Log In
BREAKING NEWS >
ಶಿರೂರು ಶ್ರೀಗಳು ಮಠಾಧೀಶರೇ ಅಲ್ಲ, ಸನ್ಯಾಸತ್ವ ತ್ಯಜಿಸಿದ್ದರು: ಪೇಜಾವರ ಶ್ರೀ.....ಮಧ್ವ ಸಂಪ್ರದಾಯದಂತೆ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜೀ ಅಂತ್ಯಕ್ರಿಯೆ!

ಸಿರಿಬಾಗಿಲು: ಹಳಿಗೆ ಕುಸಿದ ಗುಡ್ಡ

ಸಕಲೇಶಪುರ/ ಸುಬ್ರಹ್ಮಣ್ಯ: ಮಂಗಳೂರು-ಹಾಸನ ರೈಲು ಮಾರ್ಗದ ಎಡಕುಮೇರಿ-ಕಡಗರಹಳ್ಳಿ ನಿಲ್ದಾಣದ ನಡುವೆ 85ನೇ ಮೈಲು ಎಡಕುಮೇರಿ ಬಳಿ ಮಂಗಳವಾರ ಗುಡ್ಡ ಜರಿದು ಮಣ್ಣು, ಮರಗಳು ಹಳಿಗಳ ಮೇಲೆ ಬಿದ್ದಿವೆ. ಪರಿಣಾಮ ಸುಬ್ರಹ್ಮಣ್ಯ ರಸ್ತೆ – ಸಕಲೇಶಪುರ ಮಾರ್ಗದಲ್ಲಿ ಮಂಗಳವಾರ ಮಧ್ಯಾಹ್ನ ಸಂಚರಿಸಬೇಕಿದ್ದ ಮಂಗಳೂರು – ಬೆಂಗಳೂರು ರೈಲನ್ನು ಎಡಕುಮೇರಿಯಿಂದ ವಾಪಸು ಮಂಗಳೂರಿಗೆ ಕರೆಸಿಕೊಳ್ಳಲಾಗಿದೆ.

ಪುತ್ತೂರಿನಿಂದ ಮಧ್ಯಾಹ್ನ 1.20ಕ್ಕೆ ಹೊರಟ ರೈಲು ಸಂಜೆ 5.30ಕ್ಕೆ ಪುತ್ತೂರಿಗೆ ಮರಳಿದೆ. ರಾತ್ರಿ 8 ಗಂಟೆವರೆಗೆ ಪ್ರಯಾಣಿಕರು ರೈಲು ನಿಲ್ದಾಣದ ಆವರಣದಲ್ಲೇ ದಿಕ್ಕು ತೋಚದೆ ಕುಳಿತಿದ್ದರು. ಮಕ್ಕಳ ಅಳು, ದೊಡ್ಡವರ ಜಗಳ, ಕೆಲಸಕ್ಕೆಂದು ಹೊರಟು ನಿಂತವರ ತೊಳಲಾಟ ಕಂಡುಬಂತು. ಬಳಿಕ 9 ಕೆ.ಎಸ್‌.ಆರ್‌.ಟಿ.ಸಿ. ಬಸ್‌ ಗಳಲ್ಲಿ ಪ್ರಯಾಣಿಕರನ್ನು ಬೆಂಗಳೂರಿಗೆ ಕಳುಹಿಸಲಾಯಿತು. ಕೆಲವು ಪ್ರಯಾಣಿಕರು ಟಿಕೆಟ್‌ ಹಣ ಹಿಂದಕ್ಕೆ ಪಡೆದುಕೊಂಡಿದ್ದಾರೆ. ರೈಲು ಘಾಟಿ ಏರಲಿರುವುದರಿಂದ ಸುಬ್ರಹ್ಮಣ್ಯದಲ್ಲಿ ಹಿಂಬದಿಗೂ ಎಂಜಿನ್‌ ಒಂದನ್ನು ಜೋಡಿಸಲಾಗುತ್ತದೆ. ಆ ಕಾರಣದಿಂದಾಗಿ ರೈಲು ಎಡಕುಮೇರಿ ತಲುಪಿದ್ದರೂ ಹಿಂದಕ್ಕೆ ಮರಳಿ ಬರಲು ಸಾಧ್ಯವಾಯಿತು.

ರೈಲು ಸಂಚಾರ ಯಥಾಸ್ಥಿತಿಗೆ
ರಾತ್ರಿ ಬೆಂಗಳೂರಿಗೆ ತೆರಳುವ ರೈಲು ಯಥಾ ಪ್ರಕಾರ 9 ಗಂಟೆಗೆ ಮಂಗಳೂರಿನಿಂದ ಹೊರಟಿದೆ ಎಂದು ಮಂಗಳೂರು  ಸೆಂಟ್ರಲ್‌ ರೈಲ್ವೇ ಸ್ಟೇಶನ್‌ನ ಡೆಪ್ಯುಟಿ ಸ್ಟೇಷನ್‌ ಮ್ಯಾನೇಜರ್‌ ಕಿಶನ್‌ ಕುಮಾರ್‌ ತಿಳಿಸಿದ್ದಾರೆ.

ಪಾರಾದ ರೈಲು
ಯಶವಂತಪುರ – ಮಂಗಳೂರು ರೈಲು ಪೂರ್ವಾಹ್ನ 11.30ಕ್ಕೆ ಸಕಲೇಶಪುರ ನಿಲ್ದಾಣದಿಂದ ಹೊರಟಿದ್ದು, ಸಿರಿ ಬಾಗಿಲನ್ನು ದಾಟಿ 20 ನಿಮಿಷಗಳಲ್ಲಿ  ಹಳಿಯ ಮೇಲೆ ಗುಡ್ಡ ಕುಸಿದಿದೆ.

No Comments

Leave A Comment