Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಕೈ ಪಟ್ಟಿ ಫೈನಲ್‌ಗೆ ಸರ್ಕಸ್‌: ಬಾದಾಮಿಯಲ್ಲೂ ಸಿಎಂ ಸ್ಪರ್ಧೆ ಪಕ್ಕಾ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಿರಂತರ ಕಸರತ್ತಿನಲ್ಲಿ ತೊಡಗಿರುವ ಆಡಳಿತಾರೂಢ ಕಾಂಗ್ರೆಸ್‌ ಪಕ್ಷವು ವಯಸ್ಸಿನ ಸಮಸ್ಯೆ, ಅನಾರೋಗ್ಯ ಹಾಗೂ ಗಂಭೀರ ಆರೋಪ ಎದುರಿಸುತ್ತಿರುವ ಆಕಾಂಕ್ಷಿಗಳನ್ನು ಹೊರತುಪಡಿಸಿ ಅಂಬರೀಶ್‌ ಸಹಿತ ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್‌ ನೀಡಲು ನಿರ್ಧರಿಸಿದೆ.

ಹಾಲಿ ಶಾಸಕರಲ್ಲಿ ಮನೋಹರ್‌ ತಹಶೀಲ್ದಾರ್‌ ಹಾಗೂ ಕೆ.ಬಿ. ಕೋಳಿವಾಡ್‌ ಅವರ ಬದಲಿಗೆ ಪುತ್ರರಿಗೆ ಟಿಕೆಟ್‌ ನೀಡುವ ಸಾಧ್ಯತೆ ಇದೆ. ಬಾದಾಮಿ ಕ್ಷೇತ್ರದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರೇ  ಕಣಕ್ಕಿಳಿಯುವ ಸಾಧ್ಯತೆ ಇರು ವುದರಿಂದ ಚಿಮ್ಮನಕಟ್ಟಿಗೆ ಟಿಕೆಟ್‌ ತಪ್ಪಬಹುದು ಎಂದು ಹೇಳಲಾಗಿದೆ. ಶ್ರೀರಾಮುಲು ಸ್ಪರ್ಧೆ ಮಾಡಲಿರುವ ಮೊಳ ಕಾಲ್ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ನಿಂದ ಉಗ್ರಪ್ಪ ಅವರನ್ನು ಕಣ ಕ್ಕಿಳಿಸಲು ತೀರ್ಮಾನಿಸಲಾಗಿದೆ.

ಮೂಲಗಳ ಪ್ರಕಾರ ಮಂಗಳ ವಾರ ಮಧುಸೂಧನ್‌ ಮಿಸ್ತ್ರಿ ನೇತೃತ್ವದ ಸ್ಕ್ರೀನಿಂಗ್‌ ಕಮಿಟಿಯಲ್ಲಿ ಹಾಲಿ ಶಾಸಕರು, ಬೇರೆ ಪಕ್ಷಗಳಿಂದ ವಲಸೆ ಬಂದವರು ಸಹಿತ ಮೊದಲ ಹಂತದಲ್ಲಿ 135 ಅಭ್ಯರ್ಥಿಗಳ  ಪಟ್ಟಿ ಸಿದ್ಧಪಡಿಸಲಾಗಿದೆ. ಎ. 13ರಂದು ಆಸ್ಕರ್‌ ಫೆರ್ನಾಂಡಿಸ್‌ ಅಧ್ಯಕ್ಷತೆಯ ಕೇಂದ್ರ ಚುನಾವಣ ಸಮಿತಿ ಸಭೆ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯಲಿದೆ. ಪಟ್ಟಿ ಅಂತಿಮಗೊಳಿಸಿ ಎ. 13ರ ರಾತ್ರಿ ಅಥವಾ ಎ. 14ರಂದು ಬಿಡುಗಡೆ ಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ, ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಯತ್ನವೂ ನಡೆದಿದ್ದು, ಎಸ್‌.ಎಂ.ಕೃಷ್ಣ ನಿರಾಕರಿಸಿದ್ದಾರೆ.

ಕಾಂಗ್ರೆಸ್‌ “ಫೇಕ್‌ ಲಿಸ್ಟ್‌’
ದಿಲ್ಲಿಯಲ್ಲಿ  ಕಾಂಗ್ರೆಸ್‌ ಸ್ಕ್ರೀನಿಂಗ್‌ ಕಮಿಟಿ ಸಭೆ ನಡೆದ ಬೆನ್ನಲ್ಲೇ ಕೇಂದ್ರ ಚುನಾವಣ ಸಮಿತಿ ಅಧ್ಯಕ್ಷ ಆಸ್ಕರ್‌ ಫೆರ್ನಾಂಡಿಸ್‌ ಅವರ ಸಹಿ ಯುಳ್ಳ 130 ಅಭ್ಯರ್ಥಿಗಳ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ತತ್‌ಕ್ಷಣ ಈ ಬಗ್ಗೆ ಎಐಸಿಸಿ ಸ್ಪಷ್ಟನೆ ನೀಡಿದ್ದು, “ಇನ್ನೂ ಪಟ್ಟಿ ಅಂತಿಮಗೊಂಡಿಲ್ಲ’ ಎಂದಿದೆ.

