Log In
BREAKING NEWS >
ಕರಾವಳಿಯಲ್ಲಿ ಭಾರೀ ಮಳೆ-ಹಲವೆಡೆಯಲ್ಲಿ ನೆರೆ...ಜೂನ್ 22ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀಅನುಗ್ರಹ ಲಕ್ಷ್ಮೀವೃತ ಕಾರ್ಯಕ್ರಮವು ಜರಗಲಿದೆ....

ಕೊಹ್ಲಿ ಚಾಲೆಂಜ್‌ ಸ್ವೀಕರಿಸಿದ ಮೋದಿ

ಹೊಸದಿಲ್ಲಿ: ಸದೃಢ, ಸ್ವಸ್ಥ ಭಾರತ ನಿರ್ಮಾಣದ ಆಶಯದಡಿ, ಕೇಂದ್ರ ಕ್ರೀಡಾ ಸಚಿವ ರಾಜ್ಯ ವರ್ಧನ್‌ಸಿಂಗ್‌ ರಾಥೋಡ್‌ ಚಾಲನೆಗೊಳಿಸಿರುವ “ಫಿಟ್ನೆಸ್‌ ಚಾಲೆಂಜ್‌’ ಎಂಬ ಟ್ವಿಟರ್‌ ಅಭಿಯಾನ ಎಲ್ಲೆಡೆ ಹೊಸ ಕ್ರೇಜ್‌ ಹುಟ್ಟಿಸಿದೆ. ಈ ಸವಾಲನ್ನು ಪ್ರಧಾನಿ ನರೇಂದ್ರ ಮೋದಿ, ಅವರ ಸಂಪುಟ ಸಚಿವರು ಸಹಿತ ಕ್ರೀಡಾಳುಗಳಾದ ವಿರಾಟ್‌ ಕೊಹ್ಲಿ, ಪಿ.ವಿ. ಸಿಂಧು, ಪಿ.ಟಿ. ಉಷಾ, ಕಲಾವಿದರಾದ ಅಮಿತಾಭ್‌ ಬಚ್ಚನ್‌, ಹೃತಿಕ್‌ ರೋಶನ್‌, ದೀಪಿಕಾ ಪಡುಕೋಣೆ, ಟೈಗರ್‌ ಶ್ರಾಫ್ ಮುಂತಾದ ಘಟಾನುಘಟಿಗಳೇ ಸ್ವೀಕರಿಸಿರುವುದು ಈ ಅಭಿಯಾನವನ್ನು ಮತ್ತಷ್ಟು ಆಕರ್ಷಣೀಯವಾಗಿಸಿದೆ.

ಶ್ರೀಕಾರ ಹಾಕಿದ್ದ ರಾಥೋಡ್‌
“ಫಿಟ್ನೆಸ್‌ ಚಾಲೆಂಜ್‌’ ಹಾಗೂ “ಹಮ್‌ ಫಿಟ್‌ ತೋ ಇಂಡಿಯಾ ಫಿಟ್‌’ ಎಂಬ ಹ್ಯಾಶ್‌ ಟ್ಯಾಗ್‌ ನಡಿ (#fitnesschallenge, HumFitTohIndiaFit) ಸಚಿವ, ಒಲಿಂಪಿಕ್ಸ್‌ ಪದಕ ವಿಜೇತ ರಾಥೋಡ್‌ ಅವರು ಮಂಗಳವಾರ ಈ ಅಭಿಯಾನ ಆರಂಭಿಸಿದ್ದರು. ಈ ಹ್ಯಾಶ್‌ ಟ್ಯಾಗ್‌ ಅಡಿ ತಮ್ಮ ದಿನ ನಿತ್ಯದ ವ್ಯಾಯಾಮದ ವೀಡಿಯೋ ತುಣುಕೊಂದನ್ನು ಅಪ್‌ಲೋಡ್‌ ಮಾಡಿದ್ದಲ್ಲದೆ, ಅದನ್ನು ನಟ ಹೃತಿಕ್‌ ರೋಶನ್‌, ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಹಾಗೂ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರನ್ನು ಟ್ಯಾಗ್‌ ಮಾಡಿ ಟ್ವೀಟ್‌ ಮಾಡಿದ್ದರು. ಹೀಗೆ ಟ್ಯಾಗ್‌ ಮಾಡಲ್ಪಟ್ಟವರು ಈ ಸವಾಲು ಸ್ವೀಕರಿಸಿ, ತಮ್ಮ ವ್ಯಾಯಾಮದ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಬೇಕು ಹಾಗೂ ತಮ್ಮ ಆಯ್ಕೆಯ ಇತರ ಮೂವರಿಗೆ ಈ ಸವಾಲು ರವಾನಿಸಬೇಕು ಎಂಬುದು ಈ ಅಭಿಯಾನದ ಅಲಿಖೀತ ನಿಯಮ.

