Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಮೋದಿ ಸಾಧನೆ ನಿರೀಕ್ಷೆಯಷ್ಟಿಲ್ಲ: ಪೇಜಾವರ ಶ್ರೀ

ಉಡುಪಿ: ನರೇಂದ್ರ ಮೋದಿಯವರ ಸರಕಾರ ಹಲವು ಸಾಧನೆಗಳನ್ನು ಮಾಡಿದೆ. ಆದರೆ ನಿರೀಕ್ಷೆಯಷ್ಟು ಆಗಿಲ್ಲ. ಮುಂದಿನ 1 ವರ್ಷದೊಳಗೆ ಬಾಕಿ ಉಳಿದಿರುವ ಕೆಲಸಗಳನ್ನು ಮಾಡಿ ತೋರಿಸಬೇಕು ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ.

ಜೂ. 1ರಂದು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶ್ರೀಗಳು, ದೇಶದಲ್ಲಿ ಭ್ರಷ್ಟಾಚಾರ ನಿಯಂತ್ರಣ ಆಗಿದೆ. ಹಿಂದಿಗಿಂತ ವಾಸಿ. ಆದರೆ ವಿದೇಶದಿಂದ ಕಪ್ಪುಹಣ ವಾಪಸು ಬಂದಿಲ್ಲ. ನಾನು ಯಾವುದೇ ಪಕ್ಷದ ಪರ ಇಲ್ಲ. ಯಾರು ಒಳ್ಳೆಯ ಕೆಲಸ ಮಾಡಿದರೂ ಸ್ವಾಗತಿಸುತ್ತೇನೆ ಎಂದರು.

ಸಂವಿಧಾನ ಬದಲಾವಣೆ ಹೇಳಿಲ್ಲ
ಶಿಕ್ಷಣ ಸಂಸ್ಥೆಗಳ ವಿಚಾರದಲ್ಲಿ ಹಿಂದೂಗಳು ಮತ್ತು ಅಲ್ಪಸಂಖ್ಯಾಕರ ನಡುವೆ ವ್ಯತ್ಯಾಸ ಮಾಡಬಾರದು. ಹಿಂದೂಗಳ ಶಿಕ್ಷಣ ಸಂಸ್ಥೆಗಳಿಗೆ ಮಾತ್ರವೇ ಕೆಲವು ವಿಷಯಗಳಲ್ಲಿ ನಿರ್ಬಂಧ ಇರಬಾರದು. ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಇದಕ್ಕೆ ಬೇಕಾದ ಸಂವಿಧಾನ ತಿದ್ದುಪಡಿ ಮಾಡಬೇಕು. ಬೇರೆ ಎಷ್ಟೋ ತಿದ್ದುಪಡಿ
ಗಳು ಆಗಿವೆ. ಯಾವುದೇ ವಿಚಾರದಲ್ಲಿ ಸಮುದಾಯಗಳ ನಡುವೆ ವ್ಯತ್ಯಾಸ ತೋರಬಾರದು ಎಂದು ನಾನು ಹೇಳಿದ್ದನ್ನೇ ಕೆಲವರು ಸಂವಿಧಾನ ಬದಲಾವಣೆಯ ಆರೋಪ ಮಾಡಿದ್ದಾರೆ. ನನ್ನ ಹೇಳಿಕೆಯ ನಿಜಾಂಶ ತಿಳಿಯದವರು ಈ ಆರೋಪ ಮಾಡಿದ್ದಾರೆ. ನಾನು ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಮಾತ್ರ ಹೇಳಿದ್ದೇನೆ. ಹಿಂದೂಗಳಿಗೆ ಮಾತ್ರವೇ ಹೆಚ್ಚಿನ ಸವಲತ್ತು ಕೇಳುವುದಿಲ್ಲ. ಹಿಂದೂಗಳಿಗೆ ಅನ್ಯಾಯವಾದಾಗ ಹಿಂದೂಗಳ ಪರ ಇರುತ್ತೇನೆ. ಗೋಹತ್ಯೆ ನಿಷೇಧಕ್ಕೆ ಸಂವಿಧಾನವೇ ಅವಕಾಶ ನೀಡಿದೆ. ಸರಕಾರಗಳು ಇಚ್ಛಾಶಕ್ತಿ ತೋರಿಸಬೇಕಾಗಿದೆ ಎಂದು ಶ್ರೀಗಳು ಹೇಳಿದರು.

