ಇಂಡೋನೇಷ್ಯಾದಲ್ಲಿ ಸುನಾಮಿ ಸಾವಿನ ಸಂಖ್ಯೆ 1200
ಪಾಲು (ಇಂಡೋನೇಷ್ಯಾ): ಇಲ್ಲಿನ ಸುಲಾವೇಸಿಯಲ್ಲಿ ಶುಕ್ರವಾರ ಸಂಭವಿಸಿದ್ದ ಪ್ರಬಲ “ಭೂಕಂಪ-ಸುನಾಮಿ’ಯಲ್ಲಿ ಸಾವಿಗೀಡಾದವರ ಸಂಖ್ಯೆ 1200 ದಾಟಿದೆೆ. ಶನಿವಾರದ ಹೊತ್ತಿಗೆ ನಾಲೂ°ರರ ಸನಿಹದಲ್ಲಿದ್ದ ಸಾವಿನ ಸಂಖ್ಯೆ ರವಿವಾರಕ್ಕೆ ಮೂರು ಪಟ್ಟಾಗಿರುವುದು ಸುನಾಮಿಯ ಭೀಕರತೆಯನ್ನು ಬಿಚ್ಚಿಟ್ಟಿದೆ. ಇದರ ನಡುವೆಯೇ, ಇಂಡೋನೇಷ್ಯಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರರಾದ ಸುಟೊಪೊ ಪುವೊì ನುಗ್ರೊಹೊ ಅವರು, ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಂಭವವಿದ್ದು, ರವಿವಾರದಿಂದಲೇ ಅನೇಕ ಶವಗಳನ್ನು ಸಾಮೂಹಿಕವಾಗಿ ಅಂತ್ಯಸಂಸ್ಕಾರ ನಡೆಸಲು ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.
ಸಾಂಕ್ರಾಮಿಕ ರೋಗ: ಸುನಾಮಿಯ ಭೀಕರತೆಗೆ ತುತ್ತಾಗಿರುವ ಪಾಲು ಹಾಗೂ ಡೊಂಗ್ಗಾಲ ನಗರಗಳಲ್ಲಿ ಎಲ್ಲಿ ನೋಡಿದರೂ, ಉರುಳಿದ ಕಟ್ಟಡಗಳ ಅವ ಶೇಷಗಳು, ರಸ್ತೆಗಳಲ್ಲಿ ಒಂದರ ಮೇಲೊಂದು ಹೇರಿಕೊಂಡಿರುವ ಕಾರು, ವಾಹನಗಳು, ಧರೆಗುರುಳಿದ ಮರ, ವಿದ್ಯುತ್ ಕಂಬಗಳೇ ಕಣ್ಣಿಗೆ ರಾಚುತ್ತವೆ. ಇದೆಲ್ಲರದ ನಡುವೆಯೇ, ಸುನಾಮಿಯಿಂದ ಬದುಕುಳಿದವರಲ್ಲಿ ಹಲವರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿದ್ದು, ಇದು ಸಮಸ್ಯೆಯ ಮತ್ತೂಂದು ಮಗ್ಗುಲನ್ನು ಅನಾವರಣ ಗೊಳಿಸಿದೆ. ಗಾಯಾಳುಗಳಿಂದ ಭರ್ತಿಯಾಗಿರುವ ಆಸ್ಪತ್ರೆಗಳ ಮುಂದೆ ಈಗ ರೋಗದ ಸೋಂಕು ತಗುಲಿದವರೂ ದಿನವಿಡೀ ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಲು, ಡೊಂಗ್ಗಾಲ ನಗರಗಳ ಎಲ್ಲೆಲ್ಲೂ ಆ್ಯಂಬುಲೆನ್ಸ್ಗಳ ಶಬ್ದ ಮಾರ್ದನಿಸುತ್ತಿದೆ. ಜತೆಗೆ, ಶುದ್ಧ ಕುಡಿಯುವ ನೀರಿನ ಸಮಸ್ಯೆಯೂ ಉದ್ಭವವಾಗಿದ್ದು, ಜನರನ್ನು ಮತ್ತಷ್ಟು ಹೈರಾಣಾಗಿಸಿದೆ.
ಮೋದಿ ಸಂತಾಪ: ಇಂಡೋನೇಷ್ಯಾದ ಸದ್ಯದ ಪರಿಸ್ಥಿತಿಗೆ ಮಿಡಿದಿರುವ ಪ್ರಧಾನಿ ನರೇಂದ್ರ ಮೋದಿ, ಘಟನೆಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು, ಇಂಡೋನೇಷ್ಯಾಕ್ಕೆ ಬೇಕಾದ ಅಗತ್ಯ ಸಹಾಯವನ್ನು ಭಾರತ ನೀಡಲಿದೆ ಎಂದು ಘೋಷಿಸಿದ್ದಾರೆ.
ಫಿಜಿಯಲ್ಲಿ ಭೂಕಂಪ
ಇಂಡೋನೇಷ್ಯಾದಲ್ಲಿನ ಭೂಕಂಪದ ಸ್ಥಿತಿಯ ಕರಾಳತೆ ರಾಚುತ್ತಿರುವ ಈ ಸಂದರ್ಭದಲ್ಲೇ ಫಿಜಿಯಲ್ಲಿ ರವಿವಾರ ಬೆಳಗ್ಗೆ ಪ್ರಬಲ ಭೂಕಂಪ ಉಂಟಾಗಿದೆ. ರಿಕ್ಟರ್ ಮಾಪಕದಲ್ಲಿ ಈ ಭೂಕಂಪದ ತೀವ್ರತೆ 6.6ರಷ್ಟಿತ್ತೆಂದು ಹೇಳಲಾಗಿದೆ. ಸೆ. 7ರಂದು ಈ ದ್ವೀಪರಾಷ್ಟ್ರದಲ್ಲಿ 7.8ರ ಪ್ರಬಲ ಭೂಕಂಪ ಉಂಟಾಗಿ ಭಾರೀ ಹಾನಿ ಉಂಟು ಮಾಡಿತ್ತು.