Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಧರ್ಮಸ್ಥಳ, ಶೃಂಗೇರಿಗೆ ಅನಿತಾ ಭೇಟಿ

ಶೃಂಗೇರಿ/ಬೆಳ್ತಂಗಡಿ: ಕೋಡಿ ಮಠದ ಸ್ವಾಮೀಜಿಯವರ ಬಗ್ಗೆ ಗೌರವವಿದೆ. ಆದರೆ, ಅವರು ಸರಕಾರ ಉರುಳುವ ಕುರಿತು ಮಾತನಾಡುವುದು ಸರಿಯಲ್ಲ. ಎಲ್ಲವೂ ದೇವರ ಇಚ್ಛೆ. ಹೀಗಾಗಿ, ಅವರು ಅಂಥ ಹೇಳಿಕೆ ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ, ಅನಿತಾ ಕುಮಾರಸ್ವಾಮಿ ಹೇಳಿದರು.

ಶುಕ್ರವಾರ ಧರ್ಮಸ್ಥಳ ಹಾಗೂ ಶೃಂಗೇರಿಗೆ ಭೇಟಿ ನೀಡಿದ ಅವರು, ದೇವರ ದರ್ಶನ ಪಡೆದು, ಬಿ ಫಾರಂಗೆ ಪೂಜೆ ಸಲ್ಲಿಸಿದರು. ಬೆಳಗ್ಗೆ 10.15ಕ್ಕೆ ಧರ್ಮಸ್ಥಳಕ್ಕೆ ಆಗಮಿಸಿದ ಅವರು, ಮಂಜುನಾಥನ ದರ್ಶನ ಪಡೆದರು. ಬಳಿಕ, ಬೀಡಿಗೆ ಆಗಮಿಸಿ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಹೇಮಾವತಿ ವೀ.ಹೆಗ್ಗಡೆ, ಡಿ.ಹಷೇìಂದ್ರ ಕುಮಾರ್‌ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕ್ಷೇತ್ರದ
ಪರವಾಗಿ ಧರ್ಮಾಧಿಕಾರಿಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ, ಪಾರ್ಶ್ವನಾಥ್‌ ಜೈನ್‌ ಜತೆಗಿದ್ದರು. ನಂತರ, ಹೆಲಿಕಾಪ್ಟರ್‌ನಲ್ಲಿ ಕೊರಡಕಲ್ಲು ಹೆಲಿಪ್ಯಾಡ್‌ಗೆ ಆಗಮಿಸಿದ ಅನಿತಾ ಕುಮಾರಸ್ವಾಮಿ, ಅಲ್ಲಿಂದ ನೇರವಾಗಿ ಶೃಂಗೇರಿ ಮಠಕ್ಕೆ ಆಗಮಿಸಿದರು. ಮಠದ ಹೊರ ಪ್ರಾಂಗಣದ ವಿದ್ಯಾಶಂಕರ ದೇಗುಲ, ಸುಬ್ರಹ್ಮಣ್ಯ ಸ್ವಾಮಿ, ತೋರಣ ಗಣಪತಿ, ಶಂಕರಾಚಾರ್ಯ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಿದರು. ಬಳಿಕ, ಶಾರದಾಂಬಾ ದೇಗುಲಕ್ಕೆ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿದರು.

ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ನಾಮಪತ್ರ ಸಲ್ಲಿಸಲು ಪಕ್ಷ ನೀಡಿದ್ದ “ಬಿ’ ಫಾರಂನ್ನು ದೇವರ ಸನ್ನಿಧಿಯಲ್ಲಿಟ್ಟು ಪೂಜೆ ಸಲ್ಲಿಸಿದರು. ನಂತರ, ಶಾರದಾಂಬಾ ದೇಗುಲದಲ್ಲಿ ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಉಭಯ ಜಗದ್ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
15ರಂದು ನಾಮಪತ್ರ ಸಲ್ಲಿಕೆ: ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿ, ಶೃಂಗೇರಿ ಹಾಗೂ ಧರ್ಮಸ್ಥಳ ಕ್ಷೇತ್ರಕ್ಕೆ ಬರುತ್ತಿರುತ್ತೇವೆ. ರಾಮನಗರ ಕ್ಷೇತ್ರದ ಉಪಚುನಾವಣೆಗೆ ಅ.15ರಂದು ನಾಮಪತ್ರ ಸಲ್ಲಿಸುತ್ತಿದ್ದು, ಬಿ ಫಾರಂಗೆ ಪೂಜೆ ಸಲ್ಲಿಸುವುದಕ್ಕಾಗಿ ಬಂದಿದ್ದೇನೆ ಎಂದರು. ರಾಮನಗರ
ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಸ್ಪರ್ಧಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಂಡಾಯವಿಲ್ಲ. ಈಗಾಗಲೇ ಡಿ.ಕೆ.ಶಿವಕುಮಾರ್‌ ಹಾಗೂ ಅವರ ಸಹೋದರ ನಮಗೆ ಬೆಂಬಲ ಸೂಚಿಸಿದ್ದಾರೆ. ಇಕ್ಬಾಲ್‌ ಸ್ಪರ್ಧಿಸುತ್ತಿಲ್ಲ, ಕಾದು ನೋಡಿ ಎಂದರು. ಸಚಿವ ಎನ್‌.ಮಹೇಶ್‌ ರಾಜೀನಾಮೆ ಕೊಟ್ಟರೂ ಕುಮಾರಸ್ವಾಮಿಗೆ ಬೆಂಬಲ ಇದೆ, ಗೌರವವೂ ಇದೆ ಎಂದಿದ್ದಾರೆ. ಅವರು ಪಕ್ಷದ ತೀರ್ಮಾನದಂತೆ ರಾಜೀನಾಮೆ ಕೊಟ್ಟಿರಬಹುದು. ಅದರ ಕುರಿತು ನಮಗೆ ಮಾಹಿತಿ ಇಲ್ಲ ಎಂದರು.

