Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಯಡಿಯೂರಪ್ಪ – ಈಶ್ವರಪ್ಪ ಮುನಿಸಿಗೆ ಅಮಿತ್‌ ಶಾ ತೇಪೆ

 • ರಾಜ್ಯ ಬಿಜೆಪಿಯ ಪ್ರಬಲ ನಾಯಕರಾಗಿರುವ ಬಿ.ಎಸ್‌.ಯಡಿಯೂರಪ್ಪ ಮತ್ತು ಕೆ.ಎಸ್‌.ಈಶ್ವರಪ್ಪನವರ ನಡುವಿನ ಮುನಿಸಿಗೆ ತೆರೆ ಎಳೆಯಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸಂಧಾನ ಸಭೆ ನಡೆಸಿ ಒಟ್ಟಾಗಿ ಹೋಗುವಂತೆ ತಾಕೀತು ಮಾಡಿದ್ದಾರೆ.

  ಸೋಮವಾರ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಶಾ, ನಗರದಲ್ಲಿರುವ ಈಶ್ವರಪ್ಪನವರ ಮನೆಯಲ್ಲಿ ರಾತ್ರಿ ಭೋಜನ ಮಾಡಿದರು. ಈ ಭೋಜನಕೂಟದಲ್ಲಿ ಯಡಿಯೂರಪ್ಪ, ಈಶ್ವರಪ್ಪ, ಕೇಂದ್ರ ಸಚಿವ ಅನಂತಕುಮಾರ್‌, ಸಂಸದ ಪ್ರಹ್ಲಾದ್‌ ಜೋಶಿ, ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ್‌ರಾವ್‌, ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಗೌಡ ಮತ್ತು ಜಿಲ್ಲೆಯ ಕೆಲವು ಪ್ರಮುಖ ನಾಯಕರಿದ್ದರು.

  ರಾತ್ರಿ 11.45ಕ್ಕೆ ಶಾ ಆಗಮನವಾಯಿತು. ಅತಿಥಿಗಳು ಮತ್ತು ಈಶ್ವರಪ್ಪ ಕುಟುಂಬದ ಹೊರತಾಗಿ ಇನ್ನಾರಿಗೂ ಪ್ರವೇಶ ಇರಲಿಲ್ಲ.
  ಮಲೆನಾಡಿನ ವಿಶೇಷ ಸಸ್ಯಾಹಾರಿ ಖಾದ್ಯವಿತ್ತು. ಸ್ವತಃ ಈಶ್ವರಪ್ಪ ಕುಟುಂಬದವರೇ ಊಟ ಬಡಿಸಿದರು. ಊಟದ ಬಳಿಕ ಈಶ್ವರಪ್ಪ
  ಮತ್ತು ಯಡಿಯೂರಪ್ಪ ಹೊರತುಪಡಿಸಿ ಉಳಿದವರೆಲ್ಲರನ್ನೂ ಹೊರಗೆ ಕಳುಹಿಸಿದ ಶಾ, ಮುಖಾಮುಖಿ ಸಂಧಾನ ಮಾತುಕತೆ ಆರಂಭಿಸಿದರು. ಇಬ್ಬರು ಒಂದಾದರೆ ಚುನಾವಣೆಯನ್ನು ಸುಲಭವಾಗಿ ಗೆಲ್ಲಬಹುದು ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಯಾವುದೇ ಸಮಸ್ಯೆ ಉದ್ಬವವಾದರೂ ಆಲಿಸುವುದಾಗಿ ಭರವಸೆ ನೀಡಿದರು.

  ಅಮಿತ್‌ ಶಾ ಮಾತಿಗೆ ಇಬ್ಬರು ನಾಯಕರು ಸಮ್ಮತಿ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಒಂದಾಗಿ ಹೋಗುವ ಕುರಿತು ಖಚಿತ ಭರವಸೆ ನೀಡಿದರು ಎನ್ನಲಾಗಿದೆ. ಈ ವೇಳೆ, ಶಿವಮೊಗ್ಗ ಟಿಕೆಟ್‌ ಹಂಚಿಕೆ ಕುರಿತು ಕೂಡ ಪ್ರಸ್ತಾಪವಾಗಿದ್ದು, ಈಶ್ವರಪ್ಪನವರಿಗೆ
  ಟಿಕೆಟ್‌ ಖಚಿತಪಟ್ಟಿದೆ. ಈ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಯಡಿಯೂರಪ್ಪ ಆಪ್ತ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್‌.ರುದ್ರೇಗೌಡ ಅವರಿಗೆ ಬದಲಿ ವ್ಯವಸ್ಥೆ ಕಲ್ಪಿಸುವ ವಿಚಾರ ಕೂಡ ಇಲ್ಲಿ ಪ್ರಸ್ತಾಪವಾಯಿತು ಎನ್ನಲಾಗಿದೆ.

  ಸುಮಾರು ಅರ್ಧ ಗಂಟೆಗಳ ಕಾಲ ಇಬ್ಬರ ಜೊತೆ ಮಾತುಕತೆ ನಡೆಸಿದ ಶಾ ಬಳಿಕ ಹೊರ ಬಂದು ಇಬ್ಬರ ಕೈಯನ್ನು ಒಟ್ಟಿಗೆ ಎತ್ತಿ ಎಲ್ಲರೂ ಒಗ್ಗಟ್ಟಾಗಿರುವ ಕುರಿತು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಟ್ಟರು. ಮಾಧ್ಯಮದವರೊಂದಿಗೆ ಮಾತನಾಡಿ, ಬಿಎಸ್‌ವೈ ನೇತೃತ್ವದಲ್ಲಿಯೇ ಚುನಾವಣೆ ನಡೆಯಲಿದ್ದು, ಒಗ್ಗಟ್ಟಾಗಿ ಕಾಂಗ್ರೆಸ್‌ನ್ನು ಎದುರಿಸಲಿದ್ದೇವೆ ಎಂದರು. ಬಳಿಕ ಶಾ ಸರ್ಕ್ನೂಟ್‌ ಹೌಸ್‌ನತ್ತ ತೆರಳಿದರು. ಯಡಿಯೂರಪ್ಪ ಮತ್ತು ಇತರ ನಾಯಕರು ಶಾ ಜೊತೆ ಹೊರಟರು. ಈಶ್ವರಪ್ಪನವರು ಈ ಬಗ್ಗೆ ಮಾಧ್ಯಮದವರಿಗೆ
  ಯಾವುದೇ ಮಾಹಿತಿ ನೀಡಲು ನಿರಾಕರಿಸಿದರು. ಆದರೆ, ಅವರ ಮುಖದಲ್ಲಿ ಮಂದಹಾಸ ಕಾಣಿಸುತಿತ್ತು.

No Comments

Leave A Comment