ದಿಗ್ಗಜರ ಬೆಂಬಲ: ರಾಥೋಡ್‌ ಅವರಿಂದ ಸವಾಲು ಸ್ವೀಕರಿಸಿದ್ದ ಕೊಹ್ಲಿ, ತಮ್ಮ ವ್ಯಾಯಾಮದ ದೃಶ್ಯಾವಳಿಗಳನ್ನು ಅಪ್ಲೋಡ್‌ ಮಾಡಿ ಅನಂತರ, ಈ ಸವಾಲನ್ನು ಪ್ರಧಾನಿ ಮೋದಿ, ತನ್ನ ಪತ್ನಿ ಅನುಷ್ಕಾ ಶರ್ಮಾ ಹಾಗೂ ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿಗೆ ವರ್ಗಾಯಿಸಿದ್ದರು. ಈಗ ಪ್ರಧಾನಿ ಮೋದಿ ಹಾಗೂ ಅನುಷ್ಕಾ ಶರ್ಮಾ ಈ ಸವಾಲು ಸ್ವೀಕರಿಸಿದ್ದಾರೆ. ಸದ್ಯದಲ್ಲೇ ತಮ್ಮ ವ್ಯಾಯಾಮದ ವೀಡಿಯೋ ಹಾಕುವುದಾಗಿ ಮೋದಿ ಟ್ವಿಟರ್‌ನಲ್ಲಿ ಉತ್ತರಿಸಿದ್ದಾರೆ. ಅನುಷ್ಕಾ ಅವರು ವೇಯ್‌r ಲಿಫ್ಟಿಂಗ್‌ ಮಾಡುವ ವೀಡಿಯೋ ಹಾಕಿ ಸವಾಲು ಪೂರ್ಣಗೊಳಿಸಿದ್ದಾರೆ. ಆದರೆ ಧೋನಿ, ಗುರುವಾರ ಸಂಜೆವರೆಗೆ ಇದಕ್ಕೆ ಉತ್ತರಿಸಿಲ್ಲ. ಹೃತಿಕ್‌ ರೋಶನ್‌, ತಾವು ಸೈಕ್ಲಿಂಗ್‌ ಮಾಡಿಕೊಂಡು ಕಚೇರಿಗೆ ಹೋಗುತ್ತಿರುವ ವೀಡಿಯೋ ಹಾಗೂ ನಟಿ ದೀಪಿಕಾ ಪಡುಕೋಣೆ ತಮ್ಮ ಜಾಗಿಂಗ್‌ ವೀಡಿಯೋ ಪ್ರಕಟಿಸಿದ್ದಾರೆ.

ಇವರಲ್ಲದೆ ಅಮಿತಾಭ್‌ ಬಚ್ಚನ್‌, ಪಿ.ಟಿ. ಉಷಾ, ಪಿವಿ ಸಿಂಧು, ಮಿಥಾಲಿ ರಾಜ್‌, ಬಬಿತಾ ಫೋಗಟ್‌, ಕೇಂದ್ರ ಸಚಿವರಾದ ಕಿರಣ್‌ ರಿಜಿಜು, ಡಾ| ಹರ್ಷವರ್ಧನ್‌ ಕೂಡ ಈ ಸವಾಲು ಸ್ವೀಕರಿಸಿದ್ದಾರೆ. ಸಚಿವ ರಾಥೋಡ್‌ ಅವರ ಈ ನಡೆ ಯನ್ನು ಮೆಚ್ಚಿಕೊಂಡಿರುವ ಸಾನಿಯಾ ಮಿರ್ಜಾ, ಈ ಹಿಂದೆ ಯಾವ ಸಚಿವರೂ ಮಾಡದಂಥ ವಿಭಿನ್ನ ಪ್ರಯತ್ನವನ್ನು ರಾಜ್ಯವರ್ಧನ್‌ ಮಾಡಿದ್ದಾರೆ ಎಂದಿದ್ದಾರೆ.

ರಾಹುಲ್‌, ತೇಜಸ್ವಿ “ರಾಜಕೀಯ’ ಸವಾಲು
ಕೊಹ್ಲಿ ಫಿಟ್ನೆಸ್‌ ಸವಾಲು ಸ್ವೀಕರಿಸಿರುವ ಪ್ರಧಾನಿಗೆ ತಮ್ಮದೊಂದು ಸವಾಲು ಎಸೆದಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ನಾಯಕ ರಣದೀಪ್‌ ಸಿಂಗ್‌ ಸುಜೇವಾಲ, ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆಯ ಸವಾಲನ್ನೂ ಸ್ವೀಕರಿಸಿ ಎಂದು ಟಾಂಗ್‌ ನೀಡಿದ್ದಾರೆ. ಲಾಲು ಪುತ್ರ ತೇಜಸ್ವಿ ಯಾದವ್‌, ರೈತರಿಗೆ ಬೆಂಬಲ ಬೆಲೆ, ನಿರುದ್ಯೋಗಿಗಳಿಗೆ ಉದ್ಯೋಗ, ದಲಿತರ, ಅಲ್ಪ ಸಂಖ್ಯಾಕರ ಸುರಕ್ಷೆ ಬಗ್ಗೆ ವಚನ ನೀಡುವ ಸವಾಲನ್ನು ಹಾಕಿದ್ದಾರೆ.

No Comments

Leave A Comment