Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ದಾವೂದ್‌ ಬಂಟ ಟಕ್ಲಾ ಬಂಧನ

ಮುಂಬಯಿ: ದಾವೂದ್‌ ಇಬ್ರಾಹಿಂನ ಬಂಟ ಫಾರೂಕ್‌ ಟಕ್ಲಾನನ್ನು ದುಬಾೖಯಲ್ಲಿ ಬಂಧಿಸಲಾಗಿದ್ದು, ಗುರುವಾರವೇ ಮುಂಬಯಿಗೆ ಕರೆತರಲಾಗಿದೆ. ಇದನ್ನು ಭಾರತದ ರಾಜತಾಂತ್ರಿಕ ಯಶಸ್ಸು ಎಂದೇ ಹೇಳಲಾಗುತ್ತಿದೆ.

1993ರ ಮುಂಬಯಿ ಸ್ಫೋಟದ ಬಳಿಕ ಫಾರೂಕ್‌ ದುಬಾೖಗೆ ಪರಾರಿಯಾಗಿದ್ದ. ಈತನ ವಿರುದ್ಧ ಈಗಾಗಲೇ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೊಟೀಸ್‌ ಹೊರಡಿಸಿತ್ತು. 57 ವರ್ಷದ ಫಾರೂಕ್‌ ವಿರುದ್ಧ ಕೊಲೆ, ಕೊಲೆ ಯತ್ನ, ಸುಲಿಗೆ ಸಹಿತ ಹಲವು ಆರೋಪಗಳಿವೆ. ಮುಂಬಯಿಯಲ್ಲಿ ಈತನನ್ನು ಸಿಬಿಐ ವಿಚಾರಣೆ ನಡೆಸುತ್ತಿದೆ.

ಹಲವು ಅಪರಾಧಿಗಳು ವಿದೇಶಕ್ಕೆ ತೆರಳಿ ತಲೆ ತಪ್ಪಿಸಿಕೊಂಡಿದ್ದು, ಇವರನ್ನು ಬಂಧಿಸಲು ಭಾರತಕ್ಕೆ ಸಾಧ್ಯವಾಗುತ್ತಿರಲಿಲ್ಲ. ದುಬಾೖ ಹಾಗೂ ಪಾಕಿಸ್ಥಾನದಲ್ಲಿ ಹಲವು ಅಪರಾಧಿಗಳು ತಲೆಮರೆಸಿಕೊಂಡು ಬದುಕುತ್ತಿದ್ದಾರೆ. ಈ  ಹಿಂದೆ ಪೋರ್ಚುಗಲ್‌ನಿಂದ ಅಬು ಸಲೇಂನನ್ನು ಭಾರತಕ್ಕೆ ಕರೆತರಲಾಗಿತ್ತಾದರೂ, ಗಲ್ಲುಶಿಕ್ಷೆ ನೀಡದಂತೆ ಪೋರ್ಚುಗಲ್‌ ಷರತ್ತು ವಿಧಿಸಿತ್ತು. 1993ರ ಮುಂಬಯಿ ದಾಳಿಗೆ ಸಂಬಂಧಿಸಿ ದಾವೂದ್‌ಗೆ ನೆರವಾಗಿದ್ದ ಯಾಕೂಬ್‌ ಮೆಮನ್‌ನನ್ನು ಬಂಧಿಸಿ ಗಲ್ಲಿಗೇರಿಸಲಾಗಿದೆ. ಇನ್ನೊಂದೆಡೆ ಅಬು ಸಲೇಂ ಜೈಲು ಶಿಕ್ಷೆ ಎದುರಿಸುತ್ತಿದ್ದಾನೆ.

ದಾವೂದ್‌ ಇಬ್ರಾಹಿಂ ಭಾರತಕ್ಕೆ ವಾಪಸಾಗಲು ಬಯಸಿದ್ದು, ಕೆಲವು ಷರತ್ತುಗಳನ್ನು ವಿಧಿಸಿದ್ದಾನೆ ಎಂದು 2 ದಿನಗಳ ಹಿಂದಷ್ಟೇ ವಕೀಲ ಶ್ಯಾಮ್‌ ಕೇಶ್ವಾನಿ ಹೇಳಿದ್ದರು. ಮುಂಬಯಿಯಲ್ಲಿರುವ ಆರ್ಥರ್‌ ರೋಡ್‌ ಜೈಲಿನಲ್ಲೇ ಇಡಬೇಕು ಎಂಬುದೂ ಸೇರಿದಂತೆ ಇತರ ಷರತ್ತುಗಳನ್ನು ದಾವೂದ್‌ ವಿಧಿಸಿದ್ದ ಎನ್ನಲಾಗಿತ್ತು. ಈ ಮಧ್ಯೆಯೇ ಫಾರೂಕ್‌ ಟಕ್ಲಾ ಬಂಧನವಾಗಿದ್ದು, ದಾವೂದ್‌ ಗ್ಯಾಂಗ್‌ಗೆ ಭಾರೀ ಆಘಾತ ನೀಡಿದೆ.

