Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಪೂಜಿಸಲ್ಪಟ್ಟ ಶ್ರೀಶಾರದಾ ವಿಗ್ರಹ ಇ೦ದು ವಿಸರ್ಜನಾ ಮೆರವಣಿಗೆಗೆ ಸಕಲ ಸಿದ್ದತೆ........ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ವಾಹನಕ್ಕೆ ಪರ್ಮಿಟ್ ಇಲ್ಲದಿದ್ದರೂ ವಿಮಾ ಕಂಪನಿಯೇ ಪರಿಹಾರ ನೀಡಬೇಕು: ಸುಪ್ರೀಂ ಕೋರ್ಟ್

ನವದೆಹಲಿ: ಅಪಘಾತಕ್ಕೀಡಾದ ವಾಹನಕ್ಕೆ ಪರ್ಮಿಟ್ ಇಲ್ಲದಿದ್ದರೂ ವಿಮಾ ಸಂಸ್ಥೆಯೇ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
2009ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ್ದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಂತರ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದ್ದು, ‘ರಸ್ತೆ ರಹದಾರಿ (ಪರ್ಮಿಟ್) ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ವಾಹನದಿಂದ ಅಪಘಾತ ಸಂಭವಿಸಿದರೂ, ವಿಮಾ ಕಂಪನಿಯೇ ಸಂತ್ರಸ್ತರಿಗೆ ಪರಿಹಾರ ಪಾವತಿ ಮಾಡಬೇಕು. ನಂತರ ಆ ಮೊತ್ತವನ್ನು ವಾಹನದ ಮಾಲೀಕರಿಂದ ವಸೂಲಿ ಮಾಡಬೇಕು’ ಎಂದು ಹೇಳಿದೆ.
ಮೂಲಗಳ ಪ್ರಕಾರ, 2009ರ ಮಾರ್ಚ್‌ 17ರಂದು ಬೆಂಗಳೂರು ಹೊರವಲಯದ ತುಮಕೂರು ರಸ್ತೆಯಲ್ಲಿ ಬೈಕ್‌ ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿತ್ತು. ಅದರಲ್ಲಿ ಬೈಕ್‌ ಚಲಾಯಿಸುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದರು. ಹಿಂಬದಿ ಸವಾರರಿಗೆ ಗಂಭೀರ ಗಾಯಗಳಾಗಿದ್ದವು. ಮೃತರ ಕುಟುಂಬಕ್ಕೆ4.53 ಲಕ್ಷ ಮತ್ತು ಗಾಯಾಳುವಿಗೆ 1.72 ಲಕ್ಷ ಪರಿಹಾರ ನೀಡಬೇಕು ಎಂದು ಕೋರ್ಟ್ ಘೋಷಿಸಿತ್ತು. ಈ ತೀರ್ಪಿಗೆ ನ್ಯಾಷನಲ್ ಇನ್ಸೂರೆನ್ಸ್ ಕಂಪನಿ ಆಕ್ಷೇಪ ವ್ಯಕ್ತಪಡಿಸಿತ್ತು. ಅಲ್ಲದೆ ಲಾರಿಗೆ ರಹದಾರಿ ಇಲ್ಲದ ಕಾರಣ ನಾವು ಪರಿಹಾರ ಕೊಡುವುದಿಲ್ಲ ಎಂದು ಕಂಪನಿ ಹೈಕೋರ್ಟ್‌ ಮೊರೆ ಹೋಗಿತ್ತು.
ಈ ವೇಳೆ ಹೈಕೋರ್ಟ್ ನಲ್ಲಿ ತನ್ನ ವಾದ ಮಂಡಿಸಿದ್ದ ವಿಮಾ ಕಂಪನಿ, ‘ಸಂತ್ರಸ್ತರಿಗೆ ನಾವು ಪರಿಹಾರ ನೀಡಿ, ನಂತರ ಅದನ್ನು ಲಾರಿ ಮಾಲೀಕರಿಂದ ವಸೂಲಿ ಮಾಡಲು ಸಾಧ್ಯವಿಲ್ಲ. ರಹದಾರಿ ಇಲ್ಲದ ಕಾರಣ ಲಾರಿ ಮತ್ತು ಅದರ ಮಾಲೀಕರನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಪರಿಹಾರವನ್ನು ಲಾರಿ ಮಾಲೀಕರೇ ಪಾವತಿ ಮಾಡಬೇಕು ಎಂದು ಕಂಪನಿ ವಾದಿಸಿತ್ತು. ಅದರ ವಾದವನ್ನು ಹೈಕೋರ್ಟ್ ಮಾನ್ಯ ಮಾಡಿತ್ತು. ಆದರೆ ಮೃತ ವ್ಯಕ್ತಿಯ ಕುಟುಂಬಕ್ಕೆ ನೀಡಬೇಕಿದ್ದ ಪರಿಹಾರ ಮೊತ್ತವನ್ನುರೂ 16 ಲಕ್ಷಕ್ಕೆ ಏರಿಸಿತ್ತು.
ಈ ವೇಳೆ ಲಾರಿ ಮಾಲೀಕರಿಂದ ಪರಿಹಾರ ಪಡೆದುಕೊಳ್ಳಲು ಸಾಧ್ಯವಿಲ್ಲ. ವಿಮಾ ಕಂಪನಿಯಿಂದಲೇ ಅದನ್ನು ಕೊಡಿಸಿ ಎಂದು ಮೃತ ವ್ಯಕ್ತಿಯ ಕುಟುಂಬದವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅರ್ಜಿದಾರರ ಮನವಿಯನ್ನು ಮಾನ್ಯ ಮಾಡಿದ್ದು, ವಿಮಾ ಸಂಸ್ಥೆಯೇ ಪರಿಹಾರ ನೀಡಿ  ಬಳಿಕ ಅದನ್ನು ಲಾರಿ ಮಾಲಿಕರಿಂದ ವಸೂಲಿ ಮಾಡಿಕೊಳ್ಳಬೇಕು ಎಂದು ತೀರ್ಪು ನೀಡಿದೆ.
No Comments

Leave A Comment