Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

88ನೇ ಮಹಾಮಸ್ತಕಾಭಿಷೇಕದ ಮೊದಲ ದಿನ ಭಕ್ತಿಯ ಅಭಿಷೇಕದಲ್ಲಿ ಮಿಂದೆದ್ದ ಗೊಮ್ಮಟೇಶ್ವರ

ವಿಂಧ್ಯಗಿರಿ (ಶ್ರವಣಬೆಳಗೊಳ): ಪಶ್ಚಿಮದಲ್ಲಿ ಸೂರ್ಯ ವಿಶ್ರಾಂತಿಗೆ ಅಣಿಯಾಗುವ ಹೊತ್ತು. ಸಂಜೆ ಐದೂ ಮೂವತ್ತು. ಒಮ್ಮೆಗೇ ಹಾಲಿನ ಧಾರೆಗಳು ಜಲಪಾತದಂತೆ ಧುಮ್ಮಿಕ್ಕತೊಡಗಿದವು. ನೀರಧಾರೆಯಡಿ ನಿಂತ ಎಳೆಯ ಬಾಲಕನಂತೆ, ಹಾಲಿನ ಧಾರೆಗಳಡಿ ಸಾವಿರ ವರ್ಷದ ಮಗು.

ಕರ್ನಾಟಕದ ಪ್ರಸಿದ್ಧ ಜೈನಕೇಂದ್ರದಲ್ಲಿ ಶನಿವಾರ ನಡೆದ 88ನೇ ಮಹಾಮಸ್ತಕಾಭಿಷೇಕದ ಮೊದಲ ದಿನದ ದೃಶ್ಯ ವೈಭವವಿದು.

ವಿರಾಗದ ಮೇರುಮೂರ್ತಿಗೆ ಅಭಿಷೇಕ ಪ್ರಾರಂಭವಾದುದು ಮಧ್ಯಾಹ್ನ 2.30ರ ವೇಳೆಗೆ. ಬೆಳಗಿನ ತಂಪು ಹೊತ್ತಿನಿಂದಲೇ ಜನ ಗೊಮ್ಮಟನ ಸನ್ನಿಧಿಯಲ್ಲಿ ಸೇರತೊಡಗಿದ್ದರು. ಮಧ್ಯಾಹ್ನ ಹನ್ನೆರಡರ ವೇಳೆಗೆ ನೆತ್ತಿಯ ಮೇಲಿನ ಸೂರ್ಯ ಕೆಂಡ ಚೆಲ್ಲುತ್ತಿದ್ದ. ಗೊಮ್ಮಟನ ಅಭಿಷೇಕಕ್ಕೆ ಕಾತರದ ಕಂಗಳಲ್ಲಿ ಸೇರಿದ ಆರು ಸಾವಿರಕ್ಕೂ ಹೆಚ್ಚಿನ ಜನಸ್ತೋಮ ಬೆವರಿನ ಅಭಿಷೇಕದಲ್ಲಿ ಸ್ವಯಂ ತೋಯತೊಡಗಿತು.

ಕಳಸಪೂಜೆಯ ಮುನ್ನುಡಿ:  ಬಾಹುಬಲಿ ಪದತಲದ ಅಂಗಳದಲ್ಲಿ 108 ಕಳಶಗಳ ಪೂಜೆಯೊಂದಿಗೆ ಅಭಿಷೇಕ ವಿಧಿಯ ಪೂರ್ವಸಿದ್ಧತೆಗಳು ಪ್ರಾರಂಭವಾದವು.

ರಾಜಸ್ಥಾನದ ಅಶೋಕ್ ಪಾಟ್ನಿ ಪ್ರಥಮ ಕಳಶ ಖರೀದಿಯ ಗೌರವ ಪಡೆದಿದ್ದರು. ರಾಜಪೋಷಾಕಿನಲ್ಲಿದ್ದ ಅವರ ಪರಿವಾರ ಮಂಗಳವಾದ್ಯ–ಮಂತ್ರಘೋಷಗಳ ಮೊಳಗುವಿಕೆಯ ನಡುವೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಕಳಶಪೂಜೆ ನೆರವೇರಿಸಿದರು.

ಗೊಮ್ಮಟನ ಮೇಲೆ ಅಶೋಕ್‌ ಮತ್ತವರ ಪರಿವಾರ ಮೊದಲ ಕಳಶದ ಪವಿತ್ರ ಜಲ ಸುರಿದಾಗ ಮಧ್ಯಾಹ್ನ 2.30. ನೆತ್ತಿಯ ಮೇಲೆ ಧುಮ್ಮಿಕ್ಕಿ ಬಲಗಣ್ಣನ್ನು ತೋಯಿಸಿ ಕುತ್ತಿಗೆಯ ಭಾಗವನ್ನು ನೇವರಿಸುವ ವೇಳೆಗೆ ಮೊದಲ ಕಲಶದ ನೀರು ಶಕ್ತಿಗುಂದಿತ್ತು. ನಂತರ, ಕಳಶ ಖರೀದಿಯ ಗೌರವ ಪಡೆದವರು ಒಬ್ಬರ ಹಿಂದೊಬ್ಬರು ಬೃಹತ್‌ ಮೂರ್ತಿಯ ನೆತ್ತಿಯನ್ನು ತಣಿಸಲು ಪ್ರಯತ್ನಿಸಿದರು. ಸುಮಾರು ಎರಡೂವರೆ ತಾಸುಗಳ ಕಾಲ ಜಲ ಅಭಿಷೇಕದ ಪ್ರಕ್ರಿಯೆ ನಡೆಯಿತು.

