Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಪಾತಕಿ ದಾವೂದ್ ಬಗ್ಗೆ ಟಕ್ಲಾ ಬಾಯ್ಬಿಟ್ಟ ಸ್ಫೋಟಕ ಸತ್ಯವೇನು ಗೊತ್ತಾ?

ಮುಂಬಯಿ : 1993ರ ಮುಂಬಯಿ ಬಾಂಬ್‌ ಸ್ಫೋಟಗಳ ಮಾಸ್ಟರ್‌ ಮೈಂಡ್‌ ದಾವೂದ್‌ ಇಬ್ರಾಹಿಂ ಗೆ ಪಾಕಿಸ್ಥಾನದ ಸಂಪೂರ್ಣ ರಕ್ಷಣೆ ಇದೆ ಎಂದು ಭಾರತ ಈ ತನಕವೂ ಹೇಳಿಕೊಂಡು ಬಂದಿರುವುದನ್ನು ಕಳೆದ ವಾರ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂಧಿತನಾದ ದಾವೂದ್‌ ಬಂಟ ಫಾರೂಕ್‌ ಟಕ್ಲಾ ದೃಢೀಕರಿಸಿದ್ದಾನೆ. ಮಾತ್ರವಲ್ಲ ಪಾಕಿಸ್ಥಾನದಲ್ಲಿರುವ  ದಾವೂದ್‌ ಇಬ್ರಾಹಿಂ  ಪೂರ್ಣ ವಿವರಗಳನ್ನು ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ. ಆ ಮಾಹಿತಿಗಳು ಟಕ್ಲಾನ ಮಾತಿನಲ್ಲೇ ಈ ಕೆಳಗಿನಂತಿವೆ :

ದಾವೂದ್‌ ಕರಾಚಿಯ ವಿಲಾಸೀ ಕ್ಲಿಫ್ಟನ್‌ ಪ್ರದೇಶದಲ್ಲಿನ ಬೃಹತ್‌ ಬಂಗಲೆಯಲ್ಲಿ  ತನ್ನ ಕುಟುಂಬದವರೊಂದಿಗೆ ವಾಸವಾಗಿದ್ದಾನೆ. ಆತನ ಈ ಮನೆಗೆ ಪಾಕ್‌ ರೇಂಜರ್‌ಗಳ ಬಿಗಿ ಭದ್ರತೆ, ರಕ್ಷಣೆ ಇದೆ.

ಪಾಕಿಸ್ಥಾನಕ್ಕೆ ವಿದೇಶೀ ವಿವಿಐಪಿ ಗಳು ಭೇಟಿಕೊಡುವ ಸಂದರ್ಭಗಳಲ್ಲಿ ದಾವೂದ್‌ನನ್ನು ಅಂಡಾ ಗ್ರೂಪ್‌ ಆಫ್ ಐಲ್ಯಾಂಡ್‌ ನಿವಾಸಕ್ಕೆ ಅತ್ಯಂತ ಬಿಗಿ ಭದ್ರತೆಯಲ್ಲಿ ಸ್ಥಳಾಂತರಿಸಲಾಗುತ್ತದೆ. ಈ ಪ್ರದೇಶಕ್ಕೆ ದಾವೂದ್‌ ಮತ್ತು ಆತನ ಪತ್ನಿಯನ್ನುಹೊರತುಪಡಿಸಿ ಬೇರೆ ಯಾರಿಗೂ ಪ್ರವೇಶವಿಲ್ಲ. ಇಲ್ಲಿಗೆ ಪಾಕ್‌ ರೇಂಜರ್‌ಗಳ  ಸರ್ಪಗಾವಲು ಇದೆ.

ಅಗತ್ಯ ಬಿದ್ದಾಗೆಲ್ಲ ದಾವೂದ್‌ ಕುಟುಂಬದವರೊಂದಿಗೆ ಸುಲಭದಲ್ಲಿ ಮತ್ತು ಸುರಕ್ಷಿತವಾಗಿ, ಕೇವಲ ಆರು ತಾಸುಗಳ ಒಳಗೆ, ದುಬೈಗೆ ತಲುಪುವ ವ್ಯವಸ್ಥೆಯನ್ನು ಪಾಕ್‌ ಸರಕಾರ ಮಾಡಿದೆ.

ಹಿಂದೊಮ್ಮೆ ದಾವೂದ್‌ ಯುಎಇ ಗೆ ಬಂದಿದ್ದಾಗ ಆತನ ಚಲನವಲನಗಳ ಹೊಣೆಗಾರಿಕೆಯನ್ನು ವಹಿಸಿದ್ದು  ನಾನೇ (ಟಕ್ಲಾ). ನಾನು ದುಬೈಯಲ್ಲಿ  ಅಧಿಕಾರಿಗಳ ಸಹಿತ ಯಾರ ಕಣ್ಣಿಗೂ ಬೀಳದಂತೆ ಸಾಮಾನ್ಯ ಟ್ಯಾಕ್ಸಿ ಚಾಲಕನಾಗಿ ದುಡಿದಿದ್ದೇನೆ. ನನಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ; ದೊಡ್ಡವ ಸ್ನಾತಕೋತ್ತರ ಪದವಿ ಪಡೆದಿದ್ದಾನೆ; ಸಣ್ಣವ ಕಾಮರ್ಸ್‌ ಓದುತ್ತಿದ್ದಾನೆ.

ನನಗೆ ಭಾರತದಲ್ಲೇ ಸಾಯಬೇಕೆಂಬ ಆಸೆ ಇದೆ. ನನ್ನ ಮುದಿ ತಾಯಿ ಅನಾರೋಗ್ಯ ಪೀಡಿತಳಾಗಿದ್ದಾಳೆ.  ಅವಳು ನನ್ನ ಸಹೋದರನ ಜತೆಗೆ ವಾಸಿಸಿಕೊಂಡಿದ್ದಾಳೆ.

ದಾವೂದ್‌ ಇಬ್ರಾಹಿಂ ಗೆ ಪಾಕಿಸ್ಥಾನದಲ್ಲೇ ಕೆಲವು ದುಷ್ಟ ಶಕ್ತಿಗಳಿಂದ ಪ್ರಾಣ ಬೆದರಿಕೆ ಇದೆ. ಸ್ಥಳೀಯ ಗ್ಯಾಂಗ್‌ ಮತ್ತು ಛೋಟಾ ರಾಜನ್‌ನ ಗ್ಯಾಂಗ್‌ ದಾವೂದ್‌ ಹತ್ಯೆಗೆ 2000 ದಿಂದ 2005ರ ನಡುವೆ ಹಲವು ಬಾರಿ ಯತ್ನಿಸಿ ವಿಫ‌ಲವಾಗಿದ್ದವು.

ಭಾರತದ ಅಧಿಕಾರಿಗಳು ಶತ ಪ್ರಯತ್ನ ಮಾಡಿದರೂ ದಾವೂದ್‌ ನನ್ನು ಭಾರತಕ್ಕೆ ತರಲು ಅವರಿಗೆ ಸಾಧ್ಯವಾಗದು. ಆತನಿಗೆ ಅಷ್ಟೊಂದು ಬಿಗಿ ಭದ್ರತೆ, ರಕ್ಷಣೆಯನ್ನು ಪಾಕಿಸ್ಥಾನ ನೀಡಿದೆ.

No Comments

Leave A Comment