Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಈಶಾನ್ಯದಲ್ಲಿ ಎಡ-ಕೈ ಛಿದ್ರ ತ್ರಿಪುರ: ಶೂನ್ಯದಿಂದ ಶಿಖರಕ್ಕೇರಿದ ಬಿಜೆಪಿ

ನವದೆಹಲಿ: ನಾವು ಶೂನ್ಯದಿಂದ ಇಂದು ಶಿಖರವೇರಿದ ಸಾಧನೆ ಮಾಡಿದ್ದೇವೆ… ಮೂರು ಈಶಾನ್ಯ ರಾಜ್ಯಗಳ ಚುನಾವಣಾ ಫ‌ಲಿತಾಂಶ ಹೊರ ಬೀಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಗರಿಸಿದ ಮಾತುಗಳಿವು.

ಒಟ್ಟು ಮೂರರಲ್ಲಿ ಎರಡರಲ್ಲಿ ಗೆದ್ದಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈಶಾನ್ಯ ಭಾಗದಲ್ಲಿ ಬಿಜೆಪಿ ಗೆದ್ದಿರುವುದು ವಾಸ್ತು ಪ್ರಕಾರ ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದ್ದಾರೆ.

ಮತಗಟ್ಟೆ ಸಮೀಕ್ಷೆಗಳು ತ್ರಿಪುರದಲ್ಲಿ ಬಿಜೆಪಿಯೇ ಗೆಲ್ಲುತ್ತೆ ಎಂದು ಭವಿಷ್ಯ ನುಡಿದಿದ್ದ ಹಿನ್ನೆಲೆಯಲ್ಲಿ ಫ‌ಲಿತಾಂಶದ ಮೇಲೆ ತುಸು ಹೆಚ್ಚೇ ಕುತೂಹಲವಿತ್ತು. ಅಲ್ಲದೆ ಶನಿವಾರ ಬೆಳಗ್ಗೆ ಮತ ಎಣಿಕೆ ಆರಂಭ ಮತ್ತು ಮಧ್ಯಾಹ್ನದ ವರೆಗೆ ಬಿಜೆಪಿ-ಎಡ ಪಕ್ಷಗಳ ನಡುವೆ ನೆಕ್‌ ಟುನೆಕ್‌ ಸ್ಪರ್ಧೆ ಇತ್ತು. ಒಂದಂತದಲ್ಲಿ ಬಿಜೆಪಿ ಗಿಂತ ಎಡ ಪಕ್ಷವೇ ಮುಂದೆ ಹೋಗಿತ್ತು.

ಆದರೆ, ಮಧ್ಯಾಹ್ನದ ನಂತರ ಇಡೀ ಚಿತ್ರಣ ಬದಲಾಗಿ ಹೋಯಿತು. 30ರಿಂದ ಏರುತ್ತಲೇ ಹೋದ ಬಿಜೆಪಿಯ ಅಂಕೆ, ಸೀದಾ 44ಕ್ಕೆ ನಿಂತಿತು. ಅಲ್ಲದೆ ಸ್ವತಂತ್ರವಾಗಿಯೇ 35ರಲ್ಲಿ ಗೆಲ್ಲುವ ಮೂಲಕ ಭಾರಿ ಸಾಧನೆ ಮಾಡಿತು. ಅಲ್ಲದೆ ಕಳೆದ ಬಾರಿ 49ರಲ್ಲಿ ಗೆದ್ದಿದ್ದ ಎಡ ಪಕ್ಷಗಳು 16ಕ್ಕೆ ತೃಪ್ತಿಪಟ್ಟು ಕೊಂಡರೆ,10ರಲ್ಲಿ ಗೆದ್ದಿದ್ದ ಕಾಂಗ್ರೆಸ್‌ ಶೂನ್ಯಕ್ಕೆ ಇಳಿಯಿತು.

