Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

‘ಅಮ್ಮ’ ವಿರುದ್ಧ ಮತ್ತೆ ಮೂವರು ನಟಿಯರ ವಾಗ್ದಾಳಿ, ತುರ್ತು ಸಭೆಗೆ ಆಗ್ರಹ

ಕೊಚ್ಚಿ: ಖ್ಯಾತ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ನಟ ದಿಲೀಪ್ ಮತ್ತೆ ಮಲಯಾಳಂ ಚಲನಚಿತ್ರ ಕಲಾವಿದರ ಸಂಘ(ಅಮ್ಮ)ದ ಅಧ್ಯಕ್ಷರಾಗುವುದಕ್ಕೆ ಮೂವರು ನಟಿಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಕುರಿತು ಚರ್ಚಿಸಲು ತುರ್ತು ಸಭೆ ಕರೆಯುವಂತೆ ಒತ್ತಾಯಿಸಿದ್ದಾರೆ.
ಈ ಸಂಬಂಧ ಅಮ್ಮ ಪ್ರಧಾನ ಕಾರ್ಯದರ್ಶಿ ಇಡವೆಲ ಬಾಬು ಅವರಿಗೆ ಪತ್ರ ಬರೆದಿರುವ ರೇವತಿ ಆಶಾ ಕೆಲುಣ್ಣಿ, ಪದ್ಮಪ್ರಿಯಾ ಜಾನಕಿರಾಮ್ ಮತ್ತು ಪಾರ್ವತಿ ಅವರು, ಜುಲೈ 13 ಅಥವಾ 14ರಂದು ತುರ್ತು ಸಭೆ ಕರೆಯುವಂತೆ ಆಗ್ರಹಿಸಿದ್ದಾರೆ.
ಅಮ್ಮ ಪ್ರಧಾನ ಕಾರ್ಯದರ್ಶಿಗೆ ಬರೆದಿರುವ ಬಹಿರಂಗ ಪತ್ರವನ್ನು ನಟಿಯರು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದು, ಸಂಘದ ಎಲ್ಲಾ ಸದಸ್ಯರೊಂದಿಗೆ ಚರ್ಚಿಸದೇ ಉಚ್ಚಾಟಿತ ಸದಸ್ಯನನ್ನು ಮತ್ತೆ ಸೇರಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಇದು ಸಂತ್ರಸ್ಥೆಗೆ ನೀಡಿದ್ದ ಭರವಸೆಗೆ ವಿರುದ್ಧವಾಗಿದೆ ಎಂದಿದ್ದಾರೆ.
ಕಳೆದ ಭಾನುವಾರ ನಟ ದೀಲಿಪ್ ಅವರು ಮತ್ತೆ ‘ಅಮ್ಮ’ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದು, ಇದನ್ನು ವಿರೋಧಿಸಿ ಸಂತ್ರಸ್ಥ ನಟಿ ಸಂಘಕ್ಕೆ ರಾಜಿನಾಮೆ ನೀಡಿದ್ದರು. ಅವರನ್ನು ಬೆಂಬಲಿಸಿ ನಟಿಯರಾದ ರಿಮಾ ಕಾಳಿಂಗಲ್, ರೆಮ್ಯಾ ನಂಬೀಸನ್, ಗೀತು ಮೋಹನ್ ದಾಸ್ ಸಹ ರಾಜಿನಾಮೆ ನೀಡಿದ್ದರು. ಈಗ ಮತ್ತೆ ಮೂವರು ನಟಿಯರು ಸಂತ್ರಸ್ಥ ನಟಿಯ ಬೆಂಬಲಕ್ಕೆ ನಿಂತಿದ್ದು, ತುರ್ತು ಸಭೆಗೆ ಆಗ್ರಹಿಸಿದ್ದಾರೆ.
ನಟ ದಿಲೀಪ್ ಹಾಗೂ ಅವರ 9 ಮಂದಿ ಸ್ನೇಹಿತರು ಸೇರಿ ನಟಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿಯಲ್ಲಿ ಬಂಧನಕ್ಕೊಳಪಟ್ಟಿದ್ದರು.  ನ್ಯಾಯಾಲಯದಿಂದ ಬಿಡುಗಡೆಯಾದ ನಂತರ ಅವರು ಮತ್ತೆ ಅಮ್ಮಾದ ಅಧ್ಯಕ್ಷತೆ ವಹಿಸಿಕೊಂಡಿದ್ದಾರೆ.
No Comments

Leave A Comment