Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

“ಸ್ಮಾರ್ಟ್‌ ಸಿಟಿ’ ಫೇಲ್‌; ಹಣ ಬಿಡುಗಡೆಯಾದ್ರೂ ನಯಾಪೈಸೆ ಖರ್ಚಾಗಿಲ್ಲ

ಬೆಂಗಳೂರು: ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ “ಸ್ಮಾರ್ಟ್‌ ಸಿಟಿ’ಗೆ ಹಣ ಕೊಟ್ಟು, ಯಾವುದೇ ಹಸ್ತಕ್ಷೇಪ ಇಲ್ಲದಂತೆ ಹೆಜ್ಜೆ-ಹೆಜ್ಜೆಗೂ ಮಾರ್ಗಸೂಚಿಗಳನ್ನು ನೀಡಿ, ಅನುಷ್ಠಾನಕ್ಕಾಗಿ ವಿಶೇಷ ಒತ್ತು ನೀಡಿದ್ದರೂ ಒಂದೇ ಒಂದು ಪೈಸೆ ಖರ್ಚಾಗಿಲ್ಲ!

ದೇಶಾದ್ಯಂತ ನೂರು ನಗರಗಳನ್ನು ಸ್ಮಾರ್ಟ್‌ ಸಿಟಿ’ಗಳನ್ನಾಗಿ ಅಭಿವೃದ್ಧಿಪಡಿಸುವ ಯೋಜನೆಯು ರಾಜ್ಯದಲ್ಲಿ ಅಕ್ಷರಶಃ ಆಮೆವೇಗ ಪಡೆದುಕೊಂಡಿದೆ. ಈ ಮಧ್ಯೆ ಮುಂದಿನ ಆರೇಳು ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ಬರುವುದರಿಂದ ಈ ಯೋಜನೆಯೇ ಡೋಲಾಯಮಾನ ಆಗಿದೆ.

ಕೇಂದ್ರ ಸರ್ಕಾರದ ಈ ಯೋಜನೆಗೆ ಮೂರು ಹಂತಗಳಲ್ಲಿ ರಾಜ್ಯದ ಏಳು ನಗರಗಳು ಆಯ್ಕೆ ಮಾಡಲಾಗಿದ್ದು, ಈ ಪೈಕಿ ಬೆಂಗಳೂರು ಹೊರತುಪಡಿಸಿ, ಉಳಿದ ಆರು ನಗರಗಳಿಗಾಗಿ 1,656 ಕೋಟಿ ರೂ. ಬಿಡುಗಡೆ ಆಗಿದೆ. ಅದರಲ್ಲಿ ಕಚೇರಿ ನಿರ್ಮಾಣ, ಸಮಗ್ರ ಯೋಜನಾ ವರದಿ (ಡಿಪಿಆರ್‌), ಎಸ್‌ಪಿವಿ ರಚನೆ ಸೇರಿದಂತೆ ಮತ್ತಿತರ ಮೂಲ ಸೌಕರ್ಯಗಳಿಗೆ ಸುಮಾರು 40-50 ಕೋಟಿ ರೂ. ವ್ಯಯವಾಗಿದೆ. ಆದರೆ, ಯೋಜನೆ ಅನುಷ್ಠಾನಕ್ಕಾಗಿ ಇನ್ನೂ ಒಂದು ಪೈಸೆ ಖರ್ಚಾಗಿಲ್ಲ.

ಅನುಷ್ಠಾನ ಹೀಗೆ?:
ಉದ್ದೇಶಿತ ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಯೂ “ಎಸ್‌ಪಿವಿ’ (ವಿಶೇಷ ಉದ್ದೇಶಿತ ವಾಹನ) ಕೈಯಲ್ಲಿರುತ್ತದೆ. ಇದರಲ್ಲಿ ಸಿಟಿ ಕಾರ್ಪೊರೇಷನ್‌ನ ಆರು ಮಂದಿ ಅಧಿಕಾರಿಗಳು, ರಾಜ್ಯ ಸರ್ಕಾರದ ಕಾರ್ಯದರ್ಶಿ ಮಟ್ಟದ ಆರು ಜನ ಅಧಿಕಾರಿಗಳು, ಇಬ್ಬರು ಸ್ವತಂತ್ರ ಮತ್ತು ಒಬ್ಬರು ಕೇಂದ್ರ ಸರ್ಕಾರದಿಂದ ನೇಮಕಗೊಂಡ ಅಧಿಕಾರಿಗಳು ಸೇರಿದಂತೆ ಒಟ್ಟು 15 ಸದಸ್ಯರು ಇರುತ್ತಾರೆ. 10 ಕೋಟಿ ಒಳಗಿನ ಕಾಮಗಾರಿಯನ್ನು ವ್ಯವಸ್ಥಾಪಕ ನಿರ್ದೇಶಕರ ಹಂತದಲ್ಲೇ ಅನುಮೋದನೆಗೊಳ್ಳುತ್ತವೆ. 50 ಕೋಟಿವರೆಗಿನ ಟೆಂಡರ್‌ಗಳನ್ನು ಆಡಳಿತ ಮಂಡಳಿಯಲ್ಲಿ ಅನುಮೋದನೆ ಪಡೆಯಬೇಕಾಗುತ್ತದೆ. 200 ಕೋಟಿವರೆಗಿನ ಟೆಂಡರ್‌ಗಳಾದರೆ, ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತಾಧಿಕಾರ ಸಮಿತಿ ನಿರ್ಧರಿಸುತ್ತದೆ. ಇದಕ್ಕಿಂತ ಹೆಚ್ಚಿನ ಮೊತ್ತವಾಗಿದ್ದರೆ ಮಾತ್ರ ಸಚಿವ ಸಂಪುಟದ ಅನುಮೋದನೆ ಅತ್ಯಗತ್ಯ.

