Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ರಾಜ್ಯದಲ್ಲಿ ಇನ್ನೂ ಮೂರು ದಿನ ಮಳೆಯ ಅಬ್ಬರ

ಬೆಂಗಳೂರು: ರಾಜ್ಯಾದ್ಯಂತ ಭಾನುವಾರ ಕೂಡ ಮಳೆ ಅಬ್ಬರಿಸಿದ್ದು, ಇನ್ನೂ ಎರಡು-ಮೂರು ದಿನಗಳು ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.

ಈ ಮಧ್ಯೆ, ಹಾಸನ ಜಿಲ್ಲೆ ಆಲೂರು ತಾಲೂಕಿನ ಹುಣಸವಳ್ಳಿಯಲ್ಲಿ ಗ್ರಾಪಂ ನೀರುಗಂಟಿ ನಿಂಗರಾಜು (50) ಎಂಬುವರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಹೊಲದಿಂದ ಮನೆಗೆ ತೆರಳುತ್ತಿದ್ದಾಗ ಸಿಡಿಲು ಬಡಿಯಿತು. ಚನ್ನರಾಯಪಟ್ಟಣ ತಾಲೂಕು ಕತ್ತರಿಘಟ್ಟದ ಬಳಿ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಕಾರು ರಸ್ತೆ ಬದಿಯ ಹಳ್ಳಕ್ಕೆ ಉರುಳಿ ನಾಲ್ವರು ಗಾಯಗೊಂಡಿದ್ದಾರೆ.

ಭಾನುವಾರ ಮಧ್ಯಾಹ್ನ ರಾಜಧಾನಿ ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ ಸುರಿದು, ಪ್ರಮುಖ ರಸ್ತೆಗಳು, ಜಂಕ್ಷನ್‌ಗಳು ಮತ್ತು ಅಂಡರ್‌ಪಾಸ್‌ಗಳು ಜಲಾವೃತಗೊಂಡವು. ಇದರಿಂದ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ವಾರಾಂತ್ಯದ ಮಳೆ ರಜಾ-ಮಜಾಕ್ಕೂ ತಣ್ಣೀರೆರಚಿತು. 24 ಗಂಟೆಗಳ ಅವಧಿಯಲ್ಲಿ ನಗರದಲ್ಲಿ 51 ಮಿ.ಮೀ.ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಬಳಿಯ ಐತ್ತೂರಿನಲ್ಲಿ ಕಡಬ- ಸುಬ್ರಹ್ಮಣ್ಯ ರಸ್ತೆಗೆ ಮರ ಮುರಿದು ಬಿದ್ದು, ಅರ್ಧ ತಾಸು ಸಂಚಾರ ಸ್ಥಗಿತಗೊಂಡಿತ್ತು. ವಿದ್ಯುತ್‌ ಲೈನಿಗೂ ಹಾನಿಯಾಗಿದೆ. ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಹಲವೆಡೆ ಭಾನುವಾರ ಸಂಜೆ ಗುಡುಗು ಸಹಿತ ಮಳೆಗೆ ವಿದ್ಯುತ್‌ ಕಂಬ, ತೆಂಗು, ಅಡಿಕೆ ಮರಗಳು ಧರಾಶಾಯಿಯಾಗಿದ್ದು, ಲಕ್ಷಾಂತರ ರೂ.ಗಳ ಹಾನಿ ಸಂಭವಿಸಿದೆ.

ವಾಯುಭಾರ ಕುಸಿತ: ಅರಬ್ಬಿ ಸಮುದ್ರದ ಲಕ್ಷದ್ವೀಪ ಬಳಿ ವಾಯುಭಾರ ಕುಸಿತ ಕಂಡು ಬಂದಿದೆ. ಆದರೆ, ಇದು ರಾಜ್ಯದ ಮೇಲೆ ಅಷ್ಟೇನೂ ಪ್ರಭಾವ ಬೀರದಿದ್ದರೂ ಅಲ್ಪ ಪ್ರಮಾಣದಲ್ಲಿ ಮಳೆ ಸುರಿಸಲಿದೆ. ಅದೇ ರೀತಿ, ಬಂಗಾಳಕೊಲ್ಲಿಯಲ್ಲೂ ಕಡಿಮೆ ಒತ್ತಡದ ತಗ್ಗು ಮತ್ತಿತರ ಬೆಳವಣಿಗೆಗಳು ಕಂಡು ಬರುತ್ತಿವೆ. ಹಾಗಾಗಿ, ಇನ್ನೂ ಎರಡು-ಮೂರು ದಿನ ರಾಜ್ಯದಲ್ಲಿ ಅದರಲ್ಲೂ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಚದುರಿದಂತೆ ಮಳೆಯಾಗುವ ನಿರೀಕ್ಷೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ನಿರ್ದೇಶಕ ಡಾ.ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.

ಸತತ ಎರಡು ದಿನ ಸುರಿದ ಮಳೆಯಿಂದ ರಾಜ್ಯದ ಹಲವು ಕಡೆ ತಾಪಮಾನದಲ್ಲಿ ಇಳಿಮುಖ ಕಂಡು ಬಂದಿದ್ದು, ಬಿಸಿಲಿನ ಧಗೆಯಿಂದ ಕಂಗೆಟ್ಟಿದ್ದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಮೈಸೂರು, ಕಲಬುರಗಿ, ಗದಗ, ವಿಜಯಪುರ, ರಾಯಚೂರು, ಬಳ್ಳಾರಿ, ಮಂಡ್ಯ ಮತ್ತಿತರ ಕಡೆಗಳಲ್ಲಿ ಗರಿಷ್ಠ ಅಥವಾ ಕನಿಷ್ಠ ತಾಪಮಾನವು ಸರಾಸರಿಗಿಂತ 1-2 ಡಿಗ್ರಿ ಕಡಿಮೆಯಾಗಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ತಿಳಿಸಿದೆ.

ಚಿಕ್ಕಬಳ್ಳಾಪುರದಲ್ಲಿ ಗರಿಷ್ಠ ಮಳೆ: ಈ ಮಧ್ಯೆ, ಭಾನುವಾರ ಸಂಜೆವರೆಗೆ ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚು 73.5 ಮಿ.ಮೀ. ಮಳೆ ದಾಖಲಾಗಿದೆ. ಉಳಿದಂತೆ ಉತ್ತರ ಕನ್ನಡದಲ್ಲಿ 66.8 ಮಿ.ಮೀ., ಶಿವಮೊಗ್ಗ ಮತ್ತು ಧಾರವಾಡದಲ್ಲಿ 50, ಮೈಸೂರು 45, ಚಿಕ್ಕಮಗಳೂರು 39.5, ಬಾಗಲಕೋಟೆ ಮತ್ತು ಬೆಳಗಾವಿಯಲ್ಲಿ 23-24, ಹಾವೇರಿ 27, ಮಂಡ್ಯ, ಹಾಸನ, ಗದಗ, ಕೋಲಾರದಲ್ಲಿ 32-34 ಮಿ.ಮೀ. ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.

No Comments

Leave A Comment