Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಭೂ ಸರ್ವೇಕ್ಷಣೆ, ಭೂಗರ್ಭ ಶಾಸ್ತ್ರಜ್ಞರಿಂದ ಸರ್ವೆ

ಸುಳ್ಯ: ಜೋಡುಪಾಲ, ಮೊಣ್ಣಂಗೇರಿ, ಅರೆಕ್ಕಲ್‌ನಲ್ಲಿ ಭೂ ಕುಸಿತ ಮತ್ತು ಜಲಪ್ರವಾಹಕ್ಕೆ ತೀವ್ರ ಮಳೆ, ಅರಣ್ಯ ನಾಶ ಹಾಗೂ ಸೂಕ್ತವಲ್ಲದ ಕಡೆ ಜನವಸತಿ ಇರುವುದೂ ಕಾರಣ ಎಂಬ ಅಂಶ ವಿಜ್ಞಾನಿಗಳ ಪ್ರಾಥಮಿಕ ಸರ್ವೇ ವೇಳೆ ಬೆಳಕಿಗೆ ಬಂದಿದೆ! ಬುಧವಾರ ಜೋಡುಪಾಲ, ಮೊಣ್ಣಂಗೇರಿ, ಹೆಮ್ಮತ್ತಾಳ, ಅರೆಕ್ಕಲ್‌ ಪ್ರದೇಶಗಳಲ್ಲಿ ಭಾರತೀಯ ಭೂ ಸರ್ವೇಕ್ಷಣೆ, ಭೂಗರ್ಭ ಶಾಸ್ತ್ರಜ್ಞರು ಮತ್ತು ರಾಷ್ಟ್ರೀಯ ವಿಪತ್ತು ಪರಿ ಹಾರ ಕೇಂದ್ರ ನಿರ್ದೇಶಕರು ಭೇಟಿ ನೀಡಿ ಪ್ರಾಥಮಿಕ ಹಂತದ ಸರ್ವೇ ಕಾರ್ಯ ನಡೆಸಿದರು. ಸರ್ವೆ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ ಬಳಿಕ ಎರಡನೆ ತಂಡ ಆಗಮಿಸಲಿದೆ. ಮಣ್ಣಿನ ಗುಣಮಟ್ಟದ ಕುರಿತು ಅಧ್ಯಯನ ನಡೆಯಲಿದೆ.

ನೀರು ಇಂಗಿ ಸ್ಫೋಟ?
ತೀವ್ರ ಮಳೆಯಿಂದ ಗುಡ್ಡ ಪ್ರದೇಶಗಳಲ್ಲಿ ನೀರು ಇಂಗಿ ಸ್ಫೋಟದ ಮೂಲಕ ಹೊರ ಬಂದಿರುವುದು ಕೊಡಗಿನ ಪ್ರಾಕೃತಿಕ ಅವಘಡಕ್ಕೆ ಕಾರಣಗಳಲ್ಲಿ ಒಂದು ಎಂಬ ಶಂಕೆಗೆ ಈ ಸರ್ವೇ ಉತ್ತರ ನೀಡಲಿದೆ. ಜತೆಗೆ ಪ್ರಕೃತಿ ಮೇಲಿನ ಮಾನವರ ಪ್ರಹಾರ ಕೂಡ ಕಾರಣ ಎಂಬ ಅಂಶವನ್ನು ವಿಜ್ಞಾನಿಗಳ ತಂಡ ಗಮನಿಸಿರುವುದಾಗಿ ಅಧ್ಯಯನ ತಂಡದಲ್ಲಿದ್ದ ಕೆಲವರು ಮಾಹಿತಿ ನೀಡಿದ್ದಾರೆ.

ಮಳೆ ಇಳಿಮುಖ
ಪ್ರವಾಹಪೀಡಿತ ಕೊಡಗಿನಲ್ಲಿ ಮುಂದೆ ಮಳೆಯೇ ಇಲ್ಲದ ದಿನಗಳು ಎದುರಾಗಲಿವೆ ಮತ್ತು ಭವಿಷ್ಯದಲ್ಲಿ ಮಳೆಯಾಗದೆ ಇನ್ನೊಂದು ಅಪಾಯಕ್ಕೆ ಕಾರಣ ಆಗುವ ಸಾಧ್ಯತೆ ಇದೆ ಎಂದು ಹಬ್ಬಿರುವ ಊಹಾಪೋಹಗಳಿಗೂ ವರದಿಯಿಂದ ಉತ್ತರ ಸಿಗಲಿದೆ.

ವಿವಿಧೆಡೆ ಭೇಟಿ
ಜಿಯೋಲಜಿಕಲ್‌ ಸರ್ವೇ ಆಫ್‌ ಇಂಡಿಯಾದ ನಿವೃತ್ತ ಡೆಪ್ಯುಟಿ ಡೈರೆಕ್ಟರ್‌ ಡಾ| ಎಚ್‌.ಎಸ್‌.ಎಲ್‌. ಪ್ರಕಾಶ್‌, ನಿರ್ದೇಶಕ ಡಾ| ಕೆ.ವಿ. ಮಾರುತಿ, ಕೆಎಸ್‌ಎಂಎನ್‌ಡಿ ನಿರ್ದೇಶಕ ಶ್ರೀನಿವಾಸ ರೆಡ್ಡಿ ಅವರ ತಂಡ ಸರ್ವೆ ಕಾರ್ಯ ನಡೆಸಿತ್ತು. ಮೂಲ ನಕ್ಷೆ ಆಧರಿಸಿ, ಗುರುತು ಪತ್ತೆ ಹಚ್ಚುವ ಕಾರ್ಯ, ಸ್ಥಳ ಚಿತ್ರೀಕರಣದ ಮೂಲಕ ಸರ್ವೇ ನಡೆಸಿದೆ.

ಈ ಸಂದರ್ಭ ಮಾತನಾಡಿದ ಅವರು, ಮಳೆ ಹೆಚ್ಚಳದ ಕಾರಣ ಈ ಘಟನೆ ಸಂಭವಿಸಿರುವ ಸಾಧ್ಯತೆ ಇದೆ. ಒಂದೆರಡು ದಿನದ ಸರ್ವೇಯಿಂದ ಇಲ್ಲಿನ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ. ದೀರ್ಘ‌ ಕಾಲದ ಅಧ್ಯಯನ ಅಗತ್ಯ. ಈಗ ಸರಕಾರದ ಸೂಚನೆ ಪ್ರಕಾರ ತುರ್ತು ವರದಿ ಸಲ್ಲಿಸಲಾಗುವುದು. ಕೆಲ ದಿನಗಳಲ್ಲಿ ಮತ್ತೂಂದು ತಂಡ ಬಂದು ವಿಸ್ತೃತ ಅಧ್ಯಯನ ನಡೆಸಲಿದೆ ಎಂದು ಡಾ| ಎಚ್‌.ಎಸ್‌.ಎಲ್‌. ಪ್ರಕಾಶ್‌ ಮತ್ತು ನಿರ್ದೇಶಕ ಡಾ| ಕೆ.ವಿ. ಮಾರುತಿ ಮಾಹಿತಿ ನೀಡಿದ್ದಾರೆ. ತಂಡದಲ್ಲಿ ಲೋಕೋಪಯೋಗಿ ಇಲಾಖೆಯ ಮಂಗಳೂರು ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಯಶವಂತ, ತಹಶೀಲ್ದಾರ್‌ ಕುಂಞಮ್ಮ ಉಪಸ್ಥಿತರಿದ್ದರು.

No Comments

Leave A Comment