ಇನ್ನು ನಾಗಾಲ್ಯಾಂಡ್‌ನಲ್ಲೂ ಪ್ರಾದೇಶಿಕ ಪಕ್ಷಗಳ ಕಾರುಬಾರು ತುಸು ಜೋರಾಗಿಯೇ ನಡೆಯಿತು. ಇಲ್ಲಿ ಎನ್‌ಡಿಪಿಪಿ ಮತ್ತು ಎನ್‌ಪಿಎಫ್ ನಡುವೆ ಭರ್ಜರಿ ಪೈಪೋಟಿ ಇದ್ದು,ತಲಾ 29ರಲ್ಲಿ ಗೆದ್ದಿವೆ. ಅಲ್ಲದೆ ಎನ್‌ಡಿಪಿಪಿ ಜತೆಗಿದ್ದ ಬಿಜೆಪಿ,ಹಳೇ ದೋಸ್ತಿ ಎನ್‌ಪಿಎಫ್ ಜತೆ ಹೋಗುವ ಸಾಧ್ಯತೆಗಳೂ ಹೆಚ್ಚಿದ್ದು ಇಲ್ಲೂ ಸರ್ಕಾರ ರಚಿಸುವ ಸಾಧ್ಯತೆಗಳಿವೆ.

ಮೇಘಾಲಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿದ್ದು, ಇಲ್ಲೂ ಬಿಜೆಪಿ ಶೂನ್ಯದಿಂದ ಎರಡು ಸ್ಥಾನಗಳನ್ನುಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ 21ಸ್ಥಾನದಲ್ಲಿ ಗೆದ್ದಿರುವ ಕಾಂಗ್ರೆಸ್‌ ಅತಿ ದೊಡ್ಡ ಪಕ್ಷ. ಆದರೆ ಎನ್‌ ಪಿಪಿ 19ರಲ್ಲಿ ಗೆದ್ದಿದ್ದು, ಬಿಜೆಪಿ ಜತೆ ಸಖ್ಯದಲ್ಲಿದೆ. ಸಣ್ಣ ಪುಟ್ಟ ಪಕ್ಷಗಳನ್ನು ಸೇರಿಸಿಕೊಂಡು ಸರ್ಕಾರ ರಚಿಸುವ ಕಸರತ್ತು ಶುರುವಾಗಿದೆ. ಕಾಂಗ್ರೆಸ್‌ ಕೂಡ ತನ್ನ ನೇತಾರರನ್ನು ಕಳುಹಿಸಿದೆ.

ಕರ್ನಾಟಕದಲ್ಲೂ ನಮ್ಮದೇ ಗೆಲುವು
ತ್ರಿಪುರಾ, ನಾಗಾ ಲ್ಯಾಂಡ್‌ ಮತ್ತು ಮೇಘಾಲಯದಲ್ಲಿ ಗೆಲ್ಲುವ ಮೂಲಕ ಅಮಿತ್‌ ಶಾ ಚುನಾವಣೆ ಗೆಲ್ಲುವ ತಂತ್ರಜ್ಞರಾಗಿದ್ದಾರೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಕರ್ನಾಟಕದಲ್ಲೂ ನಮ್ಮದೇ ಗೆಲುವು ಎಂದು ಭವಿಷ್ಯ ನುಡಿದಿದ್ದಾರೆ.

ಇದನ್ನೇ ತೀರಾ ವ್ಯಂಗ್ಯವಾಗಿ ಹೇಳಿರುವ ಅವರು,ಇತ್ತೀಚೆಗಷ್ಟೇ ಸಿಕ್ಕಿದ್ದ ಪುದುಚೇರಿ ಸಿಎಂ ನಾರಾಯಣ ಸ್ವಾಮಿ ಅವರಿಗೆ ನೀವೊ ಬ್ಬರೇ ಕಾಂಗ್ರೆಸ್‌ ಪಾಲಿಗೆ ಸಿಎಂ ಆಗಿ ಉಳಿಯುತ್ತೀರಿ ಎಂದು ಹೇಳಿದ್ದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಸೋತ ನಂತರ ಪುದುಚೇರಿ ಮತ್ತು ಪಂಜಾಬ್‌ ಉಳಿಯುತ್ತದೆ. ಪಂಜಾಬ್ ಅನ್ನು ಕಾಂಗ್ರೆಸ್‌ ನಮ್ಮದು ಎಂದು ಹೇಳಲ್ಲ. ಹೀಗಾಗಿ ನೀವೊಬ್ಬರೇ ಉಳಿಯುತ್ತೀರಿ ಎಂದರು.

