Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಕೊಡಗು – ಸಕಲೇಶಪುರ ಸಂತ್ರಸ್ತರಿಗೆ ಧರ್ಮಸ್ಥಳದಿಂದ 10 ಕೋ.ರೂ. ನೆರವು

ಬೆಳ್ತಂಗಡಿ: ಅತಿವೃಷ್ಟಿಯಿಂದ ವ್ಯಾಪಕ ಹಾನಿಗೊಳಗಾಗಿರುವ ಕೊಡಗು ಹಾಗೂ ಸಕಲೇಶಪುರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಒಟ್ಟು 10 ಕೋ.ರೂ. ನೀಡುವುದಾಗಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಘೋಷಿಸಿದ್ದಾರೆ. ಶುಕ್ರವಾರ ಶ್ರೀ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಹಾನಿಯ ಕುರಿತು ಕೊಡಗು ಜಿಲ್ಲೆಯಲ್ಲಿ ನಡೆಸಿದ ಸಮೀಕ್ಷಾ ವರದಿಯನ್ನು ನಿರ್ದೇಶಕ ಯೋಗೀಶ್‌ ನೀಡಿದರು. ಜಿಲ್ಲೆಯಲ್ಲಿ ಸುಮಾರು 1,715 ಗ್ರಾಮಾಭಿವೃದ್ಧಿ ಯೋಜನೆಯ ಕುಟುಂಬಗಳಿಗೆ ಹಾನಿಯಾಗಿದೆ. ಇದರಲ್ಲಿ 1 ಸಾವಿರ ಕುಟುಂಬಗಳ ಮನೆ ಬಹುತೇಕ ಹಾನಿಯಾಗಿದೆ. 2.50 ಕೋ.ರೂ.ಗಳ ಸೊತ್ತುಗಳು, 1 ಕೋ.ರೂ.ಗಳಿಗೂ ಮಿಕ್ಕಿದ ವ್ಯವಹಾರದ ವಸ್ತುಗಳಿಗೆ ಹಾನಿಯಾಗಿದೆ. 1,500 ಎಕರೆ ಕೃಷಿ ನಾಶವಾಗಿದ್ದು, ಅವರಿಗೆ ನೀಡಬೇಕಾದ ಸಹಕಾರದ ಕುರಿತು ಚರ್ಚೆ ನಡೆಸಲಾಯಿತು.

ಜಿಲ್ಲೆಯಲ್ಲಿ ಮನೆ ಕಳೆದುಕೊಂಡ 1,044 ಕುಟುಂಬಗಳಿಗೆ ಗೃಹ ನಿರ್ಮಾಣಕ್ಕೆ ತಲಾ 25 ಸಾವಿರ ರೂ.ಗಳಂತೆ 2.61 ಕೋ.ರೂ. ಮಂಜೂರು ಮಾಡಲಾಯಿತು. ನಿತ್ಯೋಪಯೋಗಿ ವಸ್ತು ಖರೀದಿಗೆ 1,335 ಮನೆಗಳಿಗೆ ತಲಾ 15 ಸಾವಿರ ರೂ.ನಂತೆ 2 ಕೋ.ರೂ. ಘೋಷಿಸಿದರು. 1,117 ಕುಟುಂಬಗಳ 1,450 ಎಕರೆ ಕೃಷಿ ನಾಶವಾಗಿದ್ದು, ಇವರಿಗೆ ಕೃಷಿ ಮರುನಿರ್ಮಾಣಕ್ಕೆ ತಲಾ 25 ಸಾವಿರ ರೂ.ಗಳಂತೆ 2.80 ಕೋ.ರೂ. ನೀಡಲು ನಿರ್ಧರಿಸಲಾಯಿತು.

