Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಮಲ್ಪೆ : ಸೀ ವಾಕ್‌ವೇ ಉದ್ಘಾಟನೆ

ಮಲ್ಪೆ: ಪಡುಕರೆ ಕಡಲ ಕಿನಾರೆಯನ್ನು ಅತ್ಯಂತ ಸುಂದರ ಬೀಚ್‌ ಆಗಿ ಅಭಿವೃದ್ಧಿಗೊಳಿಸಲಾಗುತ್ತಿದ್ದು, ಈಗಾಗಲೇ 75 ಲಕ್ಷ ರೂ. ವೆಚ್ಚದಲ್ಲಿ ರಸ್ತೆ, ಶೌಚಾಲಯ, ಗಜೇಬೊವನ್ನು ನಿರ್ಮಿಸಲಾಗುತ್ತಿದೆ. ಇಲ್ಲಿನ ಸುಮಾರು ಒಂದೂವರೆ ಕಿ.ಮೀ. ಬೀಚ್‌ಗೆ ಬ್ಲೂ ಫ್ಲಾ ಗ್‌ ಮಾನ್ಯತೆ (ಬೀಚ್‌ ಶುಚಿತ್ವ, ಮೂಲಸೌಕರ್ಯ, ಅಭಿವೃದ್ಧಿಗಾಗಿ ಪಾರಿಸರಿಕ ಶಿಕ್ಷಣ ಪ್ರತಿಷ್ಠಾನ ನೀಡುವ ಮಾನ್ಯತೆ) ಪಡೆಯಲು ಪ್ರಯತ್ನ ನಡೆಸಲಾಗುತ್ತಿದ್ದು, ಅದು ದೊರೆತಲ್ಲಿ ಅಂತಾರಾಷ್ಟ್ರೀಯ ಪ್ರವಾಸಿಗರೂ ಇಲ್ಲಿಗೆ ಬರುವಂತಾಗಿ, ಮುಂದೆ ಭಾರತದ ನಂಬರ್‌ ವನ್‌ ಬೀಚ್‌ ಆಗಲಿದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಶುಕ್ರವಾರ ಅವರು ಮಲ್ಪೆ ಬೀಚ್‌ ಅಭಿವೃದ್ಧಿ ಸಮಿತಿಯ ವತಿಯಿಂದ ಮಲ್ಪೆ ಮೀನುಗಾರಿಕೆ ಬಂದರು ಸಮೀಪದ ಬ್ರೇಕ್‌ ವಾಟರ್‌ ಮೇಲೆ 53.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ “ಸೀ ವಾಕ್‌ವೇ’ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಆದಾಯದ ಮೂಲ
ಮಲ್ಪೆ ಭಾಗದ ಯುವಕರು ಕೇವಲ ಮೀನುಗಾರಿಕೆ ಯನ್ನು ಮಾತ್ರ ಅವಲಂಬಿಸದೆ ಅದರ ಜತೆಗೆ ಪ್ರವಾಸೋದ್ಯಮದಿಂದಲೂ ಆದಾಯಗಳಿಸಿ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಉಡುಪಿಯ ಮಲ್ಪೆಯಲ್ಲಿ ಪ್ರವಾಸೋದ್ಯಮವನ್ನು ಎತ್ತರಕ್ಕೆ ಬೆಳೆಸುವ ಪ್ರಯತ್ನ ಮಾಡಲಾಗುವುದು. ಮಲ್ಪೆ ಬೀಚ್‌, ಪಡುಕರೆ ಬೀಚ್‌, ಸೈಂಟ್‌ ಮೇರೀಸ್‌ ದ್ವೀಪ, ಸೀವಾಕ್‌ವೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