ಅಭ್ಯರ್ಥಿಗಳ ಪಟ್ಟಿ ಸುದ್ದಿ ವೈರಲ್‌ ಆಗುತ್ತಿರುವಂತೆ ಕಾಂಗ್ರೆಸ್‌ ನಾಯಕರು ಎಚ್ಚೆತ್ತುಕೊಂಡಿದ್ದು, ಅದು ಸುಳ್ಳು, ಎಐಸಿಸಿ ಇನ್ನೂ ಅಭ್ಯರ್ಥಿ ಪಟ್ಟಿಗೆ ಒಪ್ಪಿಗೆ ನೀಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಸುಳ್ಳು ಮಾಹಿತಿಯ ಪಟ್ಟಿ ಎಂದಿದೆ. ಜತೆಗೆ ಸಿಎಂ ಸಿದ್ದರಾಮಯ್ಯ ತತ್‌ಕ್ಷಣ  ಟ್ವೀಟ್‌ ಮಾಡಿ “ಫೇಕ್‌’ ಎಂದು ಸ್ಪಷ್ಟಪಡಿಸಿದರು. ಗೊಂದಲ ಸೃಷ್ಟಿಸಲು ಈ ರೀತಿಯ ಪಟ್ಟಿ ಮಾಡಿ ಹರಿಬಿಡಲಾಗಿದೆ. “ಫೇಕ್‌ ನ್ಯೂಸ್‌ ಫ್ಯಾಕ್ಟರಿ’ಯ ಸುದ್ದಿಗಳಿಗೆ ಆದ್ಯತೆ ನೀಡಬೇಡಿ ಎಂದಿದ್ದಾರೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರೂ ಪತ್ರಿಕಾ ಪ್ರಕಟನೆ ಹೊರಡಿಸಿ, ಕಾಂಗ್ರೆಸ್‌ ಸ್ಕ್ರೀನಿಂಗ್‌ ಕಮಿಟಿ ಸಭೆ ಇನ್ನೂ ನಡೆಯುತ್ತಿದ್ದು, ಪಕ್ಷ ಅಧಿಕೃತವಾಗಿ ಯಾವುದೇ ಪಟ್ಟಿ ಬಿಡುಗಡೆ ಮಾಡಿಲ್ಲ ಎಂದಿದ್ದಾರೆ.

ಮಂಡ್ಯ ಟಿಕೆಟ್‌ ಘೋಷಿಸಲಿ ಮತ್ತೆ ಮಾತನಾಡುವೆ
ಬೆಂಗಳೂರು: ಕಾಂಗ್ರೆಸ್‌ ಹೈಕಮಾಂಡ್‌ ಮಂಡ್ಯ ಟಿಕೆಟ್‌ ಘೋಷಿಸಲಿ. ಆಮೇಲೆ ಸಿಎಂ ಸಿದ್ದರಾಮಯ್ಯ,  ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಬಳಿ ಮಾತ ನಾಡುವುದಾಗಿ ಶಾಸಕ ಅಂಬರೀಶ್‌ ತಿಳಿಸಿದ್ದಾರೆ. ಪತ್ರಕರ್ತರ ಜತೆ ಮಾತನಾಡಿದ ಅವರು, ನನಗೆ ಯಾರೂ, ಯಾವುದೇ ಎಚ್ಚರಿಕೆ ನೀಡಿಲ್ಲ. ಹೈಕಮಾಂಡ್‌ ಬಳಿ ಏನೇನು ಚರ್ಚೆಯಾಗುತ್ತದೆಯೋ ಕಾದು ನೋಡೋಣ ಎಂದರು.
ಈಗ ಚುನಾವಣೆ ಸುಲಭವಲ್ಲ. ನನ್ನ ಆರೋಗ್ಯದ ಬಗ್ಗೆ ಚರ್ಚೆ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಐದು ವರ್ಷಗಳಲ್ಲಿ ಅಮರಾವತಿ ಚಂದ್ರಶೇಖರ್‌ಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕಿತ್ತು. ಆದರೆ ಯಾವುದೇ ಸ್ಥಾನ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮಂಡ್ಯದಲ್ಲಿ ಇರುವ ಏಳು ಕ್ಷೇತ್ರಗಳಲ್ಲಿ ಮಂಡ್ಯ, ಮದ್ದೂರು ಮತ್ತು ಕೆ.ಆರ್‌. ಪೇಟೆ ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳ ಘೋಷಣೆ ಆಗಬೇಕಿದೆ. ಉಳಿದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಗುರು ತಿಸಲಾಗಿದೆ. ಹೀಗಾಗಿ ಐದು ಕ್ಷೇತ್ರ ಗಳಿಗೆ ಟಿಕೆಟ್‌ ಕೇಳಿದ್ದೇನೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎಂದರು.

No Comments

Leave A Comment