ಪ್ರಜಾಪ್ರಭುತ್ವದ ವಿಕೃತಿ
ಈಗ ಎಲ್ಲ ರಾಜಕೀಯ ಪಕ್ಷಗಳು ಕೂಡ ಪ್ರಜಾಪ್ರಭುತ್ವ ವಿಕೃತಿ ತೋರಿಸುತ್ತಿವೆ. ಶಾಸಕರನ್ನು ರೆಸಾರ್ಟ್‌ನಲ್ಲಿ ಕೂಡಿಡುವುದು, ಹಣದ ಆಮಿಷ ಒಡ್ಡುವುದು ಇವೆಲ್ಲ ಸರಿಯಲ್ಲ. ಪರಸ್ಪರ ಬೈದಾಡಿಕೊಂಡು ಈಗ ಒಟ್ಟಾಗುವುದು ನಾಟಕದಂತೆ ಕಾಣುತ್ತದೆ. ಈ ರೀತಿ ಅತಂತ್ರ ಸ್ಥಿತಿ ಉಂಟಾದಾಗ ಸರ್ವಪಕ್ಷಗಳ ಸರಕಾರ ರಚನೆ ಮಾಡುವುದು ಉತ್ತಮ. ಇದು ನನ್ನ ಆದರ್ಶ. ಎಲ್ಲ ಸರಕಾರಗಳಿಂದಲೂ ಜನತೆಗೆ ಒಳ್ಳೆಯದಾಗಲಿ ಎಂದೇ ಬಯಸುತ್ತೇನೆ. ಕುಮಾರಸ್ವಾಮಿ ಸರಕಾರ ಪೂರ್ಣಾವಧಿ ಪೂರೈಸಲಿ ಎಂದು ಶ್ರೀಗಳು ಹೇಳಿದರು.

ರಾಮಮಂದಿರಕ್ಕಿಂತ ದೇಶದ ಹಿತ ಮುಖ್ಯ 
ರಾಮಮಂದಿರ ನಿರ್ಮಾಣದ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಮಮಂದಿರ ಹಿಂದೂಗಳಿಗೆ ಮುಖ್ಯ ವಿಷಯ ಹೌದು. ಆದರೆ ದೇಶದ ಆರ್ಥಿಕ ಸ್ಥಿತಿ, ರೈತರ ಹಿತ ರಾಮಮಂದಿರ ಕ್ಕಿಂತಲೂ ಮುಖ್ಯ. ಗಂಗಾ, ಯಮುನಾ ನದಿಗಳ ಶುದ್ಧೀಕರಣ ಕೆಲಸ ಕೂಡ ನಡೆಯಬೇಕಿದೆ. ರಾಮಮಂದಿರ ನಿರ್ಮಾಣಕ್ಕೆ ಮುಸಲ್ಮಾನ ಬಾಂಧವರು ಕೂಡ ಒಪ್ಪಿದ್ದಾರೆ. ರಾಜ್ಯಸಭೆಯಲ್ಲಿ ಬಹುಮತ ಬೇಕಾಗಿದೆ ಎಂದರು.

ಇಫ್ತಾರ್‌ಕೂಟಕ್ಕೆ ಚಿಂತನೆ
ಈ ಬಾರಿ ಇಫ್ತಾರ್‌ ಕೂಟ ನಡೆಸುತ್ತೀರಾ ಎಂಬ ಪ್ರಶ್ನೆಗೆ, ಏರ್ಪಡಿಸುವ ಚಿಂತನೆ ಇದೆ. ಕಳೆದ ಬಾರಿ ಇಫ್ತಾರ್‌ ಕೂಟ ಮಾಡಿದ ಸಭಾಂಗಣದಲ್ಲಿ ಮೂರ್ತಿ ಇರಲಿಲ್ಲ. ಕೆಳಗಿನ ಸಭಾಂಗಣದಲ್ಲಿ ಇತ್ತು. ಆದರೂ ಕೆಲವರು ಮೂರ್ತಿ ಇತ್ತು ಎಂದು ಟೀಕಿಸಿದ್ದರು. ಇದರಿಂದ ಮುಸ್ಲಿಂ ಬಾಂಧವರಿಗೆ ಅಸಮಾಧಾನವಾಗಿದೆ. ಈ ಬಾರಿ ಅವರು ಒಪ್ಪಿದರೆ ಗೋವಿಂದ ಕಲ್ಯಾಣ ಮಂಟಪದಲ್ಲಿ ಮೂರ್ತಿ ಇಲ್ಲದ ಮೇಲಿನ ಸಭಾಂಗಣದಲ್ಲಿ ನಡೆಸುವ ಯೋಜನೆ ಇದೆ. ಕ್ರೈಸ್ತರು, ದಲಿತರಿಗೂ ಸೌಹಾರ್ದ ಕೂಟ ಮಾಡಲು ಸಿದ್ಧನಿದ್ದೇನೆ’ ಎಂದು ಶ್ರೀಗಳು ಹೇಳಿದರು.

ಪ್ರವಾಸ ಮತ್ತೆ ಆರಂಭ
ಬೆನ್ನು ನೋವು, ಶಸ್ತ್ರಚಿಕಿತ್ಸೆಯ ಅನಂತರ ಚೇತರಿಸಿಕೊಂಡು ಸಾಮಾಜಿಕ ಕೆಲಸಗಳಿಗಾಗಿ ಪ್ರವಾಸವನ್ನು ಮತ್ತೆ ಆರಂಭಿಸಿದ್ದೇನೆ. ಹರಿದ್ವಾರ, ಕಾಶಿ, ಲಕ್ನೋ, ಹೊಸದಿಲ್ಲಿಗೆ ಹೋಗಿ ಬಂದಿದ್ದೇನೆ. ಜೂ. 1ರಂದು ಮಂತ್ರಾಲಯಕ್ಕೆ ಹೋಗುತ್ತಿದ್ದೇನೆ ಎಂದು ಶ್ರೀಗಳು ಹೇಳಿದರು.

No Comments

Leave A Comment