Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಕಮಲ ಬೇಗುದಿ; ಯತ್ನಾಳ್‌, ಖೂಬಾ ಬಿಜೆಪಿ ಸೇರ್ಪಡೆ

ಬೆಂಗಳೂರು: ವಿಧಾನ ಪರಿಷತ್‌ ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್‌, ಜೆಡಿಎಸ್‌ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್‌ ಅನ್ವರಿ ಹಾಗೂ ಮಾಜಿ ಸಚಿವ ನಾಗಪ್ಪ ಸಾಲೋಣಿ ಅವರು ಬುಧವಾರ ಬಿಜೆಪಿ ಸೇರ್ಪಡೆಯಾದರು. ಇದರ ಬೆನ್ನಲ್ಲೇ ಯತ್ನಾಳ್‌ ಹಾಗೂ ಖೂಬಾ ಸೇರ್ಪಡೆ ವಿರೋಧಿಸಿ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ.

ಯತ್ನಾಳ್‌ ಸೇರ್ಪಡೆ ವಿರೋಧಿಸಿ ವಿಜಯಪುರ ಕ್ಷೇತ್ರದಿಂದ ಟಿಕೆಟ್‌ ಆಕಾಂಕ್ಷಿಯೂ ಆಗಿರುವ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಬೆಂಬಲಿಗರು ವಿಜಯಪುರದಲ್ಲಿ ತೀವ್ರ ಪ್ರತಿಭಟನೆಗಿಳಿದಿದ್ದಾರೆ. ಓರ್ವ ಬೆಂಬಲಿಗ ವಿಷ ಸೇವಿಸಿ ಅಸ್ವಸ್ಥಗೊಂಡ ಪ್ರಕರಣವೂ ನಡೆದಿದೆ. ಜತೆಗೆ ಅಲ್ಲಿನ ಬಿಜೆಪಿ ಪಾಲಿಕೆ ಸದಸ್ಯರು ಪಕ್ಷದ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದ್ದಾರೆ.

ಮತ್ತೂಂದೆಡೆ ಬಸವಕಲ್ಯಾಣ ಕ್ಷೇತ್ರದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಸೇರ್ಪಡೆಗೂ ವಿರೋಧ ವ್ಯಕ್ತವಾಗಿದೆ. ಬುಧವಾರ ನಗರದಲ್ಲಿರುವ ಬಿಜೆಪಿ ಕಚೇರಿ ಮುಂದೆಯೂ ಅಲ್ಲಿನ ನಾಯಕರು ಪ್ರತಿಭಟನೆ ನಡೆಸಿ ಯಾವುದೇ ಕಾರಣಕ್ಕೂ ಅವರನ್ನು ಸೇರಿಸಿಕೊಳ್ಳಬಾರದು ಎಂದು ಆಗ್ರಹಿಸಿದರು. ಇಪ್ಪತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಅವರ ವಿರುದ್ಧ ಕೆಲಸ ಮಾಡಿದ್ದು, ಇದೀಗ ಅವರ ಜತೆ ನಾವು ಕೆಲಸ ಮಾಡಲು ಸಾಧ್ಯವಿಲ್ಲ. ಪಕ್ಷಕ್ಕೆ ಸೇರಿಸಿಕೊಳ್ಳಿ, ಆದರೆ ಟಿಕೆಟ್‌ ಕೊಡಬೇಡಿ ಎಂದು ಒತ್ತಾಯಿಸಿದರು.

ಜತೆಗೆ, ಇತ್ತೀಚೆಗೆ ಪಕ್ಷ ಸೇರಿರುವ ಎ.ಎಸ್‌.ಪಾಟೀಲ್‌ ನಡಹಳ್ಳಿ ವಿರುದ್ಧವೂ ವಿಜಯಪುರ ಜಿಲ್ಲೆಯಲ್ಲಿ, ಮಾಲೀಕಯ್ಯ ಗುತ್ತೇದಾರ್‌ ವಿರುದ್ಧ ಕಲಬುರಗಿಯಲ್ಲಿ ಪ್ರತಿಭಟನೆ, ಪ್ರತಿರೋಧ ವ್ಯಕ್ತವಾಗುತ್ತಿದೆ. ಬಿಜೆಪಿ ಆಕಾಂಕ್ಷಿಗಳು ಪಕ್ಷ ಬಿಡುವ ಎಚ್ಚರಿಕೆಯನ್ನೂ ನೀಡಿದ್ದು, ಜೆಡಿಎಸ್‌ ಜತೆ ಸಂಪರ್ಕದಲ್ಲಿರುವುದು ಬಿಜೆಪಿ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.

