗಗಳು ಈ ಕೃತ್ಯವೆಸಗಿವೆ ಎಂದು ಆರೋಪಿಸಿದ್ದಾರೆ. ಪೊಲೀಸರಿಗೆ ಯಾವ ಆಧಾರದ ಮೇಲೆ ಕೇಸು ದಾಖಲಿಸ ಬೇಕೆಂದು ಗೊಂದಲಕ್ಕೆ ಒಳಗಾಗಿದ್ದಾರೆ. ಕೇಸ್‌ ಡೈರಿಯಲ್ಲಿ ಅದನ್ನೊಂದು ಅಪಘಾತ ಎಂದು ದಾಖಲಿಸಿದ್ದಾರೆ. ಇದರಿಂದ ತೃಪ್ತರಾಗದ ಧರ್ಮಪಾಲ್‌ ಸಹೋದರ  ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಲು ನಿರ್ಧರಿಸಿದ್ದಾರೆ. ಅವರ ಪ್ರಕಾರ ಮಂಗಗಳು 20 ಇಟ್ಟಿಗೆಗಳನ್ನು ಸಹೋದರನ ಮೇಲೆ ಎಸೆದಿವೆ. ಹಣೆ, ಎದೆ, ಕಾಲುಗಳಿಗೆ ಅದರಿಂದ ಜಖಂ ಆಗಿದೆ. ಅವುಗಳ ವಿರುದ್ಧ ಲಿಖೀತ ದೂರು ನೀಡಿದ್ದೇವೆ. ಆದರೆ ಪೊಲೀಸರು ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ.

ಗ್ರಾಮಸ್ಥರು ಕೂಡ ಮಂಗಗಳ ಹಾವಳಿ ಬಗ್ಗೆ ಮಾಹಿತಿ ನೀಡಿದ್ದಾರೆ. ಠಾಣಾಧಿಕಾರಿ ಚಿತ್ವಾನ್‌ ಸಿಂಗ್‌ ಪ್ರತಿಕ್ರಿಯೆ ನೀಡಿ ಮಂಗಗಳ ಮೇಲೆ ಕೇಸು ದಾಖಲಿಸಲು ಹೇಗೆ ಸಾಧ್ಯ? ಒಂದು ವೇಳೆ ಹಾಗೆ ಮಾಡಿದರೆ ನಾವೇ ನಗೆಪಾಟಲಿ ಗೀಡಾಗುತ್ತೇವೆ. ಘಟನೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ’ ಎಂದು ಹೇಳಿದ್ದಾರೆ.

No Comments

Leave A Comment