Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಚುನಾವಣಾ ಆಯೋಗದಿಂದ ನೋಟಿಸ್‌ ವಾಪಸ್‌

ಮಂಗಳೂರು: ಕಟೀಲು ಮೇಳದ ಯಕ್ಷಗಾನ ಪ್ರದರ್ಶನದ ವೇಳೆ ಹಾಸ್ಯ ಕಲಾವಿದರ ಸಂಭಾಷಣೆ ರಾಜಕೀಯ ಪ್ರೇರಿತವಾಗಿತ್ತು ಎಂಬ ಕಾರಣ ನೀಡಿ ಅವರನ್ನು ಮುಂದಿನ ಪ್ರದರ್ಶನಗಳಿಗೆ ನಿಯೋಜಿಸದಂತೆ ಸೂಚಿಸಿ ಸ್ಥಳೀಯ ಚುನಾವಣಾಧಿಕಾರಿ ಜಾರಿಗೊಳಿಸಿದ್ದ ನೋಟಿಸ್‌ ಅನ್ನು ಆಯೋಗವೇ ವಾಪಸ್‌ ಪಡೆದುಕೊಂಡು ಪ್ರಕರಣ ವನ್ನು ಸುಖಾಂತ್ಯಗೊಳಿಸಿದೆ.

ನೀತಿ ಸಂಹಿತೆ ಉಲ್ಲಂಘನೆ ಎನ್ನಲಾದ ಈ ಸಂಭಾಷಣೆ ವಾಸ್ತವವಾಗಿ ಕಾಸರ ಗೋಡಿನಲ್ಲಿ ನಡೆದ ಯಕ್ಷಗಾನ ಪ್ರದರ್ಶನದ್ದಾಗಿತ್ತು. ಆದರೆ ಇದು ಮೂಡಬಿದಿರೆ ಸಮೀಪದ ಪಡು ಮಾರ್ನಾಡಿನಲ್ಲಿ ನಡೆದಿರುವುದಾಗಿ ಸ್ಥಳೀಯ ಚುನಾವಣಾಧಿಕಾರಿ ತಪ್ಪಾಗಿ ಗ್ರಹಿಸಿ, ಕಲಾ ವಿದರ ವಿರುದ್ಧ ಕಾನೂನು ಕ್ರಮಕ್ಕೆ ನೋಟಿಸ್‌ ನೀಡಿ ದ್ದರು. ಇದು ತಪ್ಪು ಗ್ರಹಿಕೆಯಿಂದ ಆಗಿರುವ ಪ್ರಮಾದ ವಾಗಿರುವುದರಿಂದ ಯಕ್ಷಗಾನ ಕಲಾವಿದರಿಗೆ ನೀಡಿದ್ದ ನೋಟಿಸ್‌ ಅನ್ನು ಚುನಾವಣಾ ಅಧಿಕಾರಿ ಸ್ವತಃ ವಾಪಸ್‌ ಪಡೆದುಕೊಂಡಿದ್ದಾರೆ.

ಘಟನೆಯ ವಿವರ
ಕಟೀಲು ಮೇಳದ ಕಲಾವಿದ ಪೂರ್ಣೇಶ್‌ ಆಚಾರ್ಯ ಅವರು ಮಾ. 24ರಂದು ಕಾಸರಗೋಡು ಜಿಲ್ಲೆಯ ಮಾನ್ಯದಲ್ಲಿ ನಡೆದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನದಲ್ಲಿ ಮಾಲಿನಿ ದೂತನ ಪಾತ್ರ ನಿರ್ವಹಿಸಿದ್ದರು. ಮಾಲಿನಿ ಮತ್ತು ದೂತನ ಮಧ್ಯೆ ನಡೆದ ಸಂಭಾಷಣೆ ವೇಳೆ ದೂತ “ಇವನರ್ವ ಇವನರ್ವ’ ನುಡಿಗಟ್ಟು ಬಳಕೆ ಮಾಡಿ ದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿ ಯಾಗಿತ್ತು. ಕಲಾವಿದನಿಗೆ ಎ. 2ರಂದು ಮೂಡ ಬಿದಿರೆ ಚುನಾವಣಾಧಿಕಾರಿಯವರಿಂದ ನೋಟಿಸ್‌ ಜಾರಿ ಮಾಡಲಾಗಿತ್ತು.

