Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಬಿಳಿನೆಲೆ: ಆಮ್ನಿ ಮೇಲೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಕಡಬ: ಚಲಿಸುತ್ತಿದ್ದ ಆಮ್ನಿ ಕಾರಿನ ಮೇಲೆ ಕಾಡಾನೆಯೊಂದು ದಾಳಿ ಮಾಡಿ ಹಾನಿಗೈದ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆಯಲ್ಲಿ ಶನಿವಾರ ಸಂಭವಿಸಿದೆ.

ಕಾರಿನಲ್ಲಿ ಒಂದೇ ಕುಟುಂಬದ 9 ಮಂದಿ ಪ್ರಯಾಣಿಸುತ್ತಿದ್ದು,  ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಉಳಿದವರು  ಅಪಾಯದಿಂದ ಪಾರಾಗಿದ್ದಾರೆ. ಅದೇ ದಾರಿಯಾಗಿ ಬಂದ ಸರಕಾರಿ ಬಸ್ಸೊಂದರ ಚಾಲಕ ಜೋರಾಗಿ ಹಾರ್ನ್ ಬಾರಿಸಿದ್ದರಿಂದ ಆನೆ ಕಾಡಿನತ್ತ ಓಡಿದ್ದು ಹೆಚ್ಚಿನ ಅಪಾಯ ತಪ್ಪಿದೆ.

ಚಿಕ್ಕಮಗಳೂರು ಮೂಲದ ತರೀಕೆರಿ ತಾಲೂಕು ಕುಡೂರು ಕುಟುಂಬದ ಯಾತ್ರಾರ್ಥಿ ಗಳು ಧರ್ಮಸ್ಥಳ‌ ಕ್ಷೇತ್ರ ದರ್ಶನ ಮುಗಿಸಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದರು. ಬೆಳಗ್ಗೆ 7 ಗಂಟೆಯ ಹೊತ್ತಿಗೆ ಬಿಳಿನೆಲೆ ಸಿಪಿಸಿಆರ್‌ಐ ಬಳಿ ಬರುತ್ತಿದ್ದಂತೆ ಹಠಾತ್ತಾಗಿ ದೊಡ್ಡ ಗಾತ್ರದ ಆನೆಯೊಂದು ಕಾರಿಗೆ ಅಡ್ಡ ಬಂದಿತು. ಗಲಿಬಿಲಿಗೊಂಡ ಚಾಲಕ ಪ್ರಭುಕುಮಾರ್‌ ಕಾರನ್ನು ರಸ್ತೆ ಬದಿ ನಿಲ್ಲಿಸಿದರು. ಆನೆಯು ದಂತ ಹಾಗೂ ಸೊಂಡಿಲಿನಿಂದ ಕಾರಿನ ಮುಂಭಾಗಕ್ಕೆ ತಿವಿದು, ಮುಂಗಾಲಿನಿಂದ ತುಳಿದು ಹಾನಿ ಮಾಡಿತು.

ಅಷ್ಟರಲ್ಲಿ ಸರಕಾರಿ ಬಸ್ಸೊಂದು ಆ ದಾರಿಯಾಗಿ ಬಂದಿದ್ದು, ಅದರ ಚಾಲಕ ದೀರ್ಘ‌ವಾಗಿ ಹಾರ್ನ್ ಬಾರಿಸಿದರು. ಗಲಿಬಿಲಿಗೊಂಡ ಆನೆಯು ಕಾರನ್ನು ಬಿಟ್ಟು ಕಾಡಿನತ್ತ ಓಡಿ ಮರೆಯಾಗಿದ್ದರಿಂದ  ಸಂಭಾವ್ಯ ಅಪಾಯವೊಂದು ತಪ್ಪಿತು. ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಗಾಯಾಳುಗಳನ್ನು ಸ್ಥಳೀಯ ಆಟೋ ಚಾಲಕ ಸುಬ್ರಹ್ಮಣ್ಯ ಖಾಸಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರು. ಕಡಬ ಪೊಲೀಸರು, ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಎಚ್ಚರಿಕೆ ಫಲಕವಿಲ್ಲ
ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ  ದಟ್ಟ ಅರಣ್ಯದ ಮೂಲಕ ಸಾಗುತ್ತಿದ್ದು ಕೆಲವು ಸ್ಥಳಗಳಲ್ಲಿ ಕಾಡಾನೆ ಸಹಿತ ವನ್ಯ ಪ್ರಾಣಿಗಳು ರಸ್ತೆ ದಾಟುತ್ತವೆ. ಇಂತಹ ಸೂಕ್ಷ್ಮ ಸ್ಥಳಗಳಲ್ಲಿ  ಅರಣ್ಯ ಇಲಾಖೆ ಎಚ್ಚರಿಕೆ ಫಲಕ ಅಳವಡಿಸಿ ಮುನ್ನಚ್ಚರಿಕೆ ವಹಿಸಬೇಕಿತ್ತು. ಇನ್ನಾದರೂ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸ್ಥಳೀಯರಿಂದ ವ್ಯಕ್ತವಾಗಿದೆ.

ಸರಿಯಾದ ಸಮಯಕ್ಕೆ ಬಸ್‌ ಬಂದು ಹಾರ್ನ್ ಹಾಕಿದ ಪರಿಣಾಮ ದೊಡ್ಡ ಅನಾಹುತವೊಂದು  ತಪ್ಪಿದೆ. ಸುಬ್ರಹ್ಮಣ್ಯ ಸ್ವಾಮಿಯೇ ಬಸ್‌ ಚಾಲಕನ ರೂಪದಲ್ಲಿ ಬಂದು ನಮ್ಮನ್ನು ಪಾರು ಮಾಡಿದ್ದಾನೆ.
– ಗಿರೀಶ್‌, ಗಾಯಾಳು

ನಮ್ಮ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಸ್ಥಳ ಮಹಜರು ನಡೆಸಿದ್ದಾರೆ. ಸ್ಥಳದಲ್ಲಿ ಆನೆಯ ಹೆಜ್ಜೆ ಗುರುತುಗಳು ಕಂಡುಬಂದಿದ್ದು, ವಾಹನ ಜಖಂಗೊಂಡಿದೆ. ಪ್ರಯಾಣಿಕರಿಗೆ ಅಪಾಯ ಸಂಭವಿಸಿಲ್ಲ. ವಾಹನದ ಮಾಲಕರು ವಾಹನಕ್ಕೆ ವಿಮೆ ಪಡೆದುಕೊಳ್ಳಲು ಘಟನೆಯ ಬಗ್ಗೆ  ಅರಣ್ಯ ಇಲಾಖೆಯಿಂದ ಮಾಹಿತಿ ಬಯಸಿದರೆ ಪೂರಕ ದಾಖಲೆ ಒದಗಿಸಲು ನಾವು ಬದ್ಧರಿದ್ದೇವೆ.
-ಎಚ್‌.ಎನ್‌. ಜಗನ್ನಾಥ್‌, ಸ. ಅರಣ್ಯ ಸಂರಕ್ಷಣಾಧಿಕಾರಿ, ಸುಳ್ಯ

No Comments

Leave A Comment