ಯಾರು ಈ ಟಕ್ಲಾ?: 1993ರ ಸ್ಫೋಟದ ಅನಂತರ ಈ ಪ್ರಕರಣದ ಆರೋಪಿಗಳು ದುಬಾೖಗೆ ಹಾಗೂ ಅಲ್ಲಿಂದ ಕರಾಚಿಗೆ ಪರಾರಿ ಯಾಗಲು ಈತ ನೆರವಾಗಿದ್ದ. ದಾವೂದ್‌ ಬಂಟರು ಟಕ್ಲಾ ಸಹಾಯದಿಂದಲೇ ಬಾಂಬ್‌ ತಯಾರಿಸುವುದು ಹಾಗೂ ಆತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುವು ದನ್ನು ಕಲಿತಿದ್ದರು ಎನ್ನಲಾಗಿದೆ. ಈತನಿಗೆ ಪಾಕ್‌ ಐಎಸ್‌ಐ ನೆರವಿತ್ತು. ಇದರಿಂದ ದುಬೈ ಮತ್ತು ಕರಾಚಿಗೆ ಯಾವುದೇ ತಪಾಸಣೆ ಇಲ್ಲದೇ ತನ್ನವರನ್ನು ಕಳುಹಿಸಲು ಈತನಿಗೆ ಸಾಧ್ಯವಾಗುತ್ತಿತ್ತು. ಅಲ್ಲದೆ ಅವರ ಪಾಸ್‌ಪೋರ್ಟ್‌ ಮೇಲೆ ಸ್ಟಾಂಪ್‌ ಕೂಡ ಹಾಕುತ್ತಿರಲಿಲ್ಲ. ಇದರಿಂದ ತನಿಖಾಧಿ ಕಾರಿಗಳಿಗೆ ಉಗ್ರರನ್ನು ಪತ್ತೆ ಮಾಡುವುದು ಕಷ್ಟವಾಗುತ್ತಿತ್ತು. ಈತ ಕರಾಚಿಯಲ್ಲಿರುವ ತರಬೇತಿ ಕೇಂದ್ರಕ್ಕೆ ಉಗ್ರರನ್ನು ಕಳುಹಿಸಲು ನೆರವಾಗುತ್ತಿದ್ದ. ಅಷ್ಟೇ ಅಲ್ಲ, ನಂತರ ಅವರನ್ನು ವಾಪಸ್‌ ದುಬೈಗೆ ಕರೆಸಿಕೊಳ್ಳಲೂ ಇವನೇ ಸಹಾಯ ಮಾಡುತ್ತಿದ್ದ.

ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿ ಸಿದಂತೆ ಈತ ಮಹತ್ವದ ಲಿಂಕ್‌ ಆಗಿದ್ದು, ಇವನನ್ನು ಬಂಧಿಸಿದ್ದು ಪ್ರಕರಣ ಬೇಧಿಸಲು ಅನುಕೂಲವಾಗಲಿದೆ. ಯಾಕೆಂದರೆ ಈತನಿಗೆ ಪ್ರಕರಣದ ಸಮಗ್ರ ಮಾಹಿತಿ ಇದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

1990ರಿಂದಲೂ ದುಬೈನಲ್ಲಿ ಹವಾಲಾ ದಂಧೆ ನಡೆಸುತ್ತಿದ್ದ. ದಾವೂದ್‌ನ ಇತರ ಬಂಟಂರಂತೆ ಈತ ನಂತರದಲ್ಲಿ ಕರಾಚಿಗೆ ಪ್ರಯಾಣಿಸದೇ, ದುಬೈನಲ್ಲೇ ವಾಸವಾಗಿದ್ದ. ಮೂಲಗಳ ಪ್ರಕಾರ ಈತನನ್ನು ದುಬೈನಿಂದ ದೆಹಲಿಗೆ ಕರೆಸಿಕೊಂಡು, ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

No Comments

Leave A Comment