Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಉಗ್ರರ ದಮನಕ್ಕೆ ಕಾಶ್ಮೀರ ಸಿದ್ಧ : ಕಾಶ್ಮೀರಕ್ಕೆ Snipers, NSG ರವಾನೆ

ಹೊಸದಿಲ್ಲಿ/ಶ್ರೀನಗರ: ಭಾರತದ ಮುಕುಟ ಜಮ್ಮು ಮತ್ತು ಕಾಶ್ಮೀರದಲ್ಲಿ ಮೇರೆ ಮೀರಿರುವ ಉಗ್ರರನ್ನು ಮಟ್ಟ ಹಾಕಲು ವೇದಿಕೆ ಸಿದ್ಧವಾಗಿದೆ. Sniperಗಳು, ರೇಡಾರ್‌ ಗಳು, ಎನ್‌.ಎಸ್‌.ಜಿ. ಕಮಾಂಡೋಗಳು ದಿಲ್ಲಿಯಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ತಲುಪಿವೆ. ಶ್ರೀನಗರದಲ್ಲಿರುವ ಗಡಿ ಭದ್ರತಾ ಪಡೆ (ಬಿ.ಎಸ್‌.ಎಫ್.) ಕ್ಯಾಂಪ್‌ ಕಚೇರಿ ಹುಮಾಹಾದಲ್ಲಿ ಎನ್‌.ಎಸ್‌.ಜಿ.ಗೆ ಬಿರುಸಿನಿಂದ ತರಬೇತಿ ನೀಡಲಾಗುತ್ತಿದೆ. ಇದಲ್ಲದೆ ಕರ್ನಾಟಕದಲ್ಲಿ ಕಾಡುಗಳ್ಳ ವೀರಪ್ಪನ್‌ ವಿರುದ್ಧದ ಕಾರ್ಯಾಚರಣೆ ಮತ್ತು ಬಿ.ಎಸ್‌.ಎಫ್ ನಲ್ಲಿ ಇದ್ದು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸಿದ್ದ ನಿವೃತ್ತ ಐಪಿಎಸ್‌ ಅಧಿಕಾರಿ ವಿಜಯಕುಮಾರ್‌ ಅವರನ್ನು ರಾಜ್ಯಪಾಲ ಎನ್‌.ಎನ್‌. ವೋಹ್ರಾ ಅವರ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಕೇಂದ್ರ ಗೃಹ ಖಾತೆ ಮೂಲಗಳ ಪ್ರಕಾರ 2 ವಾರಗಳ ಹಿಂದೆಯೇ ಎನ್‌ಎಸ್‌ಜಿಯ ಹೌಸ್‌ ಇಂಟರ್‌ವೆನ್ಶನ್‌ ಟೀಮ್‌ (ಎಚ್‌.ಐ.ಟಿ.) ಕೂಡ ಕಣಿವೆ ರಾಜ್ಯಕ್ಕೆ ತೆರಳಿದೆ. ಇದರ ಜತೆಗೆ ಶೀಘ್ರದಲ್ಲಿಯೇ ಎನ್‌.ಎಸ್‌.ಜಿ.ಯ 100 ಸದಸ್ಯರು ಅಲ್ಲಿಗೆ ತೆರಳಲಿದ್ದಾರೆ. ಕೇಂದ್ರ ಸರಕಾರದ ಈ ಕ್ರಮದಿಂದಾಗಿ ವಿವಿಧ ಭದ್ರತಾ ಪಡೆಗಳಲ್ಲಿ ಉಂಟಾಗಬಹುದಾದ ಸಾವುನೋವು ತಡೆಯಲು ನೆರವಾಗಲಿದೆ. ಎನ್‌.ಎಸ್‌.ಜಿ. ಕಮಾಂಡೋಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸುವ ಪ್ರಸ್ತಾವಕ್ಕೆ ಸರಕಾರ ಒಂದು ತಿಂಗಳ ಹಿಂದೆಯೇ ಅನುಮೋದನೆ ನೀಡಿತ್ತು ಎಂಬ ವಿಚಾರವೂ ಗುರುವಾರ ಬೆಳಕಿಗೆ ಬಂದಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಮನೆ, ಸರಕಾರಿ ಕಟ್ಟ‚ಡಗಳಿಗೆ ನುಗ್ಗಿದಾಗ ಅವರನ್ನು ಹೊರ ಹಾಕಿ ಗುಂಡಿಟ್ಟು ಕೊಲ್ಲುವುದು ಸಿ.ಆರ್‌.ಪಿ.ಎಫ್. ಸಹಿತ ಭದ್ರತಾ ಪಡೆಗಳಿಗೆ ದೊಡ್ಡ ಸವಾಲು. ಇಂಥ ಸಂದರ್ಭದಲ್ಲಿ  ಸೇನಾ ಸಿಬಂದಿಯ ಪ್ರಾಣ ನಷ್ಟವಾಗುವುದನ್ನು ತಪ್ಪಿಸಲು ಕಟ್ಟಡದೊಳಕ್ಕೆ ನುಗ್ಗುವುದನ್ನು ತಡೆಯಲಾಗುತ್ತದೆ. ಈ ರೀತಿಯ ಸನ್ನಿವೇಶಗಳಲ್ಲಿ ಎನ್‌.ಎಸ್‌.ಜಿ.ಯ ಕಾರ್ಯತತ್ಪರತೆ ನೆರವಿಗೆ ಬರಲಿದೆ.

ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ನೀಡಿದ ಅಂಕಿ ಅಂಶದ ಪ್ರಕಾರ, 2017ರಲ್ಲಿ ಕಟ್ಟಡದೊಳಕ್ಕೆ ಉಗ್ರರು ನುಗ್ಗಿ ಮಾಡಿದ ಅನಾಹುತಗಳಿಂದಲೇ 80 ಮಂದಿ ಭದ್ರತಾ ಸಿಬಂದಿ ಹುತಾತ್ಮರಾಗಿದ್ದರೆ, 70 ಮಂದಿ ನಾಗರಿಕರು ಜೀವ ಕಳೆದುಕೊಂಡಿದ್ದರು. ಈ ವರ್ಷದ ಮೇ ವರೆಗೆ 30 ಸೇನಾ ಸಿಬಂದಿ, 35 ನಾಗರಿಕರು ಜೀವ ಕಳೆದುಕೊಂಡಿದ್ದಾರೆ.

ಪಾಕ್‌ನಿಂದ ಬೆದರಿಕೆ: ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಘಟಕದ ಅಧ್ಯಕ್ಷ ರವೀಂದ್ರ ರೈನಾಗೆ ಪಾಕಿಸ್ಥಾನದಿಂದ ಬೆದರಿಕೆ ಕರೆಗಳು ಬಂದಿವೆ. ಹೀಗೆಂದು ಅವರೇ ಗುರುವಾರ ಹೇಳಿಕೊಂಡಿದ್ದಾರೆ. ‘ಎರಡು ದಿನಗಳಿಂದ ಈ ರೀತಿಯಾಗುತ್ತಿದೆ. ಇಂಥ ಕರೆಗಳಿಗೆ ಹೆದರಿ ಕುಳಿತುಕೊಳ್ಳುವುದಿಲ್ಲ. ರಾಜ್ಯಪಾಲರಿಗೆ ಮತ್ತು ಭದ್ರತಾ ಸಂಸ್ಥೆಗಳಿಗೆ ಬೆದರಿಕೆ ಕರೆಗಳ ಬಗ್ಗೆ ಮಾಹಿತಿ ನೀಡಿದ್ದೇನೆ’ ಎಂದಿದ್ದಾರೆ. ಕರಾಚಿ, ರಾವಲ್ಪಿಂಡಿ ಸಹಿತ ಪಾಕಿಸ್ಥಾನದ ವಿವಿಧ ನಗರಗಳಿಂದ ಕರೆ ಮಾಡಲಾಗಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಕಣಿವೆ ರಾಜ್ಯದ ಪೊಲೀಸ್‌ ಮಹಾನಿರ್ದೇಶಕರು ಈ ಬಗ್ಗೆ ಸ್ಪಷ್ಟನೆ ನೀಡಿ, ಅಧಿಕೃತವಾಗಿ ದೂರು ದಾಖಲಾಗದೆ ಇದ್ದರೂ ವಿಷಯದ ಬಗ್ಗೆ ಪರಿಶೀಲನೆ ನಡೆಸಿದ್ದೇವೆ ಎಂದಿದ್ದಾರೆ.