ರಾಹುಲ್‌ರತ್ತಲೂ ಚಾಟಿ ಬೀಸಿದ ಅವರು, ಕೆಲವರು ಹುದ್ದೆಯಲ್ಲಿ ಭಡ್ತಿಪಡೆಯುತ್ತಾರೆ. ಆದರೆ ವ್ಯಕ್ತಿತ್ವದಲ್ಲಿ ಕುಗ್ಗಿ ಹೋಗುತ್ತಾರೆ ಎಂದರು. ತ್ರಿಪುರಾದಲ್ಲಿ ಎಡ ಪಕ್ಷದವರ ಸುಳ್ಳು, ಭಯ ಮತ್ತು ಗೊಂದಲದಿಂದ ಬಳಲುತ್ತಿದ್ದರು. ಆದರೆ ಇದೀಗ ಗೆಲ್ಲುವ ಮೂಲಕ ಅಲ್ಲಿನ ಮತದಾರರು ಎಡಪಕ್ಷಗಳಿಗೆ ಉತ್ತರ ನೀಡಿದ್ದಾರೆ ಎಂದರು.

ಕರ್ನಾಟಕದಿಂದ ಕಾರ್ಯಕರ್ತರ ಹತ್ಯೆ: ಕರ್ನಾಟಕ, ಪಶ್ಚಿಮ ಬಂಗಾಳ, ಕೇರಳಗಳಲ್ಲಿ ಆರು ತಿಂಗಳ ಅವಧಿಯಲ್ಲಿ ಬಿಜೆಪಿಯ ಸಾವಿರಾರು ಮಂದಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ನೇರವಾಗಿ ಹೋರಾಟ ನಡೆಸಲು ಸಾಧ್ಯವಾಗದೆ ನಮ್ಮ ಪ್ರತಿಸ್ಪರ್ಧಿಗಳು ಇಂಥ ಕೃತ್ಯ ಎಸಗಿದ್ದಾರೆ ಎಂದು ಪ್ರಧಾನಿ ಮೋದಿ ಎಡಪಕ್ಷಗಳು ಮತ್ತು ಕಾಂಗ್ರೆಸ್‌ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಅಂಥ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನಾವು ಒತ್ತಾಯಿಸಿದರೆ ಪ್ರತಿಸ್ಪರ್ಧಿಗಳು ಪ್ರತೀಕಾರ ಎಂದು ವಾಗ್ಧಾಳಿ ನಡೆಸುತ್ತಾರೆ ಎಂದು ಟೀಕಿಸಿದರು. ಈ ಫ‌ಲಿತಾಂಶ ಪ್ರತಿಕಾರ ಅಲ್ಲ ಎಂದು ಹೇಳಿದ ಅವರು, ದೇಶದ ಅಭಿವೃದ್ಧಿಗಾಗಿನ ಒಂದು ಹಂತ ಎಂದು ಪ್ರತಿಪಾದಿಸಿದರು.

ಕರ್ನಾಟಕ ದತ್ತ ಸಿದ್ಧರಾಗಿ
ಮೂರರಲ್ಲಿ ಎರಡು ಗೆದ್ದಿರುವುದು ಕಡಿಮೆ ಸಾಧನೆಯೇನಲ್ಲ. ಜನ ನರೇಂದ್ರ ಮೋದಿ ಅವರ ಕೆಲಸವನ್ನು ಮೆಚ್ಚಿ ಮತ ಹಾಕಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಶ್ಲಾಘಿಸಿದ್ದಾರೆ. ಅಲ್ಲದೆ ಈಶಾನ್ಯ ರಾಜ್ಯಗಳಲ್ಲೂ ಬಿಜೆಪಿ ಗೆಲ್ಲುವ ಮೂಲಕ ಇದೀಗ ಪಾನ್‌ ಇಂಡಿಯಾ ಪಕ್ಷವಾಗಿದೆ. ನಮ್ಮ ಸಂಖ್ಯೆ 21ಕ್ಕೆ ಏರಿಕೆಯಾಗಿದೆ ಎಂದೂ ಹೇಳಿದರು.