“ಎ. 1ರಂದು ಪಡುಮಾರ್ನಾಡು ಗ್ರಾಮದ ಬನ್ನಡ್ಕ ಎಂಬಲ್ಲಿ ಯಕ್ಷಗಾನ ಕಾರ್ಯಕ್ರಮ ನಡೆದಿದ್ದು, ಅದರಲ್ಲಿ ಪಾಲ್ಗೊಂಡಿದ್ದ ಪೂರ್ಣೇಶ್‌ ಆಚಾರ್ಯ ಅವರು ರಾಜಕೀಯ ಪ್ರೇರಿತ ಶಬ್ದವನ್ನು ಯಕ್ಷಗಾನ ಕಾರ್ಯಕ್ರಮದಲ್ಲಿ ಬಳಸಿರುವುದರಿಂದ ಅವರನ್ನು ಮುಂದಿನ ಯಾವುದೇ ಯಕ್ಷಗಾನ ಕಾರ್ಯಕ್ರಮದಲ್ಲಿ ನಿಯೋಜಿಸಬಾರದು ಎಂದು ಸೂಚಿಸಲಾಗಿದೆ’ ಎಂಬುದಾಗಿ ನೋಟಿಸ್‌ನಲ್ಲಿ ತಿಳಿಸಲಾಗಿತ್ತು. ಸೂಚನೆಯ ಪ್ರತಿಯನ್ನು ಮಾಹಿತಿ ಗಾಗಿ ಮೂಡಬಿದಿರೆ ಪೊಲೀಸ್‌ ಠಾಣೆಯ ವೃತ್ತ ನಿರೀಕ್ಷಕರಿಗೆ, ಸೂಕ್ತ ಕ್ರಮಕ್ಕಾಗಿ ಮಾದರಿ ನೀತಿ ಸಂಹಿತೆ ಅಧಿಕಾರಿಗೆ, ಮೂಡಬಿದಿರೆ, ಮೂಲ್ಕಿ ಮತ್ತು ಪುತ್ತಿಗೆ ಗ್ರಾಮ ಕರಣಿಕರಿಗೆ, ಫ್ಲೈಯಿಂಗ್‌ ಸ್ಕಾ Ìಡ್‌ಗೆ, ವೀಡಿಯೋ ಸಿಡಿ ನೀಡುವಂತೆ ವಿಎಸ್‌ಟಿ ತಂಡ/ ಸೆಕ್ಟರ್‌ ಆಫೀಸರ್‌ಗೆ, ಖರ್ಚು ವೆಚ್ಚ ನಿರ್ವಹಣಾಧಿಕಾರಿಗೆ ಹಾಗೂ ಮೂಡಬಿದಿರೆಯ ಮುಖ್ಯಾಧಿಕಾರಿಗೆ  ಕಳುಹಿಸಲಾಗಿತ್ತು.

ಚುನಾವಣಾ ಆಯೋಗದ ನೋಟಿಸಿನ ಹಿನ್ನೆಲೆ ಯಲ್ಲಿ ಕಟೀಲು ಮೇಳದ ಪ್ರಮುಖರು ಪೂರ್ಣೇಶ್‌ ಅವರಿಗೆ ಸ್ವಲ್ಪ ದಿನ ರಜೆ ಮಾಡುವಂತೆ ಮಂಗಳವಾರ ಸೂಚಿಸಿದ್ದರು. ಇದರಂತೆ ಪೂರ್ಣೇಶ್‌ ಮಂಗಳವಾರ ಯಕ್ಷಗಾನ ಪ್ರದರ್ಶನಲ್ಲಿ ಪಾತ್ರ ನಿರ್ವಹಿಸಿರಲಿಲ್ಲ. ಈ ಮಧ್ಯೆ ಪ್ರಕರಣವು ಸಾಮಾಜಿಕ ಜಾಲತಾಣಗಳ ಮೂಲಕ ಸಾಕಷ್ಟು ಸುದ್ದಿಗೆ ಬಂದ ಹಿನ್ನೆಲೆಯಲ್ಲಿ ಮೂಡಬಿದಿರೆ ಚುನಾವಣಾಧಿಕಾರಿ ಬುಧವಾರ ಕಟೀಲು ಕ್ಷೇತ್ರದ ಆಸ್ರಣ್ಣರು ಹಾಗೂ ಮೇಳದ ಯಜಮಾನರನ್ನು ಆಹ್ವಾನಿಸಿ, ಕಲಾವಿದ ನೀಡಿದ ಸಮಜಾಯಿಷಿ ಬಗ್ಗೆ ಚರ್ಚೆ ನಡೆಸಿದ್ದಾರೆ. ಮಾ. 24ರಂದು ಕಾಸರಗೋಡಿನಲ್ಲಿ ನಡೆದ ಯಕ್ಷಗಾನ ಪ್ರದರ್ಶನದಲ್ಲಿ ಪೂರ್ಣೇಶ್‌ ಭಾಗವಹಿಸಿದ್ದು, ಅಲ್ಲಿ ಈ ಸಂಭಾಷಣೆ ನಡೆದಿರುವ ಬಗ್ಗೆ ಸೂಕ್ತ ಮಾಹಿತಿಯು ಚುನಾವಣಾ ಆಯೋಗಕ್ಕೆ ದೊರೆಯಿತು. ಇದರ ಆಧಾರದಲ್ಲಿ ಕಲಾವಿದನಿಗೆ ನೀಡಿದ ನೋಟಿಸನ್ನು ವಾಪಾಸ್‌ ಪಡೆದು ಪ್ರಕರಣಕ್ಕೆ ಇತಿಶ್ರೀ ಹಾಡಲಾಗಿದೆ. ಬುಧವಾರ ಯಕ್ಷಗಾನ ಪ್ರದರ್ಶನದಲ್ಲಿ ಪೂರ್ಣೇಶ್‌ ಪಾತ್ರ ನಿರ್ವಹಿಸಿದ್ದಾರೆ.

ಯಕ್ಷ ಸಂಗಮ ಖಂಡನೆ
ವಿಷಯ ಪರಾಮರ್ಶೆ ಮಾಡದೆ ಕಲಾವಿದರ ಬಗ್ಗೆ ಏಕಪಕ್ಷೀಯವಾಗಿ ತೀರ್ಮಾನ ಮಾಡುವುದು ಸಲ್ಲದು. ಅಧಿಕಾರಿಗಳ ಎಡವಟ್ಟಿನಿಂದ ಕಲಾವಿದ ಮಾನಸಿಕ ಹಿಂಸೆಗೆ ಒಳಗಾಗಿದ್ದಾರೆ. ಅವರ ತೇಜೋವಧೆ ಆಗಿದೆ. ಇದು ಖಂಡನಾರ್ಹ ಎಂದು ಮೂಡಬಿದಿರೆ ಯಕ್ಷ ಸಂಗಮದ ಸಂಚಾಲಕ ಎಂ. ಶಾಂತಾರಾಮ ಕುಡ್ವ ತಿಳಿಸಿದ್ದಾರೆ.

No Comments

Leave A Comment