Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಪೂಜಿಸಲ್ಪಟ್ಟ ಶ್ರೀಶಾರದಾ ವಿಗ್ರಹ ಇ೦ದು ವಿಸರ್ಜನಾ ಮೆರವಣಿಗೆಗೆ ಸಕಲ ಸಿದ್ದತೆ........ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಸೇತುವೆ ದಾಟಲು ಬೇಕು ಅರ್ಧ ತಾಸು!

ಪಣಂಬೂರು: ರಾಷ್ಟ್ರೀಯ ಹೆದ್ದಾರಿ 66ರ ಕೂಳೂರಿನಲ್ಲಿ ಫ‌ಲ್ಗುಣಿ ನದಿಗೆ ಕಟ್ಟಿರುವ ಎರಡೂ ಸೇತುವೆಗಳು ಸಂಪೂರ್ಣ ಹದಗೆಟ್ಟಿವೆ. ಸುಮಾರು 30 ಮೀಟರ್‌ ಉದ್ದದ ಈ ಸೇತುವೆಯನ್ನು ದಾಟಲು ವಾಹನಗಳಿಗೆ ಕನಿಷ್ಠ 30 ನಿಮಿಷ ಬೇಕು! ಸೇತುವೆಗಳ ಮೇಲಿನ ಡಾಮರು ಕಿತ್ತು ಹೋಗಿ ದೊಡ್ಡ ಹೊಂಡಗಳು ಸೃಷ್ಟಿಯಾದ್ದರಿಂದ ವಾಹನಗಳು ಕುಂಟುತ್ತಾ ಸಾಗುತ್ತಿವೆ. ಹೊಂಡ ಮುಚ್ಚಲು ಜಲ್ಲಿ ಹುಡಿ ಹಾಕಿದ್ದರಿಂದ ಹೆದ್ದಾರಿ ಇಲಾಖೆಯ ಗುತ್ತಿಗೆದಾರರು ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟಾಗಿಸಿದ್ದಾರೆ. ಮಳೆ ಮತ್ತು ಘನ ವಾಹನಗಳ ಓಡಾಟದ ಸಂದರ್ಭ ಜಲ್ಲಿ ಹುಡಿ ಒಂದೆಡೆ ಸೇರಿ ದಿಣ್ಣೆಗಳಾಗಿದ್ದು, ದ್ವಿಚಕ್ರಮ ಲಘು ವಾಹನಗಳಿಗೆ ತೀವ್ರ ಸಮಸ್ಯೆಯಾಗಿದೆ.

ಸರಕು ತುಂಬಿದ ವಾಹನಗಳು ಎಲ್ಲಿ ಆ್ಯಕ್ಸೆಲ್‌ ತುಂಡಾಗುವುದೋ ಎಂದು ಹೆದರಿ ತೆವಳುತ್ತಾ ಸಾಗಿ ದರೆ, ಐಷಾರಾಮಿ ವಾಹನಗಳು ದುರಸ್ತಿ ಬಂದರೆ ಕಷ್ಟ ಎಂದು ನಿಧಾನವಾಗಿ ಸೇತುವೆ ದಾಟುತ್ತಿವೆ. ಇದರಿಂದಾಗಿ ಎರಡೂ ಬದಿಗಳಲ್ಲಿ ಕನಿಷ್ಠ 2ರಿಂದ 3 ಕಿ.ಮೀ. ಉದ್ದ ಸಾಲು ಸೃಷ್ಟಿಯಾಗುತ್ತಿದ್ದು, ಸೇತುವೆ ದಾಟುವುದೇ ಹರಸಾಹಸವಾಗಿದೆ. ಪ್ರತಿ ಮಳೆಗಾಲದಲ್ಲಿ ಇದೇ ಪರಿಸ್ಥಿತಿ ಇದ್ದರೂ ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ. ಸೇತುವೆಗಳ ಇಕ್ಕೆಲಗಳಲ್ಲಿ ಇರುವ ತಡೆಗೋಡೆ ನದಿ ಒಡಲು ಸೇರಿದರೂ ದುರಸ್ತಿಯಾಗಿಲ್ಲ.

