Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಪತ್ರಕರ್ತ ಬುಖಾರಿ ಹತ್ಯೆಯಲ್ಲಿ ISI, ಲಷ್ಕರ್‌ ಕೈವಾಡ?

ಶ್ರೀನಗರ/ಹೊಸದಿಲ್ಲಿ /ಲಂಡನ್‌: ಜಮ್ಮು ಮತ್ತು ಕಾಶ್ಮೀರದ ಹಿರಿಯ ಪತ್ರಕರ್ತ, ‘ರೈಸಿಂಗ್‌ ಕಾಶ್ಮೀರ್‌’ ಪತ್ರಿಕೆ ಸಂಪಾದಕ ಶುಜಾತ್‌ ಬುಖಾರಿ ಹತ್ಯೆಯನ್ನು ಲಷ್ಕರ್‌-ಎ-ತೊಯ್ಬಾ ಉಗ್ರಗಾಮಿ ಸಂಘಟನೆ ನಡೆಸಿದೆ. ಅದಕ್ಕೆ ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐಎಸ್‌ಐ ಕುಮ್ಮಕ್ಕು ನೀಡಿರುವ ಸಾಧ್ಯತೆಯಿದೆ ಎಂದು ಕೇಂದ್ರ ಗುಪ್ತಚರ ಸಂಸ್ಥೆ ಹೇಳಿದೆ. ಶ್ರೀನಗರ ಪೊಲೀಸರು ಬಿಡುಗಡೆ ಮಾಡಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿರುವ ಮೂವರ ಶಂಕಿತರ ಪೈಕಿ ಒಬ್ಬನ ಗುರುತು ಲಷ್ಕರ್‌ ಸಂಘಟನೆಯ ನವೀದ್‌ ಜತ್‌ ಚಹರೆ ಹೋಲುತ್ತಿರುವುದೂ ಈ ಸಂಶಯಕ್ಕೆ ಕಾರಣ ಎನ್ನಲಾಗಿದೆ. ಜತೆಗೆ ಮೆಹ್ರಾಜುದ್ದೀನ್‌ ಬಾಂಗ್ರೂ, ವಾಜಾ ಎಂಬ ಉಗ್ರರೂ ಹತ್ಯೆ ಪ್ರಕರಣದಲ್ಲಿ ಶಾಮೀಲಾಗಿರುವ ಬಗ್ಗೆ ಗುಮಾನಿಗಳಿವೆ.  ಜಮ್ಮು ಮತ್ತು ಕಾಶ್ಮೀರ ಪೊಲೀಸರೂ ಕೂಡಾ ಹತ್ಯೆ ಪ್ರಕರಣಕ್ಕೆ ಉಗ್ರ ಲಿಂಕ್‌ ಖಚಿತ ಪಡಿಸಿದ್ದಾರೆ.


SIT ರಚನೆ: ಹತ್ಯೆ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ. ಇದೇ ವೇಳೆ ಜುಬೈರ್‌ ಖಾದ್ರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಖಲಾಗಿರುವ ಶಂಕಿತ ವ್ಯಕ್ತಿಗಳಲ್ಲೊಬ್ಬ ಆತ ಎಂದು ದೃಢಪಟ್ಟಿದೆ ಎಂದು ಜಮ್ಮು ಮತ್ತು ಕಾಶ್ಮೀರ ಐಜಿಪಿ ಸ್ವಯಂ ಪ್ರಕಾಶ್‌ ಪಾಣಿ ಹೇಳಿದ್ದಾರೆ. ಕಾಶ್ಮೀರ ವಿವಾದವನ್ನು ಶಾಂತಿಯುತವಾಗಿ ಪರಿಹರಿಸುವ ನಿಟ್ಟಿನಲ್ಲಿ ಶುಜಾತ್‌ ಬುಖಾರಿ ಐರೋಪ್ಯ ಒಕ್ಕೂಟ ಮತ್ತು ಇಸ್ಲಾಮಾಬಾದ್‌ ನಲ್ಲಿ ನಡೆದಿದ್ದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಈ ಕಾರಣಕ್ಕಾಗಿಯೇ ಅವರನ್ನು ಕೊಲ್ಲಲಾಗಿದೆ ಎಂದು ಊಹಿಸಲಾಗಿದೆ.

ವಿಡಿಯೋ ವೈರಲ್‌: ಇತ್ತೀಚೆಗೆ ಯೋಧ ಔರಂಗಜೇಬ್‌ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡುವ ಕೆಲವೇ ಕ್ಷಣಗಳ ಮೊದಲು ಚಿತ್ರೀಕರಿಸಲಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಯೋಧನನ್ನು ಅಪಹರಿಸಿದ್ದ ಹಿಜ್ಬುಲ್‌ ಉಗ್ರರು ಅವರನ್ನು ವಿಚಾರಣೆ ನಡೆಸುತ್ತಿರುವುದು ಇದರಲ್ಲಿ ದಾಖಲಾಗಿದೆ.

ಅಂತ್ಯಕ್ರಿಯೆ: ಪತ್ರಕರ್ತ ಬುಖಾರಿ ಅಂತ್ಯಕ್ರಿಯೆ ಬಾರಾಮುಲ್ಲಾ ಜಿಲ್ಲೆಯ ಕೀರಿ ಎಂಬಲ್ಲಿ ಬಿಗಿ ಭದ್ರತೆಯ ನಡುವೆ ನಡೆಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಸರಕಾರದ ಸಚಿವರು, ವಿಪಕ್ಷ ನಾಯಕ ಒಮರ್‌ ಅಬ್ದುಲ್ಲಾ, ಇದಲ್ಲದೆ ಸಾವಿರಾರು ಮಂದಿ ಭಾಗವಹಿಸಿದ್ದರು.

ಖಂಡನೆ: ಹೊಸದಿಲ್ಲಿ, ಶ್ರೀನಗರ, ಲಂಡನ್‌ ಸೇರಿದಂತೆ ವಿಶ್ವದ ಹಲವಾರು ಸ್ಥಳಗಳಲ್ಲಿ ಹತ್ಯೆ ಪ್ರಕರಣ ಖಂಡಿಸಲಾಗಿದೆ. ಲಂಡನ್‌ನಲ್ಲಿರುವ ಅಂತಾರಾಷ್ಟ್ರೀಯ ಪತ್ರಿಕಾ ಸಂಸ್ಥೆ (ಐಪಿಐ) ಹೇಳಿಕೆ ನೀಡಿ, ಇದೊಂದು ಹೇಡಿತನದ ಕೃತ್ಯ ಎಂದು ಟೀಕಿಸಿದೆ.

ದಾಳಿ: ಈ ನಡುವೆ ಶ್ರೀನಗರದ ಕಾಕ್‌ ಸರೈ ಪ್ರದೇಶದಲ್ಲಿ ಉಗ್ರರು ಸೈನಿಕರ ಮೇಲೆ ನಡೆಸಿದ ದಾಳಿಯಲ್ಲಿ ಇಬ್ಬರು ಪೊಲೀಸ್‌ ಸಿಬಂದಿ ಸೇರಿದಂತೆ ಐವರು ಗಾಯಗೊಂಡಿದ್ದಾರೆ.

 

No Comments

Leave A Comment