ಆದರೆ, ಈ ವ್ಯವಸ್ಥೆಯನ್ನು ರಚಿಸುವಲ್ಲೇ ರಾಜ್ಯ ಸರ್ಕಾರ ಸಾಕಷ್ಟು ಸಮಯ ತೆಗೆದುಕೊಂಡಿತು. ಈ ವಿಳಂಬಕ್ಕೆ ಹಿಂದಿನ ಸರ್ಕಾರದಲ್ಲಿದ್ದ ಸಚಿವರೊಬ್ಬರ ಧೋರಣೆಯೂ ಕಾರಣ ಎಂದು ನಗರಾಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ.

2015ರಲ್ಲಿ ದಾವಣಗೆರೆ ಮತ್ತು ಬೆಳಗಾವಿ, 2016ರಲ್ಲಿ ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಆಯ್ಕೆಯಾದರೆ, 2017ರಲ್ಲಿ ಬೆಂಗಳೂರು ಸೇರ್ಪಡೆಗೊಂಡಿತು. ಮೊದಲ ಆರು ನಗರಗಳ ಸ್ಮಾರ್ಟ್‌ಸಿಟಿ ನಿರ್ಮಾಣಕ್ಕಾಗಿ ಎಸ್‌ಪಿವಿ ರಚನೆಯಾಗಿದ್ದು, 1,100 ಕೋಟಿ ರೂ.ಗಳ ಟೆಂಡರ್‌ ಪ್ರಕ್ರಿಯೆಗಳು ವಿವಿಧ ಹಂತದಲ್ಲಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಆದರೆ, ಇನ್ನೇನು ಅನುಷ್ಠಾನಗೊಳ್ಳುವ ಹೊತ್ತಿಗೆ ಲೋಕಸಭಾ ಚುನಾವಣೆ ಬರಲಿದೆ. ಒಂದು ವೇಳೆ ಕೇಂದ್ರದಲ್ಲಿ ಸರ್ಕಾರ ಬದಲಾದರೆ, “ಜೆ-ನರ್ಮ್’ ಯೋಜನೆಗಾದ ಗತಿ “ಸ್ಮಾರ್ಟ್‌ ಸಿಟಿ’ಗಾದರೂ ಅಚ್ಚರಿ ಇಲ್ಲ. ಆದರೆ, ಉದ್ದೇಶಿತ ಯೋಜನೆ ಅವಧಿ ಐದು ವರ್ಷ ಆಗಿದ್ದರಿಂದ ಸಮಸ್ಯೆಯಾಗದು ಎಂದು ಕರ್ನಾಟಕ ನಗರ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆಯುಐಡಿಎಫ್ಸಿ)ದ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಹೀಗಿರಬೇಕು ಸ್ಮಾರ್ಟ್‌ ಸಿಟಿ
ಸ್ಮಾರ್ಟ್‌ ಸಿಟಿಗಳೆಂದರೆ ಶುದ್ಧ ನೀರು, ಸ್ವತ್ಛತೆ, ತ್ಯಾಜ್ಯಗಳ ಪರಿಣಾಮಕಾರಿ ನಿರ್ವಹಣೆ, ಪರಿಸರ ಸ್ನೇಹಿ ಸಾರಿಗೆ, ಇ-ಆಡಳಿತಕ್ಕೆ ಒತ್ತು ನೀಡುವುದು ಒಳಗೊಂಡಂತೆ ಜನರಿಗೆ ಸಾಧ್ಯವಾದಷ್ಟು ಸುಲಭವಾಗಿ ಸೇವೆಗಳನ್ನು ಒದಗಿಸುವುದು. ಜನ ಏನು ಬಯಸುತ್ತಾರೋ ಅದನ್ನು ತಂತ್ರಜ್ಞಾನಗಳ ನೆರವಿನಿಂದ ಸುಲಭವಾಗಿ ದೊರಕುವಂತೆ ಮಾಡುವುದಾಗಿದೆ. ಕೇಂದ್ರ ಸರ್ಕಾರ ಈಗಾಗಲೇ ನೂರು ಸ್ಮಾರ್ಟ್‌ ಸಿಟಿಗಳ ಅಭಿವೃದ್ಧಿಗಾಗಿ 48 ಸಾವಿರ ಕೋಟಿ ರೂ. ವಿನಿಯೋಗಿಸುವುದಾಗಿ ಪ್ರಕಟಿಸಿದೆ. ಯೋಜನೆಗೆ ರಾಜ್ಯದ ಪಾಲು ಶೇ. 50ರಷ್ಟಿರುತ್ತದೆ. ಈ ಆರೂ ನಗರಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ವರ್ಷ 200 ಕೋಟಿ (ಕೇಂದ್ರ ಮತ್ತು ರಾಜ್ಯ ಸೇರಿ)ಯಂತೆ ಐದು ವರ್ಷಕ್ಕೆ ಸಾವಿರ ಕೋಟಿ ರೂ. ನೆರವು ನೀಡಲಿವೆ. ಯೋಜನೆಗೆ ಅಗತ್ಯವಿರುವ ಉಳಿದ ಹಣವನ್ನು ಖಾಸಗಿ ಸಹಭಾಗಿತ್ವದಲ್ಲಿ ಕ್ರೋಡೀಕರಿಸಬೇಕಾಗುತ್ತದೆ.

No Comments

Leave A Comment