ಮಂಡ್ಯ: ಜೆಡಿಎಸ್‌ನಲ್ಲಿ ಮೂಡದ ಒಮ್ಮತ
ಬೆಂಗಳೂರು: ಮಂಡ್ಯ ಲೋಕಸಭೆಯ ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ಸಂಬಂಧ ಜೆಡಿಎಸ್‌ನಲ್ಲೂ ಇನ್ನೂ ಸ್ಪಷ್ಟತೆ ಮೂಡಿಲ್ಲ. ಗುರುವಾರ ರಾತ್ರಿ ದೇವೇಗೌಡರ ನಿವಾಸದಲ್ಲಿ ಮಂಡ್ಯ ಜಿಲ್ಲಾ ಮುಖಂಡರ ಸಭೆ ನಡೆದರೂ ಒಮ್ಮತ ಮೂಡಲಿಲ್ಲ. ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು
ದೇವೇಗೌಡರಿಗೆ ವಹಿಸಲಾಗಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ಜತೆ ಮತ್ತೂಂದು ಸುತ್ತಿನ ಮಾತುಕತೆಯ ನಂತರ ಅಭ್ಯರ್ಥಿಯನ್ನು
ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಮತ್ತೂಂದೆಡೆ, ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧವೂ ಜೆಡಿಎಸ್‌ನಲ್ಲೂ ಗೊಂದಲವಿದೆ. ಮೊದಲಿಗೆ ಆ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಡುವ ಒಪ್ಪಂದವಾಗಿತ್ತು. ಆದರೆ, ಕಾಂಗ್ರೆಸ್‌ನಲ್ಲಿ ಸ್ಪರ್ಧೆಗೆ ಅಭ್ಯರ್ಥಿಗಳು ಹಿಂದೇಟು ಹಾಕಿದ್ದರಿಂದ ಜೆಡಿಎಸ್‌ -ಕಾಂಗ್ರೆಸ್‌ನ ಮೈತ್ರಿ ಅಭ್ಯರ್ಥಿಯನ್ನು ನಿಲ್ಲಿಸುವ ಚಿಂತನೆ ನಡೆದಿದೆ. ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಅವರನ್ನು ಕಣಕ್ಕಿಳಿಸಲು ದೇವೇಗೌಡರು
ಮುಂದಾಗಿದ್ದಾರೆ. ಆದರೆ, ಮಧು ಬಂಗಾರಪ್ಪ ಅ.5ರಂದೇ ವಿದೇಶಕ್ಕೆ ಹೋಗಿದ್ದು, ಅ.16ರಂದು ವಾಪಸ್ಸಾಗಲಿದ್ದಾರೆ. ನಾಮಪತ್ರ ಸಲ್ಲಿಕೆಗೂ ಅ.16 ಕೊನೆಯ ದಿನ. ಕೊನೆಯ ದಿನ ವಿದೇಶದಿಂದ ಬಂದು ಮಧು ಬಂಗಾರಪ್ಪ ನಾಮಪತ್ರ ಸಲ್ಲಿಸುತ್ತಾರಾ? ಎಂಬುದು ಇನ್ನೂ ಖಚಿತಗೊಂಡಿಲ್ಲ.

ಮೂಲಗಳ ಪ್ರಕಾರ, ಮಧು ಬಂಗಾರಪ್ಪ ಅವರ ಬಳಿ ಚುನಾವಣೆ ಸ್ಪರ್ಧೆ ಬಗ್ಗೆ ಮಾತುಕತೆಯನ್ನೇ ನಡೆಸಿಲ್ಲ. ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಯಲು ಹಿಂದೇಟು ಹಾಕುತ್ತಿರುವುದರಿಂದ ಮಧು ಬಂಗಾರಪ್ಪ ಅವರನ್ನು ಅಭ್ಯರ್ಥಿ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಲಾಗಿದೆ. ಹೀಗಾಗಿ, ಮಂಡ್ಯ ಹಾಗೂ ಶಿವಮೊಗ್ಗ ಅಭ್ಯರ್ಥಿ ಆಯ್ಕೆ ಬಗ್ಗೆ ಜೆಡಿಎಸ್‌ನಲ್ಲಿ ಗೊಂದಲ ಇನ್ನೂ ಬಗೆಹರಿದಿಲ್ಲ.

No Comments

Leave A Comment