ವಾಹನಗಳಿಗೆ ಪ್ರವೇಶ ಇಲ್ಲ
ಸೀವಾಕ್‌ ಕೇವಲ ನಡೆದಾಡುವುದಕ್ಕೆ ಮಾತ್ರ; ಬೈಕ್‌ ಅಥವಾ ಇನ್ನಿತರ ವಾಹನಗಳಿಗೆ ಇಲ್ಲಿ ಪ್ರವೇಶ ಇಲ್ಲ. ಸೀವಾಕ್‌ನೊಳಕ್ಕೆ ವಾಹನ ಚಲಾಯಿಸಿದಲ್ಲಿ ಮುಟ್ಟು ಗೋಲು ಹಾಕಿ ಕೊಳ್ಳಲಾಗುವುದು ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಜಿಲ್ಲಾ ಎಸ್‌ಪಿ ಲಕ್ಷ್ಮಣ್‌ ನಿಂಬರ್ಗಿ, ಜಿ.ಪಂ. ಸಿಇಒ ಶಿವಾನಂದ ಕಾಪಶಿ, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಹಾರ್ಮಿಸ್‌ ನೊರೊನ್ಹಾ, ಅರುಣ್‌ ಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕರೆ, ನಗರಸಭಾ ಸದಸ್ಯ ಜನಾರ್ದನ ಭಂಡಾರ್ಕರ್‌,  ಸುದೇಶ್‌ ಶೆಟ್ಟಿ, ಸಂತೋಷ್‌ ಸಾಲ್ಯಾನ್‌, ಸತೀಶ್‌ ಸುವರ್ಣ ಬಾಪುತೋಟ, ರಾಘವ ಕರ್ಕೇರ, ಗೋವರ್ಧನ ಅಮೀನ್‌ ಉಪಸ್ಥಿತರಿದ್ದರು.ಪೌರಾಯುಕ್ತ ಡಿ. ಮಂಜುನಾಥಯ್ಯ ಸ್ವಾಗತಿಸಿದರು. ವಿಲ್ಫೆಡ್‌ ಡಿ’ಸೋಜಾ ವಂದಿಸಿದರು.

ರಾಜ್ಯದ ಪ್ರಥಮ, ದೇಶದ ದ್ವಿತೀಯ
ಸೀ ವಾಕ್‌ವೇ ನೆರೆಯ ರಾಜ್ಯ ಕೇರಳದ ಕೋಯಿ ಕ್ಕೋಡ್‌ನ‌ ಬೇಪೊರ್‌ ಬೀಚ್‌ನಲ್ಲಿದೆ. ಹೀಗಾಗಿ ಮಲ್ಪೆ  ಸೀ ವಾಕ್‌ವೇ ಕರ್ನಾಟಕಕ್ಕೆ ಮೊದಲನೆಯದು, ದೇಶದಲ್ಲಿ ಎರಡನೆಯದು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಸುಮಾರು 480 ಮೀ. ಉದ್ದ, ಮೂರು ಮೀ. ಅಗಲದಲ್ಲಿ ಸಮುದ್ರಕ್ಕೆ ವಿಸ್ತರಿಸಿರುವ ಈ ವಾಕ್‌ ವೇಯನ್ನು ಬ್ರೇಕ್‌ವಾಟರ್‌ ಮೇಲೆ ನಿರ್ಮಿಸ ಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಎರಡೂ ಬದಿ ಕಲ್ಲಿನ ಗೋಡೆ ಇದೆ. ವಾಕ್‌ವೇ ಮೇಲೆ ಕುಳಿತು ಕೊಳ್ಳಲು ಬೆಂಚಿನ ವ್ಯವಸ್ಥೆ ಇದೆ, 35 ಆಲಂಕಾರಿಕ ದೀಪಗಳನ್ನು ಅಳವಡಿಸಲಾಗಿದೆ. ಪ್ರವಾಸಿಗರಿಗೆ, ವಾಯು ವಿಹಾರಿಗಳಿಗೆ ಅತ್ಯಂತ ಸುಂದರ ಅನುಭವ ನೀಡಲಿದೆ. ವಾಕ್‌ ವೇ ತುತ್ತ ತುದಿಯಲ್ಲಿ ನಿಂತರೆ ಸೈಂಟ್‌ ಮೇರೀಸ್‌, ದರಿಯಗಡ್‌ ಮತ್ತು ಲೈಟ್‌ಹೌಸ್‌ -ಈ ಮೂರು ದ್ವೀಪಗಳನ್ನು ಏಕಕಾಲದಲ್ಲಿ ವೀಕ್ಷಿಸಬಹುದಾಗಿದೆ.

No Comments

Leave A Comment