ಕರ್ನಾಟಕ ನಮ್ಮ ಮುಂದಿನ ಟಾರ್ಗೆಟ್‌ ಆಗಿದೆ. ಇದಾದ ನಂತರ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲೂ ನಾವೇ ಗೆಲ್ಲುತ್ತೇವೆ, ಅಧಿಕಾರ ಹಿಡಿಯುತ್ತೇವೆ ಎಂದು ಹೇಳಿ ದರು. ಈ ಮೂರು ರಾಜ್ಯದ ಫ‌ಲಿತಾಂಶ ಕರ್ನಾಟಕ ಮತ್ತು ಲೋಕ ಸಭೆ ಚುನಾವಣೆಯ ಪ್ರತಿ ಬಿಂಬದಂತಿದೆ. ಅಲ್ಲದೆ ಆಗಿನ ಫ‌ಲಿತಾಂಶದ ಮುನ್ಸೂಚನೆಯನ್ನೂ ನೀಡುತ್ತಿದೆ ಎಂದು ಭವಿಷ್ಯ ನುಡಿದರು. ಈ ಮಧ್ಯೆ ಬಿಜೆಪಿ ಗೆಲುವಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.

ಶೂನ್ಯದಿಂದ ಶಿಖರದ ವರೆಗೆ ಪಕ್ಷ ಸಾಧಿಸಿದ ಸಾಧನೆ ಅನನ್ಯವಾದದ್ದು. ತ್ರಿಪುರಾದಲ್ಲಿ ಐತಿಹಾಸಿಕ ಗೆಲುವು ಖುಷಿ ತಂದಿದೆ. ಕೋಮು ಘರ್ಷಣೆಯಿಂದ ಸಾವನ್ನಪ್ಪಿದ ಬಿಜೆಪಿ ಕಾರ್ಯಕರ್ತರನ್ನು ನಾನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತೇನೆ. ಅವರ ಈ ಧೈರ್ಯದಿಂದಲೇ ಪಕ್ಷ ಈಗ ಈ ಸ್ಥಾನದಲ್ಲಿ ನಿಂತಿದೆ.
– ನರೇಂದ್ರ ಮೋದಿ, ಪ್ರಧಾನಿ

ಈಶಾನ್ಯ ಭಾರತದಲ್ಲಿನ ಈ ಅಭೂತಪೂರ್ವ ವಿಜಯವನ್ನು ಸಂಭ್ರಮಿಸಲು ವಿಜಯೋತ್ಸವವನ್ನು ಬಿಜೆಪಿ ಕಾರ್ಯಕರ್ತರು ದೇಶಾದ್ಯಂತ ಆಚರಿಸಲಿದ್ದಾರೆ. ಓಲೈಕೆ ರಾಜಕಾರಣದ ಬದಲಿಗೆ ಜನರು ಅಭಿವೃದ್ಧಿ ರಾಜಕಾರಣವನ್ನು ಮೆಚ್ಚಿದ್ದರ ಫ‌ಲಿತಾಂಶವೇ ಬಿಜೆಪಿಯ ಈ ಗೆಲುವು.
– ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ 

ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಹಣ ಹಾಗೂ ತೋಳ್ಬಲದಿಂದ ಗೆದ್ದಿದೆ. ಈ ಬಗ್ಗೆ ನಾವು ಸದ್ಯದಲ್ಲೇ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿದ್ದೇವೆ. ಶೇ.45ರಷ್ಟು ಜನರು ಎಡಪಕ್ಷಕ್ಕೆ ಮತ ಹಾಕಿದ್ದು, ಅವರ ಸೇವೆಗೆ ನಾವು ಸದಾ ಸಿದ್ಧರಿದ್ದೇವೆ.
– ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

No Comments

Leave A Comment