Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಕುತೂಹಲ ಬಾಕಿ: 22 ಸಚಿವರಷ್ಟೇ ಇಂದು ಶಪಥ ; 10 ಸ್ಥಾನ ಖಾಲಿ ಸಂಭವ

ಬೆಂಗಳೂರು: ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರದ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ. ಬುಧವಾರ ಮಧ್ಯಾಹ್ನ 2.12ಕ್ಕೆ ರಾಜಭವನದ ಗಾಜಿನ ಮನೆ ಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ನೂತನ ಸಚಿವರು ಪದಗ್ರಹಣ ಮಾಡಲಿದ್ದು, ರಾಜ್ಯಪಾಲ ವಜೂಭಾç ವಾಲಾ ಸಚಿವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ರಾಜಕೀಯ ಕಾರಣಗಳಿಗಾಗಿ ಕೆಲವು ಸ್ಥಾನಗಳನ್ನು ಭರ್ತಿ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಈಗಾಗಲೇ ಘೋಷಿಸಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆ ಯಾದರೂ ಪೂರ್ಣ ಪ್ರಮಾಣದ ಸಂಪುಟ ರಚನೆಯಾಗುತ್ತಿಲ್ಲ. ಜೆಡಿಎಸ್‌ ಮೂರು ಹಾಗೂ ಕಾಂಗ್ರೆಸ್‌ 7 ಸ್ಥಾನಗಳನ್ನು ಬಾಕಿ ಉಳಿಸಿಕೊಳ್ಳಲಿದೆ ಎಂದು ಹೇಳಲಾಗಿದೆ.

ಮುಖ್ಯಮಂತ್ರಿ ಸಹಿತ ಸಚಿವ ಸಂಪುಟದಲ್ಲಿ ಒಟ್ಟು 34 ಮಂದಿಗೆ ಅವಕಾಶ ವಿದ್ದು, ಈ ಪೈಕಿ ಕಾಂಗ್ರೆಸ್‌ಗೆ 22 ಮತ್ತು ಜೆಡಿಎಸ್‌ಗೆ 12 ಸ್ಥಾನ ಎಂದು ಈಗಾಗಲೇ ನಿರ್ಧಾರವಾಗಿದೆ. ಜೆಡಿ ಎಸ್‌ನ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ನ ಉಪಮುಖ್ಯಮಂತ್ರಿ ಈಗಾಗಲೇ ಇರುವುದರಿಂದ ಪ್ರಸ್ತುತ ಕಾಂಗ್ರೆಸ್‌ಗೆ 21 ಮತ್ತು ಜೆಡಿಎಸ್‌ಗೆ 11 ಸಚಿವರನ್ನು ಆಯ್ಕೆ ಮಾಡಲು ಅವಕಾಶವಿದೆ. ಮೂಲಗಳ ಪ್ರಕಾರ ಜೆಡಿಎಸ್‌ನಿಂದ 8 ಅಥವಾ 9 ಮಂದಿ ಮತ್ತು ಕಾಂಗ್ರೆಸ್‌ನಲ್ಲಿ 13ಅಥವಾ 14 ಮಂದಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

ಬುಧವಾರವೇ ಹೆಸರು ಪ್ರಕಟ
ಸೋಮವಾರ ನಡೆದಿದ್ದ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿಯೂ ಆಗಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರಿಗೆ ನೀಡಲಾಗಿತ್ತು. ಸೋಮವಾರ ತಡರಾತ್ರಿವರೆಗೆ ಇಬ್ಬರೂ ಸಮಾಲೋಚನೆ ನಡೆಸಿದ್ದರೂ ಹೆಸರುಗಳು ಅಂತಿಮವಾಗಿರಲಿಲ್ಲ.

ಇನ್ನೊಂದೆಡೆ ರಾಜ್ಯ ಕಾಂಗ್ರೆಸ್‌ ನಾಯಕರು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಜತೆಗೆ ಮಂಗಳವಾರ ಸರಣಿ ಸಭೆಗಳನ್ನು ನಡೆಸಿ ಸಚಿವರ ಅಂತಿಮ ಪಟ್ಟಿ ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಹಂತದಲ್ಲಿ ಹತ್ತರಿಂದ ಹನ್ನೆರಡು ಸ್ಥಾನಗಳನ್ನು ಮಾತ್ರ ಭರ್ತಿ ಮಾಡಿ ಉಳಿದ ಸ್ಥಾನಗಳನ್ನು ಅನಂತರ ತುಂಬಲು ತೀರ್ಮಾನಿಸಲಾಯಿತು. ಎರಡೂ ಪಕ್ಷದವರು ಸಚಿವರ ಪಟ್ಟಿ ಅಂತಿಮಗೊಳಿಸಿ ದ್ದಾರಾದರೂ ಬುಧವಾರ ಬೆಳಗ್ಗೆಯೇ ಘೋಷಿಸಲು ತೀರ್ಮಾನಿಸಿದ್ದಾರೆ.

