Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಆಕಸ್ಮಿಕವಾಗಿ ಬಾತ್‌ ಟಬ್‌ ಗೆ ಬಿದ್ದು ಶ್ರೀದೇವಿ ಸಾವು, ದೇಹದಲ್ಲಿ ಆಲ್ಕೋಹಾಲ್‌ ಪತ್ತೆ: ಫೋರೆನ್ಸಿಕ್ ವರದಿ

ದುಬೈ:  ಕಳೆದ ಶನಿವಾರ ರಾತ್ರಿ ನಿಧನರಾದ ಬಾಲಿವುಡ್ ಮೋಹಕ ತಾರೆ ಶ್ರೀದೇವಿ(54) ಅವರು ಆಕಸ್ಮಿಕವಾಗಿ ಬಾತ್‌ ಟಬ್‌ ಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ದುಬೈನ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ತಿಳಿಸಲಾಗಿದೆ.

ಶ್ರೀದೇವಿ  ಅವರು ಬಾತ್‌ ಟಬ್‌ ನಲ್ಲಿ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿರುವಲ್ಲಿ ಯಾವುದೇ ಕ್ರಿಮಿನಲ್‌ ಉದ್ದೇಶ ಇಲ್ಲ ಮತ್ತು ಆಕೆಯ ದೇಹದಲ್ಲಿ ಆಲ್ಕೋಹಾಲ್ ಪತ್ತೆಯಾಗಿರುವುದಾಗಿ ಫೊರೆನ್ಸಿಕ್‌ ವರದಿ ತಿಳಿಸಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.

ದುಬೈನ ಎಮಿರೇಟ್ಸ್‌ ಟವರ್‌ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಶ್ರೀದೇವಿ ಅವರು ಬಾತ್‌ರೂಮ್‌ಗೆ ತೆರಳಿದಾಗ ಹೃದಯ ಸ್ತಂಭನವಾಗಿದ್ದು, ಬಾತ್‌ಟಬ್‌ಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಫೋರೆನ್ಸಿಕ್ ವರದಿಯಲ್ಲಿ ತಿಳಿಸಲಾಗಿದೆ.

ದುಬೈನ ಜನರಲ್‌ ಡಿಪಾರ್ಟ್‌ಮೆಂಟ್‌ ಆಫ್‌ ಫೋರೆನ್ಸಿಕ್‌ನಲ್ಲಿ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಪಾರ್ಥಿವ ಶರೀರವನ್ನು ಪೊಲೀಸರಿಗೆ ಒಪ್ಪಿಸಿ ಕೆಲವು ದಾಖಲೆಗಳ ತಪಾಸಣೆಯ ನಂತರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು. ಆ ನಂತರ ಶ್ರೀದೇವಿ ಪಾರ್ಥಿವ ಶರೀರವನ್ನು ಭಾರತಕ್ಕೆ ಕರೆತರಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ದುಬೈ ಕಾನೂನಿನ ಪ್ರಕಾರ ಶವ ಪರೀಕ್ಷೆ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕವಷ್ಟೇ ಪಾರ್ಥಿವ ಶರೀರವನ್ನು ಕುಟುಂಬಕ್ಕೆ ನೀಡುವ ವ್ಯವಸ್ಥೆ ಇದೆ.

ದುಬೈನಿಂದ ಶ್ರೀದೇವಿ ಪಾರ್ಥಿವ ಶರೀರವನ್ನು ಅನಿಲ್‌ ಅಂಬಾನಿ ಅವರ ಖಾಸಗಿ ವಿಮಾನದಲ್ಲಿ ಮುಂಬೈಗೆ ಕರೆತರಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಮುಂಬಯಿನಲ್ಲಿ ಅಂತ್ಯಸಂಸ್ಕಾರ ನಡೆಯಲಿದ್ದು, ಚಿತ್ರರಂಗದ ಗಣ್ಯಾತಿಗಣ್ಯರು ಭಾಗಿಯಾಗಲಿದ್ದಾರೆ.

No Comments

Leave A Comment