Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಗೆಳೆಯನ ರಕ್ಷಿಸಿ ಎಲ್ಲರ ಮನಗೆದ್ದ ಸುಜಯ

ವೇಣೂರು: ಕಾಲುಸಂಕದಿಂದ ಜಾರಿ ತುಂಬಿ ಹರಿಯುತ್ತಿದ್ದ ತೊರೆಗೆ ಬೀಳುತ್ತಿದ್ದ ಗೆಳೆಯನನ್ನು ಜೀವದ ಹಂಗು ತೊರೆದು ಬಾಲಕನೊಬ್ಬ ರಕ್ಷಣೆ ಮಾಡಿರುವ ಘಟನೆ ನಿಟ್ಟಡೆ ಗ್ರಾಮದ ಫಂಡಿಜೆಯಲ್ಲಿ ಗುರುವಾರ ಸಂಜೆ ನಡೆದಿದೆ.

ಫಂಡಿಜೆ ಸ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಾದ ಆದಿತ್ಯ ಮತ್ತು ಸುಜಯ ಶಾಲೆಯಿಂದ ಮರಳುತ್ತಿದ್ದು, ದಂಬೆ ಬಳಿ ಅಡಿಕೆ ಮರದಿಂದ ಮಾಡಿರುವ ಕಾಲುಸಂಕ ದಾಟುವ ವೇಳೆ ಆದಿತ್ಯ ಕಾಲು ಸಂಕದಿಂದ ಜಾರಿದ. ಇದನ್ನು ಗಮನಿಸಿದ ಸುಜಯ ತತ್‌ ಕ್ಷಣ ಆದಿತ್ಯನ ಇನ್ನೊಂದು ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡನು. ಈ ಸಂದರ್ಭ ಆದಿತ್ಯ ಕಾಲುಸಂಕದಲ್ಲಿ ನೇತಾಡುತ್ತಿದ್ದ. ಕೈಯಲ್ಲಿ ಚೀಲ ಮತ್ತು ಕೊಡೆ ಇರುವ ಕಾರಣ ಆದಿತ್ಯನನ್ನು ಗಟ್ಟಿ ಹಿಡಿದುಕೊಳ್ಳಲು ಕಷ್ಟವಾಗಿ ಸುಜಯ ಬೊಬ್ಬೆ ಹೊಡೆದ. ಈ ವೇಳೆಗೆ ಆದಿತ್ಯ ಕೂಡ ಹೆದರಿ ಬೊಬ್ಬೆ ಹೊಡೆಯಲು ಆರಂಭಿಸಿದ. ಮಕ್ಕಳಿಬ್ಬರ ಆಕ್ರಂದನ ಆಲಿಸಿದ ಸಮೀಪದಲ್ಲೇ ಇದ್ದ ಜಯಾನಂದ ಸಾಠೆ ಹಾಗೂ ಆದಿತ್ಯನ ತಂದೆ ರತ್ನಾಕರ ಹೆಬ್ಟಾರ್‌ ಮೊದಲಾದವರು ತತ್‌ ಕ್ಷಣ ಓಡಿ ಬಂದು ಇಬ್ಬರನ್ನೂ ರಕ್ಷಿಸಿ ಕರೆದೊಯ್ದರು. ಅಷ್ಟು ಹೊತ್ತಿಗಾಗಲೇ ಆದಿತ್ಯನ ಕಾಲನ್ನು ಸುಜಯ ಸುಮಾರು ನಾಲ್ಕೈದು ನಿಮಿಷಗಳ ಕಾಲ ಹಿಡಿದುಕೊಂಡಿದ್ದ.

ಮಕ್ಕಳಿಬ್ಬರೂ ಗೆಳಯರಾಗಿದ್ದು, ಫಂಡಿಜೆ ಸ.ಹಿ.ಪ್ರಾ. ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಆದಿತ್ಯ 6ನೇ ತರಗತಿ ಮತ್ತು ಸುಜಯ 5ನೇ ತರಗತಿ ಓದುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ರಕ್ಷಣೆ ಮಾಡದಿದ್ದಲ್ಲಿ ಕಲ್ಲು ಬಂಡೆಗಳಿಂದ ತುಂಬಿ ಹರಿಯುವ ತೊರೆಯಲ್ಲಿ ಆದಿತ್ಯ ಕೊಚ್ಚಿಹೋಗುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸುಜಯನ ಸಾಹಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

No Comments

Leave A Comment