ಭಾರೀ ಮಳೆ ಮುನ್ಸೂಚನೆ: ನೌಕಾದಳ ಸರ್ವ ಸನ್ನದ್ಧ
ಕೊಚ್ಚಿ: ಅರಬೀ ಸಮುದ್ರದಲ್ಲಿ ಉಂಟಾಗಿರುವ ವಾಯು ಭಾರ ಕುಸಿತದಿಂದ ಚಂಡ ಮಾರುತ ಸೃಷ್ಟಿಯಾಗಿ ಭಾರೀ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿರುವುದರಿಂದ ಕೇರಳದಾದ್ಯಂತ ಕಟ್ಟೆಚ್ಚರ ವಹಿಸಲಾಗು ತ್ತಿದೆ. ನೌಕಾದಳ ಸರ್ವ ಸನ್ನದ್ಧ ವಾಗಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಹವಾಮಾನ ಇಲಾಖೆ ರೆಡ್ಅಲರ್ಟ್ ಘೋಷಿಸಿರುವುದರಿಂದ ನೌಕಾದಳವು ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಎಚ್ಚರಿಕೆ ಗಳನ್ನು ಬಿತ್ತರಿಸಲಾರಂಭಿಸಿದೆ. ನೌಕಾದಳದ ಹಡಗು, ವಿಮಾನಗಳು ತುರ್ತು ಸಂದರ್ಭಕ್ಕೆ ಸ್ಪಂದಿಸಲು ಕೇರಳ ಮತ್ತು ಲಕ್ಷದ್ವೀಪಗಳ ಕಿನಾರೆಯಲ್ಲಿ ಸಿದ್ಧವಾಗಿ ನಿಂತಿವೆ ಎಂದು ವಕ್ತಾರರು ವಿವರಿಸಿದ್ದಾರೆ.
ವಾಯುಭಾರ ಕುಸಿತ
ಅರಬಿ ಸಮುದ್ರದಲ್ಲಿ ಉಂಟಾಗಿದ್ದ ನಿಮ್ನ ಒತ್ತಡವು ಮತ್ತಷ್ಟು ತೀವ್ರಗೊಂಡು ವಾಯುಭಾರ ಕುಸಿತವಾಗಿ ಮಾರ್ಪಟ್ಟಿದೆ. ಇದು ಮುಂದಿನ 36 ಗಂಟೆಗಳಲ್ಲಿ ಚಂಡ ಮಾರುತವಾಗಲಿದೆ. ಅನಂತರ ಅದು ಒಮಾನ್ ಕರಾವಳಿಯತ್ತ ಸಾಗಿದರೂ ಇದರಿಂದಾಗಿ ಕೇರಳ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಸಿಡಿಲು, ಗಾಳಿ ಸಹಿತ ಭಾರೀ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.