 2.12ರ ಮುಹೂರ್ತ- ಪಂಚಮಂ ಕಾರ್ಯಸಿದ್ಧಿ: ಬುಧವಾರ ಮಧ್ಯಾಹ್ನ 2 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಮಯ ನಿಗದಿಪಡಿಸಲಾಗಿತ್ತಾದರೂ ಮಂಗಳವಾರದ ವೇಳೆ ಸಮಯ ಮುಂದೂಡಿ 2.12ಕ್ಕೆ ನಿಗದಿಪಡಿಸಲಾಯಿತು. ಎಚ್‌.ಡಿ.ರೇವಣ್ಣ ಅವರು ಜೋತಿಷಿಯೊಬ್ಬರ ಬಳಿ ಕೇಳಿ ಈ ಸಮಯ ನಿಗದಿಪಡಿಸಿದರು ಎನ್ನಲಾಗಿದೆ. ಬುಧವಾರ ಸಪ್ತಮಿ. ಅಧಿಕ ಮಾಸವಾದರೂ ಇರುವುದರಲ್ಲಿ ಒಳ್ಳೆಯ ದಿನ. ಅಷ್ಟೇ ಅಲ್ಲದೆ, ಮಧ್ಯಾಹ್ನ 1 ಗಂಟೆಯಿಂದ 3 ಗಂಟೆ ಮಧ್ಯೆ ಕನ್ಯಾ ಲಗ್ನ ಇರುತ್ತದೆ. ಉತ್ತಮ ಕೆಲಸಗಳಿಗೆ ಇದು ಸೂಕ್ತ ಕಾಲ. ಇದರೊಂದಿಗೆ ಸಂಖ್ಯಾ ಶಾಸ್ತ್ರವನ್ನೂ ಸೇರಿಸಿ 2.12ರ ಸಮಯ ನಿಗದಿಯಾಗಿದೆ. 2+2+1=5 (ಪಂಚಮ). ಪಂಚಮಂ ಕಾರ್ಯಸಿದ್ಧಿ ಎನ್ನುತ್ತಾರೆ. ಹೀಗಾಗಿ ಮಧ್ಯಾಹ್ನ 2.12ರ ಮುಹೂರ್ತ ನಿಗದಿಪಡಿಸಲಾಯಿತು ಎಂದು ಮೂಲಗಲು ತಿಳಿಸಿವೆ.

ಮುಗಿಯದ ಇಂಧನ ಖಾತೆಯ ಕ್ಯಾತೆ
ಇಂಧನ ಖಾತೆಗೆ ಸಂಬಂಧಿಸಿದಂತೆ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟದಲ್ಲಿ ಇನ್ನೂ ಗೊಂದಲ ಬಗೆಹರಿದಿಲ್ಲ. ಇಂಧನ ಖಾತೆಯನ್ನು ಈ ಹಿಂದೆ ಜೆಡಿಎಸ್‌ಗೆ ಬಿಟ್ಟುಕೊಡಲಾಗಿತ್ತಾದರೂ ಡಿ.ಕೆ.ಶಿವಕುಮಾರ್‌ ಅವರ ಒತ್ತಡದಿಂದಾಗಿ ಮತ್ತೆ ಆ ಖಾತೆಗಾಗಿ ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ನಿವೃತ್ತ ಐಎಎಸ್‌ ಅಧಿಕಾರಿಯೊಬ್ಬರು ಇಂಧನ ಖಾತೆ ಮೇಲೆ ಕಣ್ಣಿಟ್ಟಿದ್ದ ಜೆಡಿಎಸ್‌ನ ಎಚ್‌.ಡಿ.ರೇವಣ್ಣ ಅವರೊಂದಿಗೆ ಚರ್ಚಿಸಿ ಖಾತೆಯನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವಲ್ಲಿ ಮನವೊಲಿಸಿದ್ದಾರೆ ಎನ್ನಲಾಗಿದೆ.

ಸಂಪುಟ ರಚನೆಯ ಎಲ್ಲಾ ಗೊಂದಲಗಳಿಗೆ ಬುಧವಾರ ತೆರೆ ಬೀಳುತ್ತದೆ. ಎಲ್ಲಾ 34 ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳುತ್ತಿಲ್ಲ. ಜೆಡಿಎಸ್‌ನ 11ರ ಪೈಕಿ 8 ಅಥವಾ 9 ಸ್ಥಾನಗಳನ್ನಷ್ಟೇ ಭರ್ತಿ ಮಾಡಲಾಗುವುದು. ಇದು ರಾಜಕೀಯದ ಒಂದು ಭಾಗ. 
● ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

No Comments

Leave A Comment