ಸ್ವಾಗತ: ಪ್ರತಿರೋಧದ ನಡುವೆಯೇ ಬಸನಗೌಡ ಪಾಟೀಲ್‌ ಯತ್ನಾಳ್‌, ಮಲ್ಲಿಕಾರ್ಜುನ ಖೂಬಾ ಸೇರಿ ಬಸವರಾಜ ಪಾಟೀಲ್‌ ಅನ್ವರಿ, ಮಾಜಿ ಸಚಿವ ನಾಗಪ್ಪ ಸಾಲೋಣಿ ಅವರನ್ನು ಪಕ್ಷದ ರಾಜ್ಯ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪಕ್ಷದ ಬಾವುಟ ನೀಡಿ ಬರ ಮಾಡಿಕೊಂಡರು.

ಮಾಜಿ ಸಚಿವ ವಿ.ಸೋಮಣ್ಣ, ಶಾಸಕರಾದ ಸಂಗಣ್ಣ ಕರಡಿ, ಮಾನಪ್ಪ ವಜ್ಜಲ್‌ ಮತ್ತಿತರ ನಾಯಕರು ಉಪಸ್ಥಿತರಿದ್ದರು.

ಕಾಂಗ್ರೆಸ್‌ ತೊರೆದಿರುವ ಮಾಲೀಕಯ್ಯ ಗುತ್ತೇದಾರ್‌ ಏ.8 ಅಥವಾ 9ರಂದು ಇನ್ನೂ ಕೆಲ ಕಾಂಗ್ರೆಸ್‌ ಶಾಸಕರೊಂದಿಗೆ ಪಕ್ಷ ಸೇರ್ಪಡೆಯಾಗಲಿದ್ದಾರೆ. ಕಾಂಗ್ರೆಸ್‌, ಜೆಡಿಎಸ್‌ನ ಕೆಲ ಶಾಸಕರು ಸಂಪರ್ಕದಲ್ಲಿದ್ದಾರೆ. ಯತ್ನಾಳ್‌, ಖೂಬಾ ಸೇರಿ ನಾಲ್ವರ ಸೇರ್ಪಡೆಯಿಂದ ಪಕ್ಷಕ್ಕೆ ಆನೆ ಬಲ ಬಂದಿದೆ.
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ

ಖೂಬಾ ಅವರು ಈ ಹಿಂದೆ ಭಾರೀ ಭ್ರಷ್ಟಾಚಾರ ನಡೆಸಿದ್ದು, ಕಾಂಗ್ರೆಸ್‌ಗೆ ನಗರ ಸಭೆ ಅಧ್ಯಕ್ಷ ಸ್ಥಾನ ಸಿಗುವಂತೆ ಮಾಡಿದ್ದಾರೆ. ಲಿಂಗಾಯತ, ಮರಾಠ ಮುಖಂಡರು ಬೆಳೆಯದಂತೆ ನಿರಂತರವಾಗಿ ತಡೆದಿದ್ದಾರೆ. ಬೇರೆ ಯಾರಾದರೂ ಅಭ್ಯರ್ಥಿಯಾದರೆ ಅಭ್ಯಂತರವಿಲ್ಲ. ಖೂಬಾ ಸೇರ್ಪಡೆ ಸರಿಯಲ್ಲ.
– ಸದಸ್ಯ ಕಿರಣ್‌ ಕುಮಾರ್‌ ಕಳ್ಳೂರ, ಬಸವಕಲ್ಯಾಣ ನಗರ ಸಭೆ

ನಾನು ವಿಜಯಪುರದಿಂದ ವಿಧಾನಸಭೆಗೆ ಸ್ಪರ್ಧಿಸಲಿದ್ದು, ಬಸವ ಜಯಂತಿಯಂದು ನಾಮಪತ್ರ ಸಲ್ಲಿಸಲಿದ್ದೇನೆ. ಬಿಜೆಪಿ ಸೇರುವುದನ್ನು ವಿರೋಧಿಸುತ್ತಿರುವವರು ಎಂದೂ ಪಕ್ಷಕ್ಕೆ ದುಡಿದವರಲ್ಲ. ಅವರಿಂದಾಗಿಯೇ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಹಿನ್ನಡೆಯಾಗಿದೆ.
– ಬಸವಗೌಡ ಪಾಟೀಲ್‌ ಯತ್ನಾಳ್‌

ಇಡೀ ದೇಶದಲ್ಲಿ ಬಸವ ಕಲ್ಯಾಣ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಬಿಜೆಪಿ ಸೇರಿದ್ದೇನೆ. ಪಕ್ಷ ಸೇರ್ಪಡೆಗೆ ಐದಾರು ಮಂದಿಯಷ್ಟೇ ವಿರೋಧ ವ್ಯಕ್ತಪಡಿಸುತ್ತಿದ್ದು, ಮುಂದಿನ ದಿನಗಳಲ್ಲಿ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುತ್ತೇನೆ
– ಮಲ್ಲಿಕಾರ್ಜುನ ಖೂಬಾ

No Comments

Leave A Comment