ಸಕಲೇಶಪುರ ಹಾಗೂ ಅರಕಲಗೂಡು ಮೊದಲಾದ ಪ್ರದೇಶಗಳಲ್ಲಿ ಹಾನಿಯಾದ ಕುಟುಂಬಗಳಿಗೆ ತಲಾ 10 ಸಾವಿರ ರೂ.ನಂತೆ 60 ಲಕ್ಷ ರೂ. ಘೋಷಿಸಿದರು. ಒಟ್ಟು 8 ಕೋ.ರೂ.ಗಳನ್ನು ನೇರವಾಗಿ ಸಂತ್ರಸ್ತರಿಗೆ ತಲುಪಿಸುವಂತೆ ಧರ್ಮಾಧಿಕಾರಿಯವರು ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ಕಾರ್ಯಕರ್ತರಿಗೆ ಸೂಚಿಸಿದರು. ಸೂಕ್ತ ಕ್ರಿಯಾಯೋಜನೆ ಸಿದ್ಧಪಡಿಸಿ ನೀಡುವಂತೆ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್. ಎಚ್‌. ಮಂಜುನಾಥ್‌ ಅವರಿಗೆ ಸೂಚಿಸಿದರು.

ಸಿಎಂ ಪರಿಹಾರ ನಿಧಿಗೆ 
ಕ್ಷೇತ್ರದ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ 6,750 ಖಾಯಂ ಸಿಬಂದಿ ತಮ್ಮ 3 ದಿನದ ವೇತನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದು, ಅಷ್ಟೇ ಮೊತ್ತವನ್ನು ಯೋಜನೆಯಿಂದ ಸೇರಿಸಿ ಒಟ್ಟು 2 ಕೋ.ರೂ.ಗಳನ್ನು ಮುಖ್ಯಮಂತ್ರಿ ಕೊಡಗು ಪರಿಹಾರ ನಿಧಿಗೆ ಸಮರ್ಪಿಸಲು ತೀರ್ಮಾನಿಸಲಾಯಿತು. ಈ ಕುರಿತು ಯೋಜನೆಯ ಕಾರ್ಯಕರ್ತರ ನಿಯೋಗ ಬೆಂಗಳೂರಿಗೆ ತೆರಳಿ ಕೊಡಗು ಜಿಲ್ಲೆಯ ಹಾನಿಯ ವರದಿಯನ್ನು ನೀಡಿ 2 ಕೋ.ರೂ.ಗಳ ಚೆಕ್‌ ಹಸ್ತಾಂತರಿಸಲು ತೀರ್ಮಾನಿಸಲಾಯಿತು.

ಕಂತುಗಳ ಪಾವತಿಯಲ್ಲಿ ವಿರಾಮ
ಸ್ವಸಹಾಯ ಸಂಘಗಳ 1 ಸಾವಿರ ಸದಸ್ಯರಿಗೆ ಸಾಲದ ಕಂತುಗಳ ಮರುಪಾವತಿ ಕಷ್ಟವಾಗಿದ್ದು, ಮರುಪಾವತಿ ಕಂತುಗಳನ್ನು 12 ವಾರಗಳವರೆಗೆ ಮುಂದೂಡುವಂತೆ ಅಧ್ಯಕ್ಷರು ಆದೇಶಿಸಿದರು. ಈ ಅವಧಿಯಲ್ಲಿ ಅವರ ಬ್ಯಾಂಕ್‌ ಬಡ್ಡಿಯನ್ನು ಯೋಜನೆಯೇ ಭರಿಸುವಂತೆ ಸೂಚಿಸಿದರು. ಜತೆಗೆ ತಮ್ಮ ವ್ಯವಹಾರದಲ್ಲಿ ಅಡಚಣೆಯುಂಟಾಗಿ, ಕಂತಿನ ಕಡಿಮೆ ಮೊತ್ತ ಕಟ್ಟ ಬಯಸುವವರು ಸಂಘದಲ್ಲಿ ಮುಕ್ತವಾಗಿ ಚರ್ಚಿಸಿ, ಅನುಮತಿ ಪಡೆದುಕೊಳ್ಳಬಹುದೆಂದು ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದರು. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌, ಕರಾವಳಿ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ಮೈಸೂರು ಪ್ರಾದೇಶಿಕ ನಿರ್ದೇಶಕ ಶ್ರೀಹರಿ, ಕೊಡಗು ಜಿಲ್ಲೆಯ ನಿರ್ದೇಶಕ ಯೋಗೀಶ್‌ ಉಪಸ್ಥಿತರಿದ್ದರು.

No Comments

Leave A Comment