ಬಾಹುಬಲಿ ಮೂರ್ತಿಯ ಎದುರಿನ ಪ್ರಾಂಗಣದ ಜಗಲಿಗಳಲ್ಲಿ ಕುಳಿತಿದ್ದ ಮುನಿಗಳು ಹಾಗೂ ಮಾತೆಯರು ಕೂಡ ಭಕ್ತಿಪರವಶರಾಗಿದ್ದರು. ’ಬಾಹುಬಲಿಗೆ ಜೈ’ ಎನ್ನುವ ಜಯಘೋಷಗಳು ಮೊಳಗತೊಡಗಿದವು.

ಮುಖ್ಯಮಂತ್ರಿ ಭಾಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಉಮಾಶ್ರೀ ಹಾಗೂ ಎ. ಮಂಜು ಅಭಿಷೇಕದ ಧಾರೆಗೆ ತಾವೂ ಒಂದೊಂದು ಕೊಡ ಸೇರಿಸಿದರು. ಧರ್ಮಸ್ಥಳದ ಧರ್ಮಾ ಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕೂಡ ಮುಖ್ಯಮಂತ್ರಿ ಪರಿವಾರದ ಜೊತೆಗಿದ್ದರು.

ಬಾಹುಬಲಿಯನ್ನು ವಿವಿಧ ವರ್ಣಗಳಲ್ಲಿ ನೋಡಲು ಹಂಬಲಿಸಿ ಕಾದುಕೂತ ಕೆಲವರು ಕುಳಿತು ದಣಿವಾರಿಸಿಕೊಳ್ಳತೊಡಗಿದರು. ಮಕ್ಕಳು ತೂಕಡಿಸುತ್ತಿದ್ದರು. ಬೆಟ್ಟದ ಮೇಲಿನ ಮೂರ್ತಿಗದು ನೆತ್ತಿ ತಣಿಯುವ ಹೊತ್ತು; ಭಕ್ತಜನಕ್ಕೆ ನೆತ್ತಿ ಸುಡುವಹೊತ್ತು. ಮಹಾಮಸ್ತಕಾಭಿಷೇಕ ಒಂದರ್ಥದಲ್ಲಿ ನೋಡುಗರ, ಭಕ್ತರ ಅಭ್ಯಂಜನವೂ ಹೌದು. ವಿಂಧ್ಯ ಗಿರಿಯ ಏರುದಾರಿಯಲ್ಲಿ ಬೆವರು ಮೈ ತೊಳೆಯುತ್ತದೆ. ಗೊಮ್ಮಟನೆದುರು ಭಕ್ತಿ–ಬೆರಗು ಮನತೊಳೆಯುತ್ತದೆ. ಮೈಮನಗಳೆರಡಕ್ಕೂ ಜಳಕದಪುಳಕ.

ತಿಳಿನೀರಿನ ನಂತರದ ಪಾಳಿ ಎಳನೀರಿನದು. ಆಮೇಲೆ ಕಬ್ಬಿನರಸದ ಸಿಹಿಯ ಸ್ಪರ್ಶ. ಉತ್ಸಾಹದಿಂದ ಉದಾಸೀನಕ್ಕೆ ನಿಧಾನವಾಗಿ ಜಾರುತ್ತಿದ್ದ ಜನರನ್ನು ಒಮ್ಮೆಗೇ ಪರವಶಗೊಳಿಸಿದ್ದು ಹಾಲಿನ ಅಭಿಷೇಕ. ಬಾಹುಬಲಿಯ ಮನಸಿನ ತಿಳಿಯೇ ಬಿಳಿಯಾಗಿ ಮೂಡಿದಂತಿತ್ತು.

ಅಶೋಕ್ ಪಾಟ್ನಿಗೆ ಕಳಶ ಗೌರವ

ಅಭಿಷೇಕದ ಪ್ರಥಮ ಕಳಸದ ಖರೀದಿಯ ಗೌರವವನ್ನು ಪಡೆದ ಅಶೋಕ್ ಪಾಟ್ನಿ, ಕಳೆದ ಮಹಾಮಸ್ತಕಾಭಿಷೇಕದ ಸಮಯದಲ್ಲೂ ಈ ಗೌರವಕ್ಕೆ ಪಾತ್ರರಾಗಿದ್ದರು. ಆಗ, ಪ್ರಧಾನ ಕಳಶಕ್ಕೆ ನೀಡಲಾಗಿದ್ದ 1 ಕೋಟಿ 8 ಲಕ್ಷ ರೂಪಾಯಿ ಮೊತ್ತವನ್ನು ’ಬಾಹುಬಲಿ ಮಕ್ಕಳ ಆಸ್ಪತ್ರೆ’ ನಿರ್ಮಾಣಕ್ಕೆ ಬಳಸಲಾಗಿತ್ತು. ಈ ಬಾರಿಯ ಗೌರವಕ್ಕೆ 11 ಕೋಟಿ 61 ಲಕ್ಷ ರೂಪಾಯಿ ನೀಡಲು ಅಶೋಕ್‌ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ ಚಾರುಕೀರ್ತಿ ಭಟ್ಟಾರಕರು, ಈ ಹಣವನ್ನು 200 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಸ್ಥಾಪನೆಗೆ ಬಳಸಿಕೊಳ್ಳಲು ನಿರ್ಧರಿ
ಸಲಾಗಿದೆ  ಎಂದು ಮಸ್ತಕಾಭಿಷೇಕ ಆರಂಭಕ್ಕೂ ಮುನ್ನ ಪ್ರಕಟಿಸಿದರು.

No Comments

Leave A Comment