Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

2 ಹಂತಗಳಲ್ಲಿ ಸಾಲ ಮನ್ನಾ; ಅನುಷ್ಠಾನಕ್ಕೆ 15 ದಿನಗಳ ಸಮಯ ಕೇಳಿದ ಸಿಎಂ

ಬೆಂಗಳೂರು: ಕೃಷಿ ಸಾಲ ಮನ್ನಾ ಮಾಡುವ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ  ಅವರು ರೈತ ಮುಖಂಡರೊಂದಿಗೆ ಬುಧವಾರ ಸುಧೀರ್ಘ‌ ಚರ್ಚೆ ನಡೆಸಿ 2 ಹಂತಗಳಲ್ಲಿ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದಾರೆ.  ಸಾಲ ಮನ್ನಾ  ಅನುಷ್ಠಾನ ಪ್ರಕ್ರಿಯೆ ಆರಂಭಿಸಲು 15 ದಿನಗಳ ಕಾಲಾವಕಾಶವನ್ನೂ  ಕೋರಿದ್ದಾರೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಎಚ್‌ಡಿಕೆ ”ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ವಿದೇಶದಿಂದ ಬಂದ ಬಳಿಕ ಅವರೊಂದಿಗೆ ಚರ್ಚೆ ಮಾಡಿ, ಸಾಲ ಮನ್ನಾ ಕುರಿತು ತಾಲೀಮು ನಡೆಸಿ 15 ದಿನಗಳಲ್ಲಿ ಸರ್ಕಾರ ರೂಪುರೇಷೆಗಳನ್ನು ಪ್ರಕಟಿಸಲಿದೆ. ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸಬೇಕಾಗಿದೆ” ಎಂದರು.

ರೈತರನ್ನು  ಸಂಪೂರ್ಣ ಋಣ ಮುಕ್ತರನ್ನಾಗಿ ಮಾಡಿ ಪತ್ರವನ್ನು ಮನೆ ಬಾಗಿಲಿಗೆ ಕಳುಹಿಸುತ್ತೇನೆ ಇದು ನನ್ನ ಬದ್ಧತೆಯಾಗಿದೆ ಎಂದು ಸಿಎಂ ಸಭೆಯಲ್ಲಿ ಘೋಷಿಸಿದ್ದಾರೆ.

‘ಮೊದಲ ಸ್ಕೀಂನಲ್ಲಿ  ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡುವ ಭರವಸೆ ನೀಡುತ್ತೇನೆ. ಆರ್ಥಿಕ ಶಿಸ್ತಿನ ವ್ಯಾಪ್ತಿಯಲ್ಲೇ ಸಾಲಮನ್ನಾ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ’ ಎಂದು ತಿಳಿಸಿದರು.

ವಾಣಿಜ್ಯ ಬ್ಯಾಂಕ್‌ ಅಧಿಕಾರಿಗಳು, ಸಹಕಾರಿ ಬ್ಯಾಂಕ್‌ನ ಅಧಿಕಾರಿಗಳು, ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರುವುದಾಗಿ ಸಿಎಂ ತಿಳಿಸಿದರು.

ಮೊದಲ ಅವಧಿಯಲ್ಲಿ 1-04-2009 ರಿಂದ 31-12-2017 ರ ವರೆಗಿನ ರೈತರ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡುವುದಾಗಿ ಘೋಷಿಸಿದರು.

ಉಳಿದ ಸಾಲವನ್ನು ಆದ್ಯತೆಯ ಮೇರೆಗೆ ಚರ್ಚೆ ನಡೆಸಿ ಈ ಬಗ್ಗೆ ತೀರ್ಮಾನಕ್ಕೆ ಬರುವುದಾಗಿ ಹೇಳಿದರು.

ಮೊದಲ ಹಂತದಲ್ಲಿ  ಈ ಸಾಲ ಮನ್ನಾ ಇಲ್ಲ
1 ಚುನಾಯಿತ ಸದಸ್ಯರ ಸಾಲ ಮನ್ನಾ ಇಲ್ಲ
2.ಕೃಷಿ ಸಾಲ ಪಡೆದು ಉದ್ಯಮಕ್ಕೆ ಬಳಸಿದವರ ಸಾಲ ಮನ್ನಾ ಇಲ್ಲ

3.ಸತತ 3 ವರ್ಷ  4 ಲಕ್ಷ ರೂಪಾಯಿ ಆದಾಯ ತೆರಿಗೆ ಕಟ್ಟಿದ ರೈತರ ಸಾಲ ಮನ್ನಾ ಇಲ್ಲ .
4.ಸಹಕಾರ ಬ್ಯಾಂಕ್‌ ಪದಾಧಿಕಾರಿಗಳಾಗಿ 3 ಲಕ್ಷ ರೂಪಾಯಿ ಆದಾಯ ಇರುವವರ ಸಾಲ ಮನ್ನಾ ಇಲ್ಲ.
5.ನಗರ ಪಾಲಿಕೆ  ವ್ಯಾಪ್ತಿಯ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆದವರ ಸಾಲ ಮನ್ನಾ ಇಲ್ಲ.

ಕಾಂಗ್ರೆಸ್‌ ವಿರೋಧ ಇಲ್ಲ
ರೈತರ ಸಾಲ ಮನ್ನಾ ವಿಚಾರದಲ್ಲಿ  ಕಾಂಗ್ರೆಸ್‌ ವಿರೋಧ ಇಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಹೇಳಿದರು. ಸಾಲ ಮನ್ನಾ ಕುರಿತು ತಜ್ಞರ ಸಮಿತಿ ರಚಿಸುವ ಅನಿವಾರ್ಯತೆ  ಇದೆ’ ಎಂದರು.

ರೈತರ ಮುಖಂಡರ ಪ್ರಶ್ನೆಗಳ ಮಳೆ 
ಸಭೆಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತರು ಹಲವು ಪ್ರಶ್ನೆಗಳನ್ನು ಕೇಳಿ ರೈತರ ಎಲ್ಲಾ ರೀತಿಯಲ್ಲಿ ಋಣ ಮುಕ್ತರನ್ನಾಗಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿಯಿಂದ ಶಾಸಕ ಗೋವಿಂದ ಕಾರಜೋಳ ಅವರು ಪ್ರತಿನಿಧಿಯಾಗಿ ಭಾಗವಹಿಸಿದ್ದರು. ರೈತ ಮುಖಂಡರೋರ್ವರು ಕೇಂದ್ರ ಸರ್ಕಾರದ ವಿಚಾರ ಪ್ರಸ್ತಾವಿಸಿದಾಗ ವಿಷಯಾಂತರವಾಗುವುದು ಬೇಡ ಎಂದು ಕಾರಜೋಳ ಕಿಡಿ ಕಾರಿದರು. ಈ ವೇಳೆ ರೈತರು ಮತ್ತು ಕಾರಜೋಳ ಅವರ ನಡುವೆ ವಾಗ್ವಾದ ನಡೆಯಿತು.

ಬಿಎಸ್‌ವೈ ಕಿಡಿ

ಕುಮಾರಸ್ವಾಮಿ ಅವರು ಬಜೆಟ್‌ನಲ್ಲಿ ಘೋಷಿಸಿರುವಂತೆ 53 ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಬೇಕು. ಕೊಟ್ಟ ಮಾತು ತಪ್ಪಿದಲ್ಲಿ ಹೋರಾಟ ನಡೆಸಲು ರೂಪು ರೇಷೆ ಸಿದ್ದಪಡಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಗುಡುಗಿದ್ದಾರೆ.

No Comments

Leave A Comment