Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಅತ್ತಾವರ ನಂದಿಗುಡ್ಡೆ ಸ್ಮಶಾನದಲ್ಲಿ ಕಂಡ ದೃಶ್ಯ ಲೋಬೊ ವಿರುದ್ಧ ವಾಮಾಚಾರ: ಆರೋಪ

ಮಂಗಳೂರು: ನಗರದ ಅತ್ತಾವರ ನಂದಿಗುಡ್ಡೆಯ ಹಿಂದೂ ಸ್ಮಶಾನದಲ್ಲಿ ಗುರುವಾರ ವಾಮಾಚಾರದ ಕುರುಹು ಪತ್ತೆಯಾಗಿದ್ದು, ಶಾಸಕ ಜೆ.ಆರ್.ಲೋಬೊ ವಿರುದ್ಧ ಮಾಟ ಮಂತ್ರ ಪ್ರಯೋಗಿಸಲಾಗಿದೆ ಎಂದು ಕಾಂಗ್ರೆಸ್ಸಿಗರು ಆರೋಪಿಸಿದ್ದಾರೆ.

ಸುಮಾರು 10 ದಿನಗಳ ಹಿಂದೆ ಶಾಸಕ ಲೋಬೊಗೆ ವಾಮಾಚಾರ ಮಾಡಲಾಗಿದೆ ಎಂಬ ಮಾಹಿತಿ ದೊರಕಿದ್ದು, ಇದಕ್ಕಾಗಿ ನಂದಿಗುಡ್ಡೆ ಪರಿಸರದಲ್ಲಿ ಹುಡುಕಾಟ ನಡೆಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಮದ್ಯೆ ಇಂದು ಮಾಟಮಂತ್ರದ ಕುರುಹು ಪತ್ತೆಯಾಗಿದೆ. ಇದನ್ನು ಕಂಡ ಕಾವಲುಗಾರರು ಮತ್ತು ಕೂಲಿಯಾಳುಗಳು ಕಾಂಗ್ರೆಸ್ಸಿಗರ ಗಮನ ಸೆಳೆದಿದ್ದರು. ಅದರಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಅವರೊಂದಿಗೆ ತೆರಳಿ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ವಿಚಾರವಾದಿ ಪ್ರೊ. ನರೇಂದ್ರ ನಾಯಕ್, ‘ಬ್ಲ್ಯಾಕ್ ಮ್ಯಾಜಿಕ್ ಬಗ್ಗೆ ನನಗೆ ಏಪ್ರಿಲ್‌ 23 ರಂದು ಮಾಹಿತಿ ಲಭಿಸಿದ್ದು, ನಾನೂ ಹುಡುಕಾಡಿದ್ದೆ. ಆದರೆ ಯಾವುದೇ ವಸ್ತುಗಳು ಲಭ್ಯವಾಗಿರಲಿಲ್ಲ. ಆದರೆ ಗುರುವಾರ ಮಾಟಮಂತ್ರಕ್ಕೆ ಸಂಬಂಧಿಸಿದಂತೆ ದಾರದಿಂದ ಸುತ್ತಿದ ಗೊಂಬೆ, ಲಿಂಬೆ ಹಣ್ಣುಗಳು ಪತ್ತೆಯಾಗಿವೆ’ ಎಂದು ತಿಳಿಸಿದ್ದಾರೆ.

‘ಈ ಮಾಟಮಂತ್ರಕ್ಕೆ ಸಂಬಂಧಿಸಿದ ವಸ್ತುಗಳನ್ನು ನಾನು ಕಾಲಿನಿಂದ ತುಳಿದಿದ್ದು, ಇದನ್ನು ತುಳಿದರೆ ಏನೂ ಆಗುವುದಿಲ್ಲ ಎಂಬುದರ ಬಗ್ಗೆ ಜನರಲ್ಲಿ ಪ್ರಜ್ಞೆ ಮೂಡಿಸಬೇಕಿದೆ ಎಂಬ ಸಂದೇಶ ರವಾನಿಸುವ ಸಲುವಾಗಿ ಹೀಗೆ ನಡೆದುಕೊಂಡಿದ್ದೇನೆ’ ಎಂದರು.

ಈ ಕುರಿತು ಪ್ರತಿಕ್ರಿಯಿಸಿರುವ ಪಾಲಿಕೆ ಸದಸ್ಯ ಪ್ರಕಾಶ್, ‘ಶಾಸಕರ ಜನಪ್ರಿಯತೆಯನ್ನು ಸಹಿಸಿಕೊಳ್ಳಲಾಗದ ವಿಪಕ್ಷಗಳು ಅಡ್ಡದಾರಿಯ ತಂತ್ರಗಾರಿಕೆ ಮಾಡುತ್ತಿದೆ. ಆದರೆ ಇವುಗಳ ಬಗ್ಗೆ ಜೆ.ಆರ್.ಲೋಬೊ ಅವರಿಗೆ ನಂಬಿಕೆ ಇಲ್ಲ. ನಂದಿಗುಡ್ಡೆ ಸ್ಮಶಾನದ ಅಭಿವೃದ್ಧಿಗೆ ಲೋಬೊ ಶ್ರಮಿಸಿದ್ದು, ಅವರ ಒಳ್ಳೆಯತನವೇ ಅವರನ್ನು ಕಾಪಾಡುತ್ತದೆ’ ಎಂದು ತಿಳಿಸಿದ್ದಾರೆ.

No Comments

Leave A Comment