ಪಾಕ್‌, ವಿಶ್ವಸಂಸ್ಥೆಗೆ ಹೀನಾಯ ಅವಮಾನ
ಪಾಕಿಸ್ಥಾನಕ್ಕೆ ವಿಶ್ವಸಂಸ್ಥೆಯಲ್ಲಿ ಮತ್ತೂಂದು ಮುಖಭಂಗವಾಗಿದೆ. ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದ ಆಯುಕ್ತ ಝೈದ್‌ ರಾದ್‌ ಅಲ್‌ ಹುಸೈನ್‌ ನೀಡಿದ ವರದಿಯನ್ನು ಯಾವ ರಾಷ್ಟ್ರವೂ ಬೆಂಬಲಿಸಿಲ್ಲ. ಹೀಗಾಗಿ ಪಾಕಿಸ್ಥಾನ ಮತ್ತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಆಯುಕ್ತ (ಒ.ಎಚ್‌.ಸಿ.ಎಚ್‌.ಆರ್‌.)ಗೆ ಕಪಾಳಮೋಕ್ಷವಾಗಿದೆ. ಭೂತಾನ್‌, ಅಫ್ಘಾನಿಸ್ಥಾನ, ಮಾರಿಷಿಯಸ್‌, ಬೆಲಾರುಸ್‌, ಕ್ಯೂಬಾ, ವೆನಿಜುವೆಲಾ ರಾಷ್ಟ್ರಗಳು ಸರಾಸಗಟಾಗಿ ತಿರಸ್ಕರಿಸಿವೆ. ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನದ ಕಾಯಂ ರಾಯಭಾರಿ ಫಾರೂಖ್‌ ಅಮಿಲ್‌ ವರದಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರಾದರೂ ಅದಕ್ಕೆ ಯಾರೂ ಸೊಪ್ಪು ಹಾಕಲಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ವರದಿಯನ್ನು ಭಾರತ ಈಗಾಗಲೇ ತಿರಸ್ಕರಿಸಿದೆ.

ಇಂದು ಸಭೆ
ಈ ಎಲ್ಲ ಬೆಳವಣಿಗೆಗಳಿಗೆ ಪೂರಕವಾಗಿ ರಾಜ್ಯಪಾಲ ಎನ್‌.ಎನ್‌. ವೋಹ್ರಾ ಶುಕ್ರವಾರ ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ರಾಜ್ಯಪಾಲರ ಆಳ್ವಿಕೆ ಜಾರಿ ಮತ್ತು ಕಣಿವೆ ರಾಜ್ಯದಲ್ಲಿನ ಪರಿಸ್ಥಿತಿ ಬಗ್ಗೆ ಈ ಸಂದರ್ಭದಲ್ಲಿ ಚರ್ಚಿಸಲಾಗುತ್ತದೆ.

ಯಾಸೀನ್‌ ಬಂಧನ
ರಾಜ್ಯಪಾಲರ ಆಳ್ವಿಕೆ ಶುರುವಾಗುತ್ತಲೇ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್‌ ಫ್ರಂಟ್‌ (ಜೆ.ಕೆ.ಎಲ್‌.ಎಫ್.) ನಾಯಕ ಯಾಸೀನ್‌ ಮಲಿಕ್‌ ರನ್ನು ವಶಕ್ಕೆ ಪಡೆಯಲಾಗಿದೆ. ಇದರ ಜತೆಗೆ ಸುಧಾರಣಾವಾದಿ ಹುರಿಯತ್‌ ಕಾನ್ಫರೆನ್ಸ್‌ನ ಅಧ್ಯಕ್ಷ ಮಿರ್ವೇಜ್‌ ಉಮ್ಮರ್‌ ಫಾರೂಕ್‌ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಇನ್ನು ಹುರಿಯತ್‌ ಕಾನ್ಫರೆನ್ಸ್‌ನ ಮತ್ತೂಂದು ಬಣದ ನಾಯಕ ಸಯ್ಯದ್‌ ಅಲಿ ಶಾ ಗಿಲಾನಿ ಅವರ ಗೃಹಬಂಧನ ಮುಂದುವರಿಯಲಿದೆ.

No Comments

Leave A Comment