ಬೈಕಂಪಾಡಿ ಬಳಿ ಹೆದ್ದಾರಿ ದುರವಸ್ಥೆ
ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ಸಾಗುವಲ್ಲಿ ಹೆದ್ದಾರಿಯಲ್ಲಿರುವ ಬೃಹತ್‌ ಹೊಂಡವೊಂದು ಘನ ವಾಹನ ಮಾಲಕರಿಗೆ ನಷ್ಟ ತಂದೊಡ್ಡುತ್ತಿದೆ. ರಿಕ್ಷಾ ಮೊದಲಾದ ಸಣ್ಣ ವಾಹನಗಳು ಹೆದ್ದಾರಿಗಿಂತ ಒಳದಾರಿಯೇ ಸೂಕ್ತ ಎಂದು ಬದಲಿ ದಾರಿಯಲ್ಲಿ ಸಾಗುತ್ತಿವೆ. ಈ ಕುರಿತು ಸ್ಥಳೀಯ ಜನತೆ ಹಾಗೂ ರಿಕ್ಷಾ ಚಾಲಕರು ಹಲವು ಬಾರಿ ಇಲಾಖೆಯ ಗಮನಕ್ಕೆ ತಂದರೂ ರಸ್ತೆ ದುರಸ್ತಿಗೆ ಮನ ಮಾಡಿಲ್ಲ. ಆಗಾಗ ತೇಪೆ ಹಚ್ಚಿ ಹೋದರೂ ಪರಿಣಾಮ ಶೂನ್ಯ.

ತಲಪಾಡಿಯಿಂದ ಸುರತ್ಕಲ್‌ ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿವಿಧ ಸಮಸ್ಯೆಗಳು ಗಮನಕ್ಕೆ ಬಂದಿವೆ. ಈ ಹಿನ್ನೆಲೆಯಲ್ಲಿ ಇಲಾಖಾಧಿಕಾರಿಗಳ ಸಭೆ ಮಾಡಿ ದುರಸ್ತಿ ಕಾಮಗಾರಿಯ ವೇಳಾಪಟ್ಟಿ ನೀಡಿ ಶೀಘ್ರ ದುರಸ್ತಿಗೆ ಮುಂದಾಗುವಂತೆ ಸ್ಪಷ್ಟ ಸೂಚನೆ ನೀಡಿದ್ದೇನೆ. ಕಾಮಗಾರಿ ವಿಳಂಬಕ್ಕೆ, ಅದರಿಂದಾಗುವ ಸಮಸ್ಯೆಗಳಿಗೆ ಅಧಿಕಾರಿಗಳೇ ಜವಾಬ್ದಾರಿ.
– ನಳಿನ್‌ ಕುಮಾರ್‌ ಕಟೀಲು, ಸಂಸದ

ಹೊಂಡಗಳನ್ನು ಮುಚ್ಚಲು ಹೆದ್ದಾರಿ ಇಲಾಖೆ ಕ್ರಮ ಕೈಗೊಳ್ಳಬೇಕು. ಬೈಕಂಪಾಡಿಯಲ್ಲಿ ಹಲವು ವರ್ಷಗಳಿಂದ ಹೊಂಡವಿದೆ. ಕೂಳೂರು ಸೇತುವೆ ಮೇಲೆ ಇತ್ತೀಚೆಗೆ ಡಾಮರೀಕರಣ ಮಾಡಿದ್ದರೂ ಒಂದೇ ಮಳೆಗೆ ಎದ್ದು ಹೋಗಿದೆ. ಪ್ರತಿ ವರ್ಷ ಇದೇ ಪರಿಸ್ಥಿತಿ ಇದ್ದರೂ ಇಲಾಖೆ ತೇಪೆ ಕಾರ್ಯವನ್ನಷ್ಟೇ ಮಾಡುತ್ತಿದೆ. ಶಾಶ್ವತ ದುರಸ್ತಿಗೆ ಕ್ರಮ ಕೈಗೊಳ್ಳಬೇಕಾಗಿದೆ.
– ಉಮೇಶ್‌ ದೇವಾಡಿಗ ಇಡ್ಯಾ, ರಿಕ್ಷಾ ಚಾಲಕ

No Comments

Leave A Comment