Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ: ಉದ್ಯಮಿ ನೀರವ್ ಮೋದಿ ಕಚೇರಿಗಳ ಮೇಲೆ ಇಡಿ ದಾಳಿ!

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿನ ವಂಚನೆ ಬಯಲಿಗೆ ಬಂದ ಬೆನ್ನಲ್ಲೇ ಕೇಂದ್ರದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಖ್ಯಾತ ಉದ್ಯಮಿ ಮತ್ತು ಆಭರಣ ವ್ಯಾಪಾರಿ ನೀರವ್ ಮೋದಿ ಅವರಿಗೆ ಸಂಬಂಧಿಸಿದ  ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ.

ಮೂಲಗಳ ಪ್ರಕಾರ ಉದ್ಯಮಿ ನೀರವ್ ಮೋದಿ ಅವರಿಗೆ ಸಂಬಂಧಿಸಿದ ಸೂರತ್ ನ ಮೂರು, ಮುಂಬೈನ  ನಾಲ್ಕು ಮತ್ತು ದೆಹಲಿಯ 2 ಕಡೆಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪಂಜಾಬ್  ನ್ಯಾಷನಲ್ ಬ್ಯಾಂಕ್ ನಲ್ಲಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ನೀರವ್ ಮೋದಿ ವಿರುದ್ಧ ಸುಮಾರು 11, 300 ಕೋಟಿ ಅಕ್ರಮ ಹಣ ವ್ಯವಹಾರ ಮಾಡಿರುವ ಪ್ರಕರಣ ದಾಖಲಾಗಿದ್ದು, ಪ್ರಸ್ತುತ ಉದ್ಯಮಿ ನೀರವ್  ಮೋದಿ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ನಿನ್ನೆಯಷ್ಟೇ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅವ್ಯವಹಾರ ಕುರಿತು ಮಾಹಿತಿ ಬಹಿರಂಗ ಪಡಿಸಿತ್ತು. ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಮುಂಬೈನ ಕಾಲಾಘೋಡದಲ್ಲಿರುವ ಷೋರೂಂ ಮತ್ತು ಕಚೇರಿ ಸೇರಿದಂತೆ 4  ಪ್ರದೇಶಗಳಲ್ಲಿ ದಾಳಿ ನಡೆಸಿದ್ದು, ಇದಲ್ಲದೆ ಸೂರತ್ ನ ಮೂರು ಮತ್ತು ದೆಹಲಿಯ 2 ಕಡೆಗಳಲ್ಲಿ ದಾಳಿ ನಡೆಸಿದೆ. ದಾಳಿ ವೇಳೆ ಅಧಿಕಾರಿಗಳು ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಶೋಧ ಕಾರ್ಯ  ಮುಂದುವರೆಸಿದ್ದಾರೆ.

ಇನ್ನು ಅಕ್ರಮ ಹಣ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪಿಎನ್ ಬಿ ತನ್ನ 10 ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿ ತನಿಖೆಯನ್ನು ಸಿಬಿಐಗೆ ಶಿಫಾರಸ್ಸು ಮಾಡಿದೆ. ಹಣ ವಂಚನೆ ಪ್ರಕರಣಕ್ಕೆ  ಸಂಬಂಧಿಸಿದಂತೆ ನೀರವ್ ಮೋದಿ ಮತ್ತು ಮೋದಿ ಸಹೋದರ ಹಾಗೂ ಆತನ ಪತ್ನಿ ವಿರುದ್ಧ ಸಿಬಿಐ ನಲ್ಲಿ ಕೇಸ್ ದಾಖಲಿಸಲಾಗಿತ್ತು.  ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ದೂರನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ಮೋದಿ,  ಮೋದಿಯ ಸಹೋದರ ನಿಶಾಲ್ ಹಾಗೂ ಅವರ ಪತ್ನಿ ಮೆಹುಲ್ ಚಿನುಭಾಯ್ ಚೋಕ್ಸಿ ಬ್ಯಾಂಕ್ ಗೆ ಮೋಸ ಮಾಡಿದ್ದು, ಇದರಿಂದ ಬ್ಯಾಂಕ್ ಗೆ ನಷ್ಟ ಉಂಟಾಗಿದೆ ಎಂದು ಬ್ಯಾಂಕ್ ದೂರಿನಲ್ಲಿ ತಿಳಿಸಿದೆ